'ಆ ಕರಾಳ ರಾತ್ರಿ' ನೋಡಿದ್ದಾಯ್ತು ... ಇದೀಗ ಓದಬಹುದು ...

Aa Karala Ratri - Final
Published on

ದಯಾಳ್​ ನಿರ್ದೇಶನದ ಮಹತ್ವಾಕಾಂಕ್ಷೆಯ ಚಿತ್ರ ಎಂದರೆ, ಅದು 'ಆ ಕರಾಳ ರಾತ್ರಿ'. ಈ ಚಿತ್ರದಿಂದ ದಯಾಳ್​ ಖ್ಯಾತಿ-ಅಪಖ್ಯಾತಿ ಎಲ್ಲವನ್ನೂ ನೋಡಿದ್ದಾರೆ. ಈ ಚಿತ್ರ ಬಿಡುಗಡೆಯಾಗಿ ಇದೀಗ ಎರಡು ವರ್ಷಗಳಾಗಿವೆ.

ಈ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ, 'ಆ ಕರಾಳ ರಾತ್ರಿ'ಯ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಅವರು ಪುಸ್ತಕ ರೂಪದಲ್ಲಿ ತಂದಿದ್ದಾರೆ. ಈಗಾಗಲೇ ಆ ಪುಸ್ತಕವನ್ನು ಅವರು ಫೇಸ್​ಬುಕ್​ ಮತ್ತು ಇನ್​ಸ್ಟಾದಲ್ಲಿ ಇಂದು ಸಂಜೆ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.

'ಆ ಕರಾಳ ರಾತ್ರಿ', ಮೋಹನ್​ ಹಬ್ಬು ಅವರ ಅದೇ ಹೆಸರಿನ ನಾಟಕವನ್ನಾಧರಿಸಿದೆ. ಆ ನಾಟಕವನ್ನಾಧರಿಸಿ, ದಯಾಳ್​ ಮತ್ತು ನವೀನ್​ ಕೃಷ್ಣ ಸೇರಿ ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದಾರೆ. ಈಗ ಈ ಪುಸ್ತಕದಲ್ಲಿ ಮೋಹನ್​ ಹಬ್ಬು ಅವರ ನಾಟಕದ ಜತೆಗೆ, ಚಿತ್ರಕಥೆ ಮತ್ತು ಸಂಭಾಷಣೆ ಸಹ ಇರುತ್ತದೆ.

ಈ ಕುರಿತು 'ವಿಜಯವಾಣಿ' ಜತೆಗೆ ಮಾತನಾಡಿದ ದಯಾಳ್​, ''ಆ ಕರಾಳ ರಾತ್ರಿ'ಯ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಪುಸ್ತಕ ರೂಪದಲ್ಲಿ ತರಬೇಕು ಎಂಬ ಯೋಚನೆ ಬಹಳ ದಿನಗಳಿಂದ ಇತ್ತು. ಈಗ ಚಿತ್ರ ಬಿಡುಗಡೆಯಾಗಿ ಎರಡು ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಇಂದು ಅಧಿಕೃತವಾಗಿ ಬಿಡುಗಡೆಯಾಗಿದೆ. ಮೋಹನ್​ ಹಬ್ಬು ಅವರೇ ಈ ಪುಸ್ತಕವನ್ನು ಪ್ರಕಟಿಸಿದ್ದಾರೆ. ಇಂದಿನಿಂದ ಆನ್​ಲೈನ್​ನಲ್ಲಿ ಪುಸ್ತಕ ಸಿಗಲಿದೆ' ಎನ್ನುತ್ತಾರೆ ದಯಾಳ್​.

'ಆ ಕರಾಳ ರಾತ್ರಿ' ಕಥೆಯು ಇಂಗ್ಲೀಷ್​ ಕವಿ ಮತ್ತು ನಾಟಕಕಾರ ರೂಪರ್ಟ್​ ಬ್ರೂಕ್​ ಬರೆದು 'ಲಿಥುನಿಯಾ' ಎಂಬ ಏಕಾಂಕ ನಾಟಕದ ಕನ್ನಡ ರೂಪಾಂತರ. ಈ ನಾಟಕ ಸುಮಾರು 40 ನಿಮಿಷಗಳ ಅವಧಿಯದ್ದಾಗಿದ್ದು, ಈಗ ಅದೇ ನಾಟಕವನ್ನು ದಯಾಳ್​ ಅವರು ಒಂದೂ ಮುಕ್ಕಾಲು ಗಂಟೆಯ ಚಿತ್ರವನ್ನಾಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net