ಕರೊನಾ ನಡುವೆಯೂ ಚಿತ್ರೀಕರಣ ಮುಂದುವರೆಸಿದ ರಜನಿಕಾಂತ್​

Annaatthe - Final
Published on

ಹೈದರಾಬಾದ್​: ಕರೊನಾ ಎರಡನೆಯ ಅಲೆಯಿಂದ ಇಡೀ ದೇಶದಲ್ಲಿ ಎಲ್ಲ ಚಟುವಟಿಕೆಗಳು ಬಂದ್​ ಆಗಿವೆ. ಅದರಲ್ಲೂ ಬಾಲಿವುಡ್​, ಸ್ಯಾಂಡಲ್​ವುಡ್​ ಸೇರಿದಂತೆ ಹಲವೆಡೆ ಚಿತ್ರೀಕರಣ ಚಟುವಟಿಕೆಗಳು ನಿಂತು ಹೋಗಿವೆ. ಹೀಗಿರುವಾಗ, ರಜನಿಕಾಂತ್​ ಅವರ 'ಅಣ್ಣಾತ್ತೆ' ಚಿತ್ರದ ಚಿತ್ರೀಕರಣ ಮಾತ್ರ ಅವ್ಯಾಹತವಾಗಿ ಸಾಗುತ್ತಿದೆ.

ಕಳೆದ ವರ್ಷ ಲಾಕ್​ಡೌನ್​ಗೂ ಮುನ್ನ 'ಅಣ್ಣಾತ್ತೆ' ಚಿತ್ರದ ಒಂದು ಹಂತದ ಚಿತ್ರೀಕರಣ ಶುರುವಾಗಿ ನಿಂತಿತ್ತು. ವರ್ಷದ ಕೊನೆಯಲ್ಲಿ ಪರಿಸ್ಥಿತಿ ಸ್ವಲ್ಪ ಸಹಜ ಸ್ಥಿತಿಗೆ ಬಂದಿದೆ ಎನ್ನುವಾಗ, ರಜನಿಕಾಂತ್​ ಸಹ ಚಿತ್ರೀಕರಣ ಮುಂದುವರೆಸುವುದಕ್ಕೆ ಹೇಳಿ ಚಿತ್ರೀಕರಣದಲ್ಲಿ ಭಾಗಿಯಾದರು. ಚಿತ್ರೀಕರಣ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಚಿತ್ರತಂಡದ ಏಳು ಸದಸ್ಯರಿಗೆ ಕರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿತ್ತು.

ಅಷ್ಟೇ ಅಲ್ಲ, ರಜನಿಕಾಂತ್​ ಕೆಲವು ದಿನಗಳ ಕಾಲ ಅಮೇರಿಕಾಗೆ ಹೋಗಿದ್ದರು. ಕೆಲವು ದಿನಗಳ ಹಿಂದಷ್ಟೇ ವಾಪಸ್ಸಾಗಿರುವ ಅವರು, ಹೈದರಾಬಾದ್​ನಲ್ಲಿ ನಡೆಯುತ್ತಿರುವ 'ಅಣ್ಣಾತ್ತೆ' ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಭಾಗದ ಚಿತ್ರೀಕರಣದಲ್ಲಿ ರಜನಿಕಾಂತ್​ ಮತ್ತು ನಯನತಾರಾ ಅಭಿನಯದ ಕೆಲವು ಮಹತ್ವದ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತದಂತೆ.

ಈಗಾಗಲೇ ನಯನತಾರಾ ಸಹ ಮಂಗಳವಾರ ಹೈದರಾಬಾದ್​ಗೆ ಹಾರಿದ್ದು, ಇಂದಿನಿಂದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಮುಂದಿನ ಕೆಲವು ದಿನಗಳ ಕಾಲ ಅಲ್ಲೇ ಚಿತ್ರದ ಹಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. 'ಅಣ್ಣಾತ್ತೆ' ಚಿತ್ರವನ್ನು ಶಿವ ನಿರ್ದೇಶಿಸಿದರೆ, ಸನ್​ ಪಿಕ್ಚರ್ಸ್​ ಸಂಸ್ಥೆಯು ನಿರ್ಮಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net