

ಬೆಂಗಳೂರು: ಒಂದು ಕಾಲಕ್ಕೆ ಥ್ರಿಲ್ಲರ್ ಮಂಜು ಅಭಿನಯದ ಮತ್ತು ನಿರ್ದೇಶನದ ಚಿತ್ರಗಳೆಂದರೆ ಕನ್ನಡ ಚಿತ್ರರಂಗದಲ್ಲಿ ಬಹಳ ಬೇಡಿಕೆ. ಇತ್ತೀಚಿನ ವರ್ಷಗಳಲ್ಲಿ ನಟನೆ ಮತ್ತು ಅಭಿನಯದಿಂದ ಹಿಂದೆ ಸರಿದಿರುವ ಮಂಜು, ಕೆಲವು ಚಿತ್ರಗಳ ಸಾಹಸ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಬಹಳ ದಿನಗಳ ನಂತರ ಅವರು 'ಆ ರಹಸ್ಯ' ಎಂಬ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಮಂಡ್ಯ ನಾಗರಾಜ್ ಈಗ ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ ಮೂಲಕ ವಾಪಸ್ಸಾಗಿದ್ದಾರೆ. ’ಆ ರಹಸ್ಯ’ ಚಿತ್ರಕ್ಕೆ ಕಥೆ,ಚಿತ್ರಕಥೆ ಬರೆಯುವುದರ ಜತೆಗೆ, ಒಂದು ಹಾಡಿಗೆ ಸಾಹಿತ್ಯ ಮತ್ತು ಕಂಠದಾನ ಮಾಡಿದ್ದು ಅಲ್ಲದೆ ಶ್ರೀ ಶಿವಶಂಕರ ಸಿನಿ ಪ್ರೊಡಕ್ಷನ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ. ಭೀಮಣ್ಣನಾಯಕ್ ಪ್ರಮುಖ ಪಾತ್ರದಲ್ಲಿ ನಟಿಸುವ ಜತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ.
ಇತ್ತೀಚೆಗೆ ಈ ಚಿತ್ರ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಶಾಸಕ ರಾಜಾವೆಂಕಟಪ್ಪ ನಾಯಕ್, ವಾಲ್ಮೀಕಿ ಗುರುಪೀಠದ ಶ್ರೀ ವರ್ದಾನಂದ ಸ್ವಾಮಿಗಳು, ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಎಸ್.ಎ.ಚಿನ್ನೆಗೌಡ ಮುಂತಾದವರು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.
ಮೊದಲೇ ಹೇಳಿದಂತೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಊರಲ್ಲಿ ಒಬ್ಬ ವ್ಯಕ್ತಿ ಕಾಣೆಯಾಗುತ್ತಾನೆ. ಮತ್ತೊಂದು ಕಡೆ ಊರಿನ ಮುಖಂಡ ಹೆಣವನ್ನು ಅವರ ತೋಟದಲ್ಲಿ ಹೂತು ಹಾಕುತ್ತಾರೆ. ಕಾಣೆಯಾಗಿರುವವನು ಯಾರು? ಹೂತು ಹಾಕಿರುವ ಹೆಣ ಯಾವುದು? ಇಂತಹ ಗೊಂದಲದ ಸುತ್ತ ಕಥೆಯು ನಡೆಯುತ್ತದೆ. ಪೋಲೀಸರು ಬಂದು ನೋಡಿದಾಗ ಗುಂಡಿಯಲ್ಲಿ ಹೆಣ ಇರುವುದಿಲ್ಲ. ಅದು ಏನಾಯ್ತು? ಸತ್ತವನು ಯಾರು? ಮುಂತಾದ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದ್ದರೆ, 'ಆ ರಹಸ್ಯ' ಚಿತ್ರವನ್ನು ನೋಡಬೇಕು. ಒಟ್ಟಾರೆ, ಯಾರೇ ತಪ್ಪು ಮಾಡಿದರೂ ಪ್ರಾಯಶ್ಚಿತ ಕಟ್ಟಿಟ್ಟ ಬುತ್ತಿ ಎಂಬ ಸಂದೇಶವನ್ನು ಈ ಚಿತ್ರದಲ್ಲಿ ಹೇಳಲಾಗಿದೆ.
ಥ್ರಿಲ್ಲರ್ ಮಂಜುಗೆ ನಾಯಕಿಯಾಗಿ ಅನುಶೆಟ್ಟಿ ನಟಿಸಿದ್ದು, ಮಿಕ್ಕಂತೆ ಮಂಡ್ಯ ಸತ್ಯ, ಅರ್ಪಣಾ, ಜಗನ್ನಾಥ ಶೆಟ್ಟಿ, ಪ್ರಿಯಾಂಕಾ ಮುಂತಾದವರು ನಟಿಸಿದ್ದಾರೆ. ಎರಡು ಹಾಡುಗಳಿಗೆ ಕುಮಾರ್ ಈಶ್ವರ್ ಸಂಗೀತ ಸಂಯೋಜಿಸಿದ್ದಾರೆ. ವಿಮಲ್-ದಿಲೀಪ್ ಛಾಯಾಗ್ರಹಣವಿರುವ ಈ ಚಿತ್ರವನ್ನು ಮಂಡ್ಯ, ಶ್ರೀರಂಗಪಟ್ಟಣ, ಹೂಸಗೂರು, ಬನ್ನೂರು ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಡಿಸೆಂಬರ್ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.