

ಚೆನ್ನೈ: ಸ್ಟಾರ್ ನಿರ್ದೇಶಕರಾದ ಎಸ್.ಎಸ್. ರಾಜಮೌಳಿ, ಪ್ರಶಾಂತ್ ನೀಲ್ ಮತ್ತು ರೋಹಿತ್ ಶೆಟ್ಟಿ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ನಲ್ಲಿ ಇತ್ತೀಚೆಗೆ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಈ ನಿರ್ದೇಶಕರಿಗೆ ಸ್ಟಾರ್ ನಟರಷ್ಟೇ ಸ್ಟಾರ್ಡಮ್ ಕೂಡ ಇದೆ. ಹಿಟ್ ಸಿನಿಮಾಗಳ ಕಾರಣದಿಂದ ದುಬಾರಿ ನಿರ್ದೇಶಕರು ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಆದರೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಓರ್ವ ನಿರ್ದೇಶಕರ ಹೆಸರು ಟ್ರೆಂಡಿಂಗ್ನಲ್ಲಿದೆ.
ಇನ್ನೂ ಸ್ಕ್ರಿಪ್ಟ್ ರೆಡಿಯಾಗದೆಯೇ ಮುಂದಿನ ಸಿನಿಮಾಗಾಗಿ ಮುಂಗಡ ಹಣವನ್ನು ಪಡೆಯುವ ಮೂಲಕ ಚಿತ್ರರಂಗದವರ ಗಮನವನ್ನು ಸೆಳೆದಿದ್ದಾರೆ. ವರದಿಗಳ ಪ್ರಕಾರ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಸೂಪರ್ ಹಿಟ್ "ಜೈಲರ್" ಸಿನಿಮಾದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಎರಡನೇ ಭಾಗದ ಸಿನಿಮಾಕ್ಕಾಗಿ ಸ್ಕ್ರಿಪ್ಟ್ ಇಲ್ಲದೆಯೂ 55 ಕೋಟಿ ರೂಪಾಯಿ ಮುಂಗಡ ಹಣವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಜೈಲರ್ ಸಿನಿಮಾ ಹಿಟ್ ಆದ ಬಳಿಕ ಅದೇ ಸಿನಿಮಾ ಎರಡನೇ ಭಾಗ ಬರಲಿದೆ ಎಂದು ಹೇಳಲಾಗುತ್ತಿದೆ. ಸಿನಿಮಾ ವಿಮರ್ಶಕ ಮನೊಬಾಲ ವಿಜಯ್ಬಾಲನ್ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ. ಒಂದು ವೇಳೆ ಇದು ನಿಜವಾದರೆ ನೆಲ್ಸನ್ ದಿಲೀಪ್ ಕುಮಾರ್ ಅವರು ಜೈಲರ್ 2 ಸಿನಿಮಾದೊಂದಿಗೆ ಭಾರತೀಯ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಿರ್ದೇಶಕ ಎಂಬ ಹೆಸರು ಗಳಿಸಲಿದ್ದಾರೆ. ಆದರೆ, ನೆಲ್ಸನ್ ಅವರು ಜೈಲರ್ 2 ಸಿನಿಮಾಗಾಗಿ 55 ಕೋಟಿ ರೂಪಾಯಿಗಳನ್ನು ಮುಂಗಡವಾಗಿ ತೆಗೆದುಕೊಂಡಿರುವ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಹೊರಬಂದಿಲ್ಲ.
ಪ್ರಸ್ತುತ, ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕರೆಂದರೆ ಅದು ಎಸ್.ಎಸ್. ರಾಜಮೌಳಿ ಮತ್ತು ರೋಹಿತ್ ಶೆಟ್ಟಿ. ಆದರೆ, ನೆಲ್ಸನ್ ಇವರನ್ನೂ ಮೀರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ನೆಲ್ಸನ್ ನಿರ್ದೇಶನದ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಹಿಟ್ ಆಗಿದೆ. ಜಾಗತಿಕವಾಗಿ ಚಿತ್ರ ಸುಮಾರು 600 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ರಜನಿಕಾಂತ್ ಜತೆಗೆ ವಿನಾಯಕನ್, ರಮ್ಯಾ ಕೃಷ್ಣನ್, ಜಾಕಿ ಶ್ರಾಫ್, ಶಿವ ರಾಜ್ಕುಮಾರ್, ಮೋಹನ್ ಲಾಲ್ ಮತ್ತು ತಮನ್ನಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ. ಚಿತ್ರ ಹಿಟ್ ಆದ ನಂತರ ಕಲಾನಿಧಿ ಮಾರನ್ ಅವರು ರಜನಿಕಾಂತ್, ನೆಲ್ಸನ್ ಮತ್ತು ಅನಿರುದ್ಧ್ ಅವರಿಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿದರು. (ಏಜೆನ್ಸೀಸ್)