

ಬೆಂಗಳೂರು: ರಕ್ಷಿತ್ ಶೆಟ್ಟಿ ಜನ್ಮದಿನದ ಪ್ರಯುಕ್ತ ಬಿಡುಗಡೆಯಾಗಿರುವ 777 ಚಾರ್ಲಿ ಸಿನಿಮಾದ ಟೀಸರ್ ಎಲ್ಲೆಡೆಯಿಂದ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದೆ. ಯೂಟ್ಯೂಬ್ನಲ್ಲಿ ಮಿಲಿಯನ್ಗಟ್ಟಲೇ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ. ಕನ್ನಡದ ಜತೆಗೆ ಇನ್ನುಳಿದ ನಾಲ್ಕು ಭಾಷೆಗಳಲ್ಲಿಯೂ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಆ ಭಾಷೆಗಳಲ್ಲಿಯೂ ಟೀಸರ್ ಬಿಡುಗಡೆ ಆಗಿದೆ. ಅಷ್ಟೇ ಅಲ್ಲ ಲಕ್ಷ ಲಕ್ಷ ವೀಕ್ಷಣೆಯನ್ನೂ ಪಡೆದುಕೊಂಡು ಮುನ್ನುಗ್ಗುತ್ತಿದೆ.
ಕಿರಣ್ ರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 777 ಚಾರ್ಲಿ ಸಿನಿಮಾ ನಾಯಿ ಮತ್ತು ಮನುಷ್ಯನ ನಡುವಿನ ಸಂಬಂಧದ ಕಥೆ. ಲೈಫ್ ಆಫ್ ಚಾರ್ಲಿ ಶೀರ್ಷಿಕೆಯಡಿ ಹೊರಬಂದಿರುವ ಟೀಸರ್ನಲ್ಲಿ ಚಿತ್ರದ ಮುಖ್ಯ ಪಾತ್ರಧಾರಿ ಚಾರ್ಲಿಯ ಪರಿಚಯವನ್ನು ನಿರ್ದೇಶಕರು ಮಾಡಿಕೊಟ್ಟಿದ್ದಾರೆ. ಮುದ್ದಾದ ನಾಯಿಮರಿಯ ತರಲೆ, ತುಂಟಾಟ, ಸುತ್ತಾಟವನ್ನು ಎರಡು ನಿಮಿಷದ ಟೀಸರ್ನಲ್ಲಿ ತೋರಿಸಿದ್ದಾರೆ ನಿರ್ದೇಶಕ ಕಿರಣ್ ರಾಜ್.
ಸದ್ಯದ ವಿಷಯವೇನೆಂದರೆ, ಐದು ಭಾಷೆಯಲ್ಲಿ ಬಿಡುಗಡೆ ಆಗಿರುವ ಈ ಟೀಸರ್, ಕನ್ನಡದಲ್ಲಿ 42 ಲಕ್ಷ, ಮಲಯಾಳಂನಲ್ಲಿ 33 ಲಕ್ಷ, ತಮಿಳಿನಲ್ಲಿ 34 ಲಕ್ಷ, ಹಿಂದಿಯಲ್ಲಿ 32ಲಕ್ಷ, ತೆಲುಗಿನಲ್ಲಿ 32 ಲಕ್ಷ ವೀಕ್ಷಣೆ ಕಂಡಿದೆ. ಲೈಕ್ಸ್ ವಿಚಾರದಲ್ಲಿಯೂ ಎಲ್ಲ ಭಾಷೆಗಳಲ್ಲಿ ಒಳ್ಳೆಯ ಪ್ರತಿಕ್ರಿಯೆಯನ್ನೇ ಪಡೆದುಕೊಳ್ಳುತ್ತಿವೆ. ಒಟ್ಟಾರಿಯಾಗಿ ಐದು ಭಾಷೆಗಳಲ್ಲಿ 17 ಮಿಲಿಯನ್ಗೂ ಅಧಿಕ ಅಂದರೆ ಒಂದು ಕೋಟಿ 70 ಲಕ್ಷ ವೀಕ್ಷಣೆ 777 ಚಾರ್ಲಿ ಟೀಸರ್ಗೆ ಸಿಕ್ಕಿದೆ.
ಚಾರ್ಲಿ ಚಿತ್ರಕ್ಕೆ ನೋಬಿನ್ ಪೌಲ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದ್ದಾರೆ. ಜಿಎಸ್ ಗುಪ್ತಾ ಮತ್ತು ಪರಮ್ವಾ ಸ್ಟುಡಿಯೋಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಸಂಗೀತಾ ಶೃಂಗೇರಿ ನಾಯಕಿಯಾಗಿ ನಟಿಸಿದರೆ, ರಾಜ್ ಬಿ ಶೆಟ್ಟಿ, ಬಾಬಿ ಸಿಂಹ, ದಾನಿಶ್ ಸೇಠ್ ಪ್ರಮುಖ ಪಾತ್ರದಲ್ಲಿದ್ದಾರೆ.