ಮುಂದೇನು?: ವರ್ಷಾಂತ್ಯಕ್ಕೆ ದೇಶದ 2000 ಚಿತ್ರಮಂದಿರಗಳು ಕ್ಲೋಸ್?

Cinivani Lead
Published on
ಹಲವು ರಾಜ್ಯಗಳಲ್ಲಿ ಕರೊನಾ ಎರಡನೆಯ ಅಲೆಯ ತೀವ್ರತೆ ಮುಗಿಯುತ್ತಾ ಬಂದಿದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ 3ನೇ ಅಲೆಯ ಭೀತಿ ಶುರುವಾಗಿದೆ. ಅದೆಷ್ಟು ಭೀಕರವಾಗಿರಲಿದೆ ಎಂದು ಈಗಲೇ ಹೇಳುವುದು ಕಷ್ಟ. ಇದರಿಂದ ಚಿತ್ರಪ್ರದರ್ಶನ ಇನ್ನಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಇದ್ದೇ ಇದೆ. ಈ ನಡುವೆ ಕೋವಿಡ್ ಮೊದಲ ಅಲೆಗೂ ಮುನ್ನ ದೇಶದಲ್ಲಿ 6327 ಏಕಪರದೆಯ ಮತ್ತು 3200 ಮಲ್ಟಿಪ್ಲೆಕ್ಸ್ ಗಳಿದ್ದವು. ಈ ಪೈಕಿ ಮೊದಲ ಅಲೆ ವೇಳೆಯಲ್ಲಿಯೇ ಸಾವಿರ ಚಿತ್ರಮಂದಿರಗಳು ಮುಚ್ಚಲ್ಪಟ್ಟಿದ್ದು, ಈ ವರ್ಷಾಂತ್ಯದ ವೇಳೆಗೆ ಸಾವಿರಕ್ಕೂ ಅಧಿಕ ಥಿಯೇಟರ್​ಗಳು ಬಂದ್ ಆಗಲಿವೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

| ಮಂಜು ಕೊಟಗುಣಸಿ

ಕೋವಿಡ್ ನಂತರದ ಪರಿಸ್ಥಿತಿ ಸಿನಿಮಾ ರಂಗದ ಮೇಲೆ ಬೀರಿರುವ ಪರಿಣಾಮ ಎಂಥದ್ದು ಎಂಬುದನ್ನು ಬಿಡಿಸಿ ಹೇಳ ಬೇಕಿಲ್ಲ. ಚಿತ್ರರಂಗವನ್ನೇ ನಂಬಿ ಜೀವನ ನಡೆಸುತ್ತಿರುವವರ ಸ್ಥಿತಿ ಅತಂತ್ರವಾಗಿದೆ. ಇದೆಲ್ಲದರ ನಡುವೆ ಶಾಕಿಂಗ್ ವಿಚಾರ ಏನೆಂದರೆ, ವರ್ಷಾಂತ್ಯಕ್ಕೆ ದೇಶದಲ್ಲಿ 2 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳು ಸ್ಥಗಿತವಾಗಲಿವೆ ಎಂಬ ಅಂಶವನ್ನು ಸಮೀಕ್ಷೆಯೊಂದು ಬಹಿರಂಗಗೊಳಿಸಿದೆ. ಈಗಾಗಲೇ ಕರ್ನಾಟಕದ 650 ಚಿತ್ರಮಂದಿರಗಳ ಪೈಕಿ ಸುಮಾರು 35ಕ್ಕೂ ಹೆಚ್ಚು ಚಿತ್ರಮಂದಿರಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಮಂದಿರಗಳು ಮುಚ್ಚುವ ಹಂತದಲ್ಲಿವೆ.

ಈಗಾಗಲೇ 70 ವರ್ಷ ಇತಿಹಾಸವಿರುವ ಮೈಸೂರಿನ ಲಕ್ಷ್ಮೀ ಚಿತ್ರಮಂದಿರ ಬಂದ್ ಆಗಿರುವ ಸುದ್ದಿ ಗೊತ್ತಿದೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಒಟ್ಟಾರೆ 24 ಚಿತ್ರಮಂದಿರಗಳಿದ್ದವು. ಆ ಪೈಕಿ ಕೋವಿಡ್ ಹೊಡೆತದಿಂದ 10 ಚಿತ್ರಮಂದಿರಗಳು ಮುಚ್ಚಲ್ಪಟ್ಟಿವೆ. ರಾಜ್ಯದ ಬೇರೆಬೇರೆ ಕಡೆಗಳಲ್ಲೂ ಇದೇ ಪರಿಸ್ಥಿತಿ ಇದ್ದು, ಬಂದ್ ಆಗಿರುವ ಥಿಯೇಟರ್​ಗಳು ಕಲ್ಯಾಣ ಮಂಟಪವಾಗಿ, ಮಾಲ್​ಗಳಾಗಿ ಪರಿವರ್ತನೆ ಆಗುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ, ಚಿತ್ರಮಂದಿರ ನಂಬಿ ಜೀವನ ನಡೆಸುವವರ ಸ್ಥಿತಿ ಏನು?

ಈ ಕುರಿತು ಮಾತನಾಡುವ ಚಿತ್ರ ಪ್ರದರ್ಶಕ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ‘ನಾನೇ ಮೂರು ಚಿತ್ರಮಂದಿರಗಳನ್ನು ನಡೆಸುತ್ತಿದ್ದೇನೆ. ಎಲ್ಲವೂ ಸರಿಯಾಗಿ ಸಿನಿಮಾಗಳು ಬಿಡುಗಡೆಗೆ ಬಂದರೂ ನಾನು ಚಿತ್ರಪ್ರದರ್ಶನ ಪ್ರಾರಂಭಿಸುವುದಿಲ್ಲ. ಹೊರೆ ಮೇಲೆ ಹೊರೆ ಹಾಕಿಕೊಳ್ಳುವುದು ನನಗಿಷ್ಟವಿಲ್ಲ. ಆದಾಯ ನೋಡಿದರೆ ಜೀರೋ. ಇದರಲ್ಲಿ ಹಂಚಿಕೆದಾರರಿಗೆ ಮತ್ತು ನಿರ್ವಪಕರಿಗೆ ಏನು ನೀಡಬೇಕು? ನಷ್ಟದ ಪಟ್ಟಿಯೇ ದೊಡ್ಡದಿದೆ. ಇದೆಲ್ಲದರ ನಡುವೆ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆಯಾದರೂ, ಕರೆಂಟ್ ಬಿಲ್ ಸೇರಿ ಥಿಯೇಟರ್ ನಿರ್ವಹಣೆಯೂ ಕಷ್ಟವಾಗುತ್ತಿದೆ’ ಎನ್ನುತ್ತಾರೆ. ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಅಧ್ಯಕ್ಷ ಓದುಗೌಡ್ರು ಸಹ ಈ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. 600ಕ್ಕೂ ಹೆಚ್ಚು ಚಿತ್ರಮಂದಿರಗಳ ಪೈಕಿ ಕಳೆದ ಲಾಕ್​ಡೌನ್​ನಿಂದ ಇಲ್ಲಿಯವರೆಗೂ 35ಕ್ಕೂ ಹೆಚ್ಚು ಚಿತ್ರಮಂದಿರಗಳು ಮುಚ್ಚಲ್ಪಟ್ಟಿವೆ. ಹಣವಂತರು, ಉಳ್ಳವರು ಚಿತ್ರಮಂದಿರಗಳನ್ನು ಮುನ್ನಡೆಸುತ್ತಿದ್ದಾರೆ. ಆದರೆ, ಅದನ್ನೇ ನಂಬಿ ಜೀವನ ದೂಡುತ್ತಿದ್ದವರು ಕೈ ಮುಗಿದು ಬೇರೆ ಕೆಲಸಗಳತ್ತ ಮುಖ ಮಾಡಿದ್ದಾರೆ. ವಿದ್ಯುತ್ ಶುಲ್ಕ ಮತ್ತು ನಿರ್ವ ಹಣೆಯೇ ಸಾಕಾಗಿದೆ. ಹೀಗೆ ಪರಿಸ್ಥಿತಿ ಮುಂದುವರಿದರೆ, ಈ ಸಂಖ್ಯೆ ಮತ್ತಷ್ಟು ಹೆಚ್ಚಾದರೂ ಅಚ್ಚರಿಯೇನಲ್ಲ’ ಎನ್ನುತ್ತಾರವರು. ಆದರೆ, ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿಲ್ಲ ಎಂಬ ಆಶಾ ಭಾವನೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ವ್ಯಕ್ತಪಡಿಸುತ್ತಾರೆ. ‘ಸದ್ಯಕ್ಕೆ ಯಾವುದೇ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಹಾಗಾಗಿ, ಯಾರೆಲ್ಲ ಚಿತ್ರಮಂದಿರಗಳನ್ನು ಮುಚ್ಚಿದ್ದಾರೆ ಎಂಬ ಅಂಕಿ ಅಂಶ ಸಿಗುವುದಿಲ್ಲ. ಯಾರೂ ಸಹ ನಾವು ಬಂದ್ ಮಾಡಿದ್ದೇವೆಂದು ಹೇಳಿಕೊಳ್ಳುವುದಿಲ್ಲ. ಯಾವಾಗ ಸಿನಿಮಾ ಬಿಡುಗಡೆ ಪ್ರಕ್ರಿಯೆ ಶುರುವಾಗುತ್ತದೆಯೋ ಆಗ ಮಾಹಿತಿ ಸಿಗಲಿದೆ’ ಎಂಬುದು ಅವರ ಮಾತು.

ಎಲ್ಲವೂ ಸ್ಟಾರ್ ನಟರ ಮೇಲೆ ನಿಂತಿದೆ: ಚಿತ್ರಪ್ರದರ್ಶನ ಪ್ರಾರಂಭವಾಗುವುದಷ್ಟೇ ಮುಖ್ಯ ಅಲ್ಲ, ಜನ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಬೇಕು ಮತ್ತು ಜನರನ್ನು ಕರೆತರುವ ಜವಾಬ್ದಾರಿ ಸ್ಟಾರ್​ನಟರ ಮೇಲಿದೆ. ‘ಸ್ಟಾರ್ ನಟರು ವರ್ಷಕ್ಕೆ ತಲಾ ಕನಿಷ್ಟ ನಾಲ್ಕು ಸಿನಿಮಾವನ್ನಾದರೂ ಮಾಡಬೇಕು. ಒಟ್ಟಾರೆ ವರ್ಷಕ್ಕೆ 30 ಸಿನಿಮಾ ಬಂದರೆ, ಹೇಗೋ ದೂಡಬಹುದು. ಎಲ್ಲ ಸೆಂಟರ್​ಗಳಲ್ಲಿಯೂ ಯಾವುದೇ ಕ್ಲ್ಯಾಷ್ ಇಲ್ಲದೆ, ಸಿನಿಮಾ ಪ್ರದರ್ಶನ ಮಾಡಬಹುದು. ದಯಮಾಡಿ ಈ ಕಾರ್ಯಕ್ಕೆ ಎಲ್ಲರೂ ಮುಂದಾಗಿ’ ಎಂಬುದು ಬಣಕಾರ್ ಅವರ ಮಾತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net