

ಮುಂಬೈ: ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬ ಇಂದು. ಈ ಸಂದರ್ಭದಲ್ಲಿ ಅವರ ಬಯೋಪಿಕ್ನ ಫಸ್ಟ್ಲುಕ್ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ವಾಜಪೇಯಿ ಪಾತ್ರಧಾರಿಯ ಮೊದಲ ನೋಟ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ವಾಜಪೇಯಿ ಕುರಿತು 'ಮೈ ಅಟಲ್ ಹೂಂ' ಎಂಬ ಬಯೋಪಿಕ್ ನಿರ್ಮಾಣವಾಗಲಿದೆ ಎಂಬ ಸುದ್ದಿಯೊಂದು ಕೆಲವು ದಿನಗಳ ಹಿಂದೆ ಕೇಳಿ ಬಂದಿತ್ತು. ಆದರೆ, ವಾಜಪೇಯಿ ಅವರ ಪಾತ್ರವನ್ನು ಯಾರು ಮಾಡುತ್ತಿದ್ದಾರೆ ಎಂಬ ವಿಷಯ ಬಹಿರಂಗವಾಗಿರಲಿಲ್ಲ. ಕೊನೆಗೆ ವಾಜಪೇಯಿ ಅವರ ಪಾತ್ರವನ್ನು ಮನೋಜ್ ತ್ರಿಪಾಠಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ವಾಜಪೇಯಿ ಆಗಿ ಮನೋಜ್ ತ್ರಿಪಾಠಿ ಹೇಗೆ ಕಾಣಿಸುತ್ತಾರೆ ಎಂದು ಚಿತ್ರತಂಡ ಬಹಿರಂಗಗೊಳಿಸಿರಲಿಲ್ಲ. ಈಗ ವಾಜಪೇಯಿ ಹುಟ್ಟುಹಬ್ಬದ ಪ್ರಯುಕ್ತ, ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿದೆ. ಇದನ್ನು ನೋಡಿದವರು ಇದು ನಿಜಕ್ಕೂ ಮನೋಜ್ ತ್ರಿಪಾಠಿ ಅವರೇನಾ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಈ ಚಿತ್ರವು 'ದಿ ಅಂಟೋಲ್ಡ್ ವಾಜಪೇಯಿ: ಪೊಲಿಟಿಷಿಯನ್ ಆ್ಯಂಡ್ ಪ್ಯಾರಾಡಾಕ್ಸ್' ಎಂಬ ಪುಸ್ತಕವನ್ನು ಆಧರಿಸಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ರವಿ ಜಾಧವ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
'ಮೈ ಅಟಲ್ ಹೂಂ' ಚಿತ್ರವನ್ನು ವಿನೋದ್ ಭಾನುಶಾಲಿ, ಸಂದೀಪ್ ಸಿಂಗ್ ಮುಂತಾದವರು ನಿರ್ಮಿಸುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ವಾಜಪೇಯಿ ಅವರ 99ನೇ ಜನ್ಮದಿನದ ಪ್ರಯುಕ್ತ ಈ ಚಿತ್ರವು 2023ರ ಕ್ರಿಸ್ಮಸ್ ಸಂದರ್ಭದಲ್ಲಿ ದೇಶಾದ್ಯಂತ ಬಿಡುಗಡೆಯಾಗುತ್ತಿದೆ.