

ಹೈದರಾಬಾದ್: ಟಾಲಿವುಡ್ ಅಷ್ಟೇ ಅಲ್ಲ, ಮಹೇಶ್ ಬಾಬು ವೃತ್ತಿಜೀವನದಲ್ಲೇ ಸೂಪರ್ ಹಿಟ್ ಚಿತ್ರ ಎಂದು ಪರಿಗಣಿಸಲ್ಪಟ್ಟಿರುವ 'ಪೋಕಿರಿ'ಗೆ 15 ವರ್ಷವಾಗಿದೆ. ಸರಿಯಾಗಿ ಇದೇ ದಿನ 2006ರಲ್ಲಿ ಈ ಚಿತ್ರ ಬಿಡುಗಡೆಯಾಗಿದ್ದು, ಇಂದಿಗೆ 15 ವರ್ಷಗಳಾಗಿವೆ.
ಇದನ್ನೂ ಓದಿ: ಕರೊನಾ ನಡುವೆಯೂ ಚಿತ್ರೀಕರಣ ಮುಂದುವರೆಸಿದ ರಜನಿಕಾಂತ್
ಟಾಲಿವುಡ್ನಲ್ಲಿ 'ಪೋಕಿರಿ' ಚಿತ್ರಕ್ಕೆ ಬಹಳ ವಿಶಿಷ್ಟವಾದ ಸ್ಥಾನ. ಏಕೆಂದರೆ, ಅಲ್ಲಿಯವರೆಗೂ ಹಲವು ಚಿತ್ರಗಳು ತೆಲುಗು ಚಿತ್ರರಂಗದಲ್ಲಿ ಸೂಪರ್ ಹಿಟ್ ಆಗಿದ್ದರೂ, 'ಪೋಕಿರಿ' ಹೊಸ ಭಾಷ್ಯವನ್ನೇ ಬರೆಯಿತು. 299 ಕೇಂದ್ರಗಳಲ್ಲಿ 50 ದಿನ, 200 ಕೇಂದ್ರಗಳಲ್ಲಿ 100 ದಿನ ಮತ್ತು 63 ಕೇಂದ್ರಗಳಲ್ಲಿ ಚಿತ್ರವು 175 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು.
ಬರೀ ಯಶಸ್ವಿ ಪ್ರದರ್ಶನಗಳನ್ನು ಕಾಣುವುದಷ್ಟೇ ಅಲ್ಲ, ಚಿತ್ರವು ಬೇರೆ ಭಾಷೆಗಳಿಗೆ ರೀಮೇಕ್ ಆಗುವುದರ ಜತೆಗೆ ಅಲ್ಲೂ ಹಿಟ್ ಆಗಿತ್ತು. ಈ ಚಿತ್ರವನ್ನು ವಿಜಯ್, ತಮಿಳಿನಲ್ಲಿ 'ಪೊಕ್ಕಿರಿ' ಎಂಬ ಹೆಸರಿನಲ್ಲಿ ರೀಮೇಕ್ ಮಾಡಿದರು. ಕನ್ನಡದಲ್ಲಿ 'ಪೊರ್ಕಿ'ಯಾಗಿ ದರ್ಶನ್ ಅಭಿನಯದಲ್ಲಿ ಮೂಡಿಬಂದರೆ, ಹಿಂದಿಯಲ್ಲಿ 'ವಾಂಟೆಡ್' ಹೆಸರಿನಲ್ಲಿ ಈ ಚಿತ್ರ ನಿರ್ಮಾಣವಾಗಿ, ಸಲ್ಮಾನ್ ಖಾನ್ ಅವರಿಗೆ ದೊಡ್ಡ ಬ್ರೇಕ್ ನೀಡಿತ್ತು. ಹಾಗಾಗಿ, ಈ ಚಿತ್ರವು ಬಿಡುಗಡೆಯಾಗಿ 15 ವರ್ಷಗಳಾದರೂ, ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿಯೇ ಉಳಿದಿದೆ ಎಂದರೆ ತಪ್ಪಿಲ್ಲ.
'ಪೋಕಿರಿ' ಚಿತ್ರದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಇಲಿಯಾನಾ ಡಿಕ್ರುಜ್ ನಟಿಸಿದ್ದು, ಮಿಕ್ಕಂತೆ ಪ್ರಕಾಶ್ ರೈ, ಬ್ರಹ್ಮಾನಂದಂ, ಆಶೀಷ್ ವಿದ್ಯಾರ್ಥಿ, ಆಲಿ ಮುಂತಾದವರು ನಟಿಸಿದ್ದರು. ಈ ಚಿತ್ರವನ್ನು ಪೂರಿ ಜಗನ್ನಾಥ್ ನಿರ್ದೇಶನ ಮಾಡಿದ್ದು, ಅವರ ಚಿತ್ರಜೀವನದಲ್ಲೂ 'ಪೋಕಿರಿ' ಮಹತ್ವದ ಚಿತ್ರವಾಗಿ ಉಳಿದುಕೊಂಡಿದೆ.