'ಚಡ್ಡಿ ದೋಸ್ತ್' ಸಿನಿಮಾ ನೋಡಿ ಗೋಲ್ಡ್ ಕಾಯಿನ್ ಗೆಲ್ಲಿ ...

Chaddi Dost Kaddi Alladisbitta - Final
Published on

ಬೆಂಗಳೂರು: ರೆಡ್ ಅಂಡ್‌ ವೈಟ್ ಸೆವೆನ್ ರಾಜ್‌ ನಿರ್ಮಾಣದ 'ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ' ಚಿತ್ರವು ಕಳೆದ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಚಿತ್ರವನ್ನು ಇನ್ನೂ ಹೆಚ್ಚುಹೆಚ್ಚು ಜನ ನೋಡಲಿ ಎಂಬ ದೃಷ್ಟಿಯಿಂದ ಚಿತ್ರತಂಡದವರು ಒಂದು ಆಫರ್​ ಇಟ್ಟಿದ್ದಾರೆ. ವೀರೇಶ್ ಚಿತ್ರಮಂದಿರದಲ್ಲಿ ಚಿತ್ರ ನೋಡುವುದಕ್ಕೆ ಬರುವ ಕನ್ನಡ ಅಭಿಮಾನಿಗಳಿಗೆ ಅರ್ಧ ಗ್ರಾಮ್ ಗೋಲ್ಡ್ ಕಾಯಿನ್ ಕೊಡುವುದಕ್ಕೆ ನಿರ್ಧರಿಸಿದ್ದಾರೆ.

ಈ ವಿಷಯವನ್ನು ಸ್ವತಃ ಚಿತ್ರತಂಡದವರೇ ಹೇಳಿಕೊಂಡಿದ್ದಾರೆ. ಚಿತ್ರ ಬಿಡುಗಡೆಯಾದ ನಾಲ್ಕನೇ ದಿನ, ತಂಡದವರು ಪತ್ರಿಕಾಗೋಷ್ಠಿ ಆಯೋಜಿಸಿ, ಅಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ನಿರ್ಮಾಪಕ ಸೆವೆನ್​ ರಾಜ್​, 'ಚಿತ್ರ ನಿರ್ಮಿಸಬೇಕೆಂಬ ಕನಸು, ಇದರಿಂದ ನನಸಾಗಿದೆ. ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಿಗೆ ಹೋಲಿಸಿದರೆ, ವೀರೇಶ ಚಿತ್ರಮಂದಿರದಲ್ಲಿ ಉತ್ತಮ ಕಲೆಕ್ಷನ್ ಬರ್ತಿದೆ. ಹಾಗಾಗಿ, ನಮ್ಮ ಸಿನಿಮಾ ನೋಡಲು ಬರುವ ಕನ್ನಡ ಅಭಿಮಾನಿಗಳಿಗೆ ವೀರೇಶ್ ಚಿತ್ರಮಂದಿರದಲ್ಲಿ ಅರ್ಧ ಗ್ರಾಮ್ ಗೋಲ್ಡ್ ಕಾಯಿನ್ ಕೊಡಲಿದ್ದೇವೆ. ಪ್ರತಿ ಷೋ ನೋಡಲು ಬರುವ, ಡ್ರಾ ಮೂಲಕ ಆಯ್ಕೆಯಾದ ಒಬ್ಬ ವಿಜೇತ ಪ್ರೇಕ್ಷಕನಿಗೆ ಬಂಗಾರದ ನಾಣ್ಯದ ಬಹುಮಾನವಿರುತ್ತದೆ' ಎಂದು ಹೇಳಿದರು.

ನಿರ್ದೇಶಕ ಕಮ್ ನಾಯಕ ಆಸ್ಕರ್ ಮಾತನಾಡಿ, 'ನನ್ನ ನಿರ್ದೇಶನದ ೫ನೇ ಚಿತ್ರ ಇದು. ರಿಸ್ಕ್ ತೆಗೆದುಕೊಂಡು ರಿಲೀಸ್ ಮಾಡಿದ್ದಕ್ಕೂ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಪ್ರೇಕ್ಷಕರು ತುಂಬಾ ಎಂಜಾಯ್ ಮಾಡುತ್ತಿದ್ದಾರೆ. ಒಳ್ಳೆಯ ಸ್ನೇಹಕ್ಕೆ ಬಲೆ ಇದೆ ಎಂಬುದಕ್ಕೆ ಕ್ಲೈಮ್ಯಾಕ್ಸ್​ನಲ್ಲಿ ಉತ್ತರವಿದೆ. ಸರ್ಕಾರ ಶೇ. ೧೦೦ರಷ್ಟು ಹಾಜರಾತಿಗೆ ಅವಕಾಶ ಕೊಟ್ಟರೆ ಚನ್ನಾಗಿರುತ್ತದೆ' ಎಂದರು. ಇನ್ನು, ಸೆನ್ಸಾರ್​​ನವರು ಚಿತ್ರಕ್ಕೆ 'ಎ' ಪ್ರಮಾಣಪತ್ರ ಕೊಟ್ಟಿದ್ದು ಏಕೆಂದು ಗೊತ್ತಾಗಲಿಲ್ಲ ಎಂದು ಆಶ್ಚರ್ಯಪಟ್ಟರು.

ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದು, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲೋಕೇಂದ್ರ ಸೂರ್ಯ ಮಾತನಾಡಿ, 'ನಮ್ಮ ಚಿತ್ರಕ್ಕೆ ಹುಬ್ಬಳ್ಳಿ ಮತ್ತು ಮೈಸೂರು ಭಾಗದಿಂದ ಒಳ್ಳೆಯ ರೆಸ್ಪಾನ್ಸ್‌ ಬರ್ತಾ ಇದೆ. ಗಡಾರಿ ಪಾತ್ರ ಜನರಿಗೆ ಇಷ್ಟವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಾಗಿ ಜನ ಬರುವ ಥಿಯೇಟರ್​​ಗಳಲ್ಲಿ ಗೋಲ್ಡ್ ಕಾಯಿನ್ ಆಫರ್ ವಿಸ್ತರಿಸುತ್ತೇವೆ' ಎಂದು ಹೇಳಿದರು.

ನಾಯಕಿ ಗೌರಿ ನಾಯರ್ ಮಾತನಾಡಿ ದೀಪಾ ಪಾತ್ರ ಜನರಿಗೆ ತುಂಬಾ ಇಷ್ಟವಾಗಿದೆ ಎಂದು ಹೇಳಿದರು. ಅನಂತ್ ಆರ್ಯನ್ ಅವರ ಸಂಗೀತ, ಗಗನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net