

ಮುಂಬೈ: ಅಕ್ಷಯ್ ಕುಮಾರ್ ಅಭಿನಯದ 'ಲಕ್ಷ್ಮೀ ಬಾಂಬ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಟ್ರೇಲರ್ ನೋಡಿ ಹಲವು ಸೆಲೆಬ್ರಿಟಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆ ಸಾಲಿಗೆ ಆಮೀರ್ ಖಾನ್ ಸಹ ಸೇರಿಕೊಂಡಿದ್ದಾರೆ.
ಸಾಮಾನ್ಯವಾಗಿ ಆಮೀರ್ ಖಾನ್ ಹೆಚ್ಚು ಮಾತನಾಡುವುದಿಲ್ಲ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಂತೂ ಅವರು ಇದ್ದೂ ಇಲ್ಲದ ಹಾಗಿದ್ದಾರೆ. ಹೀಗಿರುವಾಗ ಅವರು 'ಲಕ್ಷ್ಮೀ ಬಾಂಬ್' ಟ್ರೇಲರ್ ನೋಡಿ ಒಂದಿಷ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಅದೊಂದು ಸೂಪರ್ಬ್ ಟ್ರೇಲರ್. ಚಿತ್ರ ನೋಡುವುದಕ್ಕೆ ತುದಿಗಾಲಲ್ಲಿ ಕಾಯುತ್ತಿದ್ದೇನೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದರೆ ಬಹಳ ಚೆನ್ನಾಗಿರುತಿತ್ತು. ನಿಮ್ಮ ಅಭಿನಯ ಅದ್ಭುತವಾಗಿದೆ' ಎಂದು ಅವರು ಹೇಳಿದ್ದಾರೆ.
ಆಮೀರ್ ಖಾನ್ ಅವರ ಈ ನಡೆಯಿಂದ ಅಕ್ಷಯ್ ಬಹಳ ಖುಷಿಯಾಗಿದ್ದು, ಟ್ವೀಟ್ ಮೂಲಕವೇ ಧನ್ಯವಾದಗಳನ್ನು ತಿಳಿಸಿದ್ದಾರೆ. 'ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು. ನಿಮ್ಮ ಸಹಕಾರ ಮತ್ತು ಪ್ರೋತ್ಸಾಹ ಇಂತಹ ಸಂದರ್ಭಗಳಲ್ಲಿ ಬಹಳ ದೊಡ್ಡದು. ಮನಸ್ಸು ತುಂಬಿಬಂದಿದೆ' ಎಂದು ಅವರು ಹೇಳಿಕೊಂಡಿದ್ದಾರೆ.
'ಲಕ್ಷ್ಮೀ ಬಾಂಬ್' ಚಿತ್ರವು ತಮಿಳಿನ 'ಮುನಿ' ಚಿತ್ರದ ರೀಮೇಕ್ ಆಗಿದ್ದು, ಈ ಚಿತ್ರವನ್ನು ರಾಘವ ಲಾರೆನ್ಸ್ ನಿರ್ದೇಶನ ಮಾಡಿದ್ದಾರೆ. ಸದ್ಯ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರವು ನವೆಂಬರ್ 9ರಂದು ಡಿಸ್ನಿ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗಲಿದೆ.