

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಈಗಾಗಲೇ 200 ಪ್ಲಸ್ ಚಿತ್ರಗಳು ಬಿಡುಗಡೆಯಾಗಿವೆ. ವರ್ಷ ಮುಗಿಯುವುದಕ್ಕೆ ಇನ್ನೊಂದು ವಾರವಿದ್ದು, ಈ ಶುಕ್ರವಾರ ಒಂಬತ್ತು ಹೊಸ ಕನ್ನಡ ಚಿತ್ರಗಳು ಬಿಡುಗಡೆಯಾಗುವು ಸಾಧ್ಯತೆ ಇದೆ.
ಡಿಸೆಂಬರ್ ತಿಂಗಳ ಮೊದಲ ಮೂರು ವಾರಗಳಲ್ಲಿ 26 ಚಿತ್ರಗಳು ಬಿಡುಗಡೆಯಾಗಿದ್ದವು. ಆದರೆ, ಕಳೆದ ಶುಕ್ರವಾರ (ಡಿ.23) ಕೇವಲ ಮೂರು ಚಿತ್ರಗಳು ಮಾತ್ರ ಬಿಡುಗಡೆಯಾಗಿದ್ದವು. ಅದಕ್ಕೆ ಕಾರಣ, 'ವೇದ'. ಶಿವರಾಜಕುಮಾರ್ ಅವರ 125ನೇ ಚಿತ್ರವಾದ 'ವೇದ' ಬಿಡುಗಡೆಯಾಗಿದ್ದರಿಂದ ಬಹಳ ನಿರ್ಮಾಪಕರು, ತಮ್ಮ ಚಿತ್ರಗಳನ್ನು ಆ ಚಿತ್ರದ ಎದುರು ಬಿಡುಗಡೆ ಮಾಡುವುದಕ್ಕೆ ಹಿಂದೇಟು ಹಾಕಿದ್ದರು. ಹಾಗಾಗಿ, 'ವೇದ' ಜತೆಗೆ 'ಹೊಸ ದಿನಚರಿ' ಮತ್ತು 'ಐಹೊಳೆ' ಎಂಬ ಇನ್ನೆರಡು ಚಿತ್ರಗಳು ಮಾತ್ರ ಬಿಡುಗಡೆಯಾದವು.
ಆದರೆ, ಈ ವಾರ ಹಾಗಿಲ್ಲ. ಒಂಬತ್ತು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಯೋಗರಾಜ್ ಭಟ್ ನಿರ್ಮಾಣದ 'ಪದವಿಪೂರ್ವ', ಧನಂಜಯ್ ಅಭಿನಯದ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ', ಯೋಗಿ ಅಭಿನಯದ 'ನಾನು ಅದು ಮತ್ತು ಸರೋಜ' ಚಿತ್ರಗಳು ಒಂದಿಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿವೆ.
ಮಿಕ್ಕಂತೆ 'ಮೇಡ್ ಇನ್ ಬೆಂಗಳೂರು', 'ಲವ್ ಸ್ಟೋರಿ 1982', 'ಜೋರ್ಡಾನ್', 'ದ್ವಿಪಾತ್ರ', 'ಆಲ್ಫಾ' ಮತ್ತು 'ರುಧೀರ ಕಣಿವೆ' ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಪೈಕಿ ಆರು ಚಿತ್ರಗಳಲ್ಲಿ ಹೊಸಬರೇ ತುಂಬಿದ್ದಾರೆ. ಈ ಚಿತ್ರಗಳ ಪೈಕಿ ಒಂದೆರಡರಲ್ಲಿ ಜನಪ್ರಿಯ ಪೋಷಕ ಕಲಾವಿದರು ಕಾಣಿಸಿಕೊಂಡಿರುವುದು ಬಿಟ್ಟರೆ, ಮಿಕ್ಕಂತೆ ನಾಯಕ-ನಾಯಕಿ ತಂತ್ರಜ್ನರು ಎಲ್ಲರೂ ಹೊಸಬರೇ. ವಿಶೇಷವೆಂದರೆ, ಈ ಒಂಬತ್ತು ಚಿತ್ರಗಳ ಪೈಕಿ ಎಂಟು ನಿರ್ದೇಶಕರು ಹೊಸಬರು. 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಚಿತ್ರವನ್ನು ನಿರ್ದೇಶಿಸಿರುವ ಕುಶಾಲ್ ಗೌಡ ಮಾತ್ರ ಸ್ವಲ್ಪ ಹಳಬರಾಗಿದ್ದು, ಇದಕ್ಕೂ ಮುನ್ನ 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು.
ಅಲ್ಲಿಗೆ ಈ ವಾರ 9 ಚಿತ್ರಗಳು ಬಿಡುಡೆಯಾಗುವುದಕ್ಕೆ ಸಿದ್ಧತೆ ನಡೆದಿದೆ. ಈ ಸಂಖ್ಯೆ ಜಾಸ್ತಿಯಾಗಬಹುದು ಅಥವಾ ಕಡಿಮೆಯೂ ಆಗಬಹುದು. ಸದ್ಯಕ್ಕಂತೂ ಇಷ್ಟು ಚಿತ್ರಗಳು ಘೋಷಣೆಯಾಗಿದ್ದು, ಅಂತಿಮವಾಗಿದ್ದು ಎಷ್ಟು ಚಿತ್ರಗಳು ತೆರೆ ಕಾಣುತ್ತವೆ ಎಂಬುದು ಶುಕ್ರವಾರ ಸ್ಪಷ್ಟವಾಗಲಿವೆ.