ರಜನಿಕಾಂತ್ ಬಗ್ಗೆ ಹೀಗೊಂದು ಹೊಸ ಜೋಕು …

Rajanikanth Vaccine - Final
Published on

ಚೆನ್ನೈ: ಕಾಲಿವುಡ್​ನ ಸೂಪರ್​ ಸ್ಟಾರ್ ರಜನಿಕಾಂತ್​ ಬಗ್ಗೆ ಈಗಾಗಲೇ ನೂರಾರು ಜೋಕುಗಳಿವೆ. ರಜನಿಕಾಂತ್​ ಅವರು ಏನು ಬೇಕಾದರೂ ಮಾಡಬಹುದು, ಅವರ ಕೈಯಿಂದ ಏನು ಬೇಕಾದರೂ ಮಾಡಲು ಸಾಧ್ಯ ಎಂದು ಈ ಜೋಕುಗಳ ಮೂಲಕ ಆಗಾಗ ಬಿಂಬಿಸಲಾಗುತ್ತಿರುತ್ತದೆ. ಅದಕ್ಕೆ ಕಾರಣ, ಅವರ ಚಿತ್ರಗಳು ಮತ್ತು ಈ ಚಿತ್ರಗಳ ಮೂಲಕ ರಜನಿಕಾಂತ್​ ಬೆಳೆಸಿಕೊಂಡಿರುವ ಇಮೇಜ್​. ರಜನಿಕಾಂತ್​ ತಮ್ಮ ಚಿತ್ರಗಳಲ್ಲಿ ಅದ್ಭುತ ಶಕ್ತಿಗಳನ್ನು ಪ್ರದರ್ಶಿಸುವುದರಿಂದ, ಅವರು ಏನು ಬೇಕಾದರೂ ಮಾಡಬಹುದು ಎಂದು ಜೋಕ್​ ಮಾಡಲಾಗುತ್ತಿರುತ್ತದೆ.

ಈಗ್ಯಾಕೆ ಈ ವಿಷಯ ಎಂದರೆ, ರಜನಿಕಾಂತ್​ ಅವರ ಬಗ್ಗೆ ಇನ್ನೊಂದು ಹೊಸ ಜೋಕ್​ ಹುಟ್ಟಿಕೊಂಡಿದೆ. ಇದನ್ನು ಕೇಳಿದರೆ ಅಥವಾ ಈ ಫೋಟೋ ನೋಡಿದರೆ ಹೊಟ್ಟೆ ಹುಣ್ಣಾಗುವಂತೆ ನಗುವುದು ಗ್ಯಾರಂಟಿ.

ಇಷ್ಟು ದಿನಗಳ ಕಾಲ ಹೈದರಾಬಾದ್​ನಲ್ಲಿ ಅಣ್ಣಾತ್ತೆ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದ ರಜನಿಕಾಂತ್​, ಬುಧವಾರವಷ್ಟೇ ಚೆನ್ನೈಗೆ ವಾಪಸ್ಸಾಗಿದ್ದರು. ಇನ್ನು ಗುರುವಾರ ಅವರು ಕರೊನಾ ವಿರುದ್ಧ ಎರಡನೆಯ ಲಸಿಕೆಯನ್ನು ಪಡೆದಿದ್ದರು.

ವಿಷಯ ಇರೋದೇ ಅಲ್ಲಿ. ರಜನಿಕಾಂತ್​ ಅವರು ಲಸಿಕೆ ಹಾಕಿಸಿಕೊಂಡರು ಎಂದು ಅವರ ಮಗಳು ಸೌಂದರ್ಯ ರಜನಿಕಾಂತ್​ ಟ್ವಿಟರ್​ನಲ್ಲಿ ಫೋಟೋ ಹಾಕಿಕೊಂಡರೆ, ಅದೇ ಫೋಟೋ ಇಟ್ಟುಕೊಂಡು ಇದೀಗ ಬಗೆಬಗೆಯ ಜೋಕ್​ ಮತ್ತು ಮೇಮ್​ಗಳನ್ನು ಮಾಡಲಾಗುತ್ತಿದೆ. ಭಾರತದಲ್ಲಿ ಲಸಿಕೆಯಲ್ಲಿ ಅಭಾವ ಇರುವ ಕಾರಣ, ರಜನಿಕಾಂತ್​ ಅವರಿಂದ ಲಸಿಕೆಯನ್ನು ಹೊರತೆಗೆಯಲಾಗುತ್ತಿದೆ ಎಂಬ ಒಕ್ಕಣಿ ಈ ಚಿತ್ರಕ್ಕಿದೆ. ಮೊದಲೇ ಹೇಳಿದಂತೆ, ಇದನ್ನು ಓದಿ ಜನ ಬಿದ್ದುಬಿದ್ದು ನಗುತ್ತಿದ್ದಾರೆ.

ಈ ಫೋಟೋ ಇದೀಗ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಫಾರ್ವರ್ಡ್​ ಆಗುತ್ತಿದ್ದು, ಸದ್ಯ ಭಾರೀ ಸುದ್ದಿಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net