

ಬೆಂಗಳೂರು: ಜೀವನದಲ್ಲಿ ಯಾವುದೋ ದೊಡ್ಡ ಅನಾಹುತ ನಡೆದು ಅದರಿಂದ ಪಾರಾದಾಗ ಎಲ್ಲರೂ ಹೇಳುವುದು, ತಮಗೆ ಹೊಸ ಜೀವನ ಪ್ರಾರಂಭವಾಗಿದೆ ಎಂದು. ಅಂಥದ್ದೇ ಒಂದು ಘಟನೆ ಈ ಚಿತ್ರದಲ್ಲೂ ಇದೆಯಂತೆ. ಅದೇ ಕಾರಣಕ್ಕೆ, ಚಿತ್ರಕ್ಕೆ '2nd ಲೈಫ್' ಎಂಬ ಹೆಸರನ್ನು ಇಡಲಾಗಿದೆ. ಈಗಾಗಲೇ ಚಿತ್ರೀಕರಣ ಮುಗಿದು, ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿರುವ ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.
'2nd ಲೈಫ್', ಕರುಳುಬಳ್ಳಿಯ ಸುತ್ತ ಸುತ್ತವ ಚಿತ್ರವಂತೆ. ಮಗು ಜನಿಸಿದ ಕೆಲವೇ ದಿನಗಳಲ್ಲಿ ಕರುಳಬಳ್ಳಿ (ಹೊಕ್ಕಳು ಬಳ್ಳಿ) ಬೀಳುತ್ತದೆ. ಅದನ್ನು ಕ್ಯಾನ್ಸರ್ ರೋಗಿಗಳ ಔಷದಿಗೆ ಬಳಸಿಕೊಳ್ಳಲಾಗುತ್ತದೆ. ಕರ್ನಾಟಕ ಒಂದರಲ್ಲೇ 70-80 ಸಾವಿರ ಜನರು ಪ್ರತೀ ವರ್ಷ ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾರೆ. ಅಂತಹವರಿಗೆ ಇದು ಉಪಯೋಗವಾಗುತ್ತದೆ. ಕರುಳಬಳ್ಳಿಯನ್ನು ಶೇಖರಿಸಿಡುವ ಕಾರ್ಯ ಕೂಡ ಎಲ್ಲೆಡೆ ನಡೆಯುತ್ತಿದೆ. ಈ ಅಂಶವನ್ನೇ ಪ್ರಮುಖವಾಗಿಟ್ಟು ಕೊಂಡು '2nd ಲೈಫ್' ಚಿತ್ರ ತಯಾರಾಗಿದೆ.
ಜಯಣ್ಣ ಫಿಲಂಸ್ ಹಾಗೂ ಶುಕ್ರ ಫಿಲಂಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿರುವ ಈ ಚಿತ್ರವನ್ನು ರಾಜು ದೇವಸಂದ್ರ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ 'ಸ್ವಾರ್ಥರತ್ನ' ಎಂಬ ಚಿತ್ರದಲ್ಲಿ ನಟಿಸಿದ್ದ ಆದರ್ಶ್ ಗುಂಡುರಾಜ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದರೆ, ಸಿಂಧು ರಾವ್ ಅವರಿಗೆ ನಾಯಕಿಯಾಗಿದ್ದಾರೆ.
'2nd ಲೈಫ್' ಕುರಿತು ಮಾತನಾಡುವ ಆದರ್ಶ್, 'ನಾನು ಮೂಲತಃ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ಮಂಜುಳಾ ರಮೇಶ್ ಅವರು ಬರೆದಿರುವ ಈ ಚಿತ್ರದ ಕಥೆ ಹಿಡಿಸಿತು. ಪಿ.ಆರ್.ಕೆ ಆಡಿಯೋ ಮೂಲಕ ಹಾಡು ಬಿಡುಗಡೆಯಾಗಿದೆ. ಕನ್ನಡ, ತೆಲುಗು ಹಾಗೂ ತಮಿಳು ಮೂರು ಭಾಷೆಗಳಲ್ಲಿ ನಮ್ಮ ಚಿತ್ರ ನಿರ್ಮಾಣವಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ' ಎನ್ನುತ್ತಾರೆ. ಇನ್ನು, ಸಿಂಧೂ ರಾವ್ ಈ ಚಿತ್ರದಲ್ಲಿ ಕುರುಡಿಯ ಪಾತ್ರ ಮಾಡಿದ್ದಾರಂತೆ.
'2nd ಲೈಫ್' ಚಿತ್ರಕ್ಕೆ ಅರವ್ ರಿಶಿಕ್ ಅವರ ಸಂಗೀತ, ರಮೇಶ್ ಕೊಯಿರ ಅವರ ಛಾಯಾಗ್ರಹಣವಿದೆ. ಚಿತ್ರ ಡಿಸೆಂಬರ್ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.