ಅಂತರ್ಜಾತಿ ವಿವಾಹವಾಗಿದ್ದಕ್ಕೆ ಬಾಣಂತಿ ಎಂದೂ ನೋಡದೆ ದಂಪತಿಯನ್ನು ಬಹಿಷ್ಕರಿಸಿದ ಗ್ರಾಮಸ್ಥರು!

Couple Boycott
Published on

ಚಿತ್ರದುರ್ಗ: ಅಂತರ್ಜಾತಿ ವಿವಾಹವಾದ ಜೋಡಿಗೆ ಗ್ರಾಮದಿಂದಲೇ ಬಹಿಷ್ಕಾರ ಹಾಕಿರುವ ಆರೋಪ ಕೇಳಿಬಂದಿದೆ. ಬಾಣಂತಿ ಎಂದೂ ನೋಡದೆ ಊರಿನಿಂದ ಹೊರಗೆ ಹಾಕುವ ಮೂಲಕ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಎನ್​. ದೇವರಹಳ್ಳಿ ಗ್ರಾಮದ ಮುಖಂಡರು ಅಮಾನವೀಯವಾಗಿ ವರ್ತಿಸಿದ್ದಾರೆ.

ಎನ್.ದೇವರಹಳ್ಳಿಯ ಸಾವಿತ್ರಮ್ಮ ಹಾಗೂ ಆಂಧ್ರ ಪ್ರದೇಶ ಮೂಲದ ಮಣಿಕಂಠ ಇಬ್ಬರಿಗೂ ವಾಕ್-ಶ್ರವಣ ದೋಷವಿದ್ದು ವಿದ್ಯಾಭ್ಯಾಸ ಪಡೆದಿದ್ದರು. 3 ವರ್ಷದ ಹಿಂದೆಯೇ ಪ್ರೀತಿಸಿ ಇಬ್ಬರು ಮದುವೆ ಆಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ನಗರದಲ್ಲಿ ನೆಲೆಸಿದ್ದರು. ಮದುವೆ ಬಳಿಕ ಜೋಡಿ ಎನ್.ದೇವರಹಳ್ಳಿಗೆ ಬಂದಿತ್ತು. ಆದರೆ, ಇಬ್ಬರದು ಅಂತರ್ಜಾತಿ ವಿವಾಹ ಎಂಬ ಕಾರಣಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕಲಾಗಿದೆ.

ಎನ್.ದೇವರಹಳ್ಳಿಯ ಜೋಗಿ ಸಮಾಜದ ಮುಖಂಡರು ಇಂಥದ್ದೊಂದು ಅಮಾನವೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ಬಹಿಷ್ಕಾರ ಹಾಕಿದ್ದಲ್ಲದೆ, 30 ಸಾವಿರ ರೂ. ದಂಡ ಸಹ ವಸೂಲಿ ಮಾಡಿದ್ದಾರೆ. ಇದಾದ ಬಳಿಕ ದಂಪತಿ ಮತ್ತೆ ಬೆಂಗಳೂರಿಗೆ ತೆರಳಿದರು. ಸಾವಿತ್ರಮ್ಮ ತಿಂಗಳ ಹಿಂದೆ ಮಗುವಿಗೆ ಜನ್ಮ‌ ನೀಡಿದ್ದು, ಬಾಣಂತಿಯಾಗಿರುವ ಆಕೆ ತವರು ಮನೆಗೆ ಬಂದಾಗ ಗ್ರಾಮಸ್ಥರು ಮತ್ತೆ ಕಿರಿಕ್ ಮಾಡಿದ್ದಾರೆ. ಮನೆ ಬಿಟ್ಟು ಹೊಗುವಂತೆ ಒತ್ತಡ ಹಾಕಿದ್ದಾರೆ.

ಗ್ರಾಮದಿಂದ ಬಹಿಷ್ಕಾರ ಹಿನ್ನೆಲೆಯಲ್ಲಿ ದಂಪತಿ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದಾರೆ. ಇದೀಗ ಪುಟ್ಟ ಮಗುವಿನೊಂದಿಗೆ ದಂಪತಿ ಚಳ್ಳಕೆರೆಯ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಸಾಮಾಜಿಕ ಹೋರಾಟಗಾರರು ಸಂತ್ರಸ್ತ ದಂಪತಿಯ ಪರ ನಿಂತಿದ್ದು, ಬಹಿಷ್ಕಾರ ಹಾಕಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net