ಯುದ್ಧೋನ್ಮಾದದಲ್ಲಿ ಚೀನಾ; ಮಾನಸ ಸರೋವರ ಯಾತ್ರೆ ಮಾರ್ಗದ ಲಿಪುಲೇಖ್​ ಬಳಿ ಸೇನಾ ಜಮಾವಣೆ

kipulekh
Published on

ನವದೆಹಲಿ: ಲಡಾಖ್​ ವಲಯದಲ್ಲಿ ಸೇನೆ ಜಮಾವಣೆ ಮಾಡಿ, ಭಾರತೀಯ ಭೂಪ್ರದೇಶವನ್ನು ಕಬಳಿಸಲು ಯತ್ನಿಸಿದ ಚೀನಾ ಇದೀಗ ನೇಪಾಳ ತನ್ನದೆಂದು ಹೇಳಿಕೊಳ್ಳುತ್ತಿರುವ ಲಿಪುಲೇಖ್​ ಬಳಿ ತನ್ನ ಸೇನೆಯನ್ನು ಜಮಾವಣೆ ಮಾಡಿ ಮತ್ತೊಮ್ಮೆ ಯುದ್ಧೋನ್ಮಾದ ಪ್ರದರ್ಶಿಸಿದೆ.

ಚೀನಾವು 1 ಸಾವಿರ ಯೋಧರು ಇರುವ ಒಂದು ಬೆಟಾಲಿಯನ್​ ಅನ್ನು ವಾಸ್ತವ ಗಡಿರೇಖೆಯಿಂದ ಅನತಿ ದೂರದಲ್ಲಿ ನಿಯೋಜಿಸಿದೆ. ತನ್ಮೂಲಕ ಯುದ್ಧ ಮಾಡಲು ಸಿದ್ಧ ಎಂಬ ಸೂಚನೆ ನೀಡುತ್ತಿರುವಂತೆ ಕಾಣುತ್ತಿದೆ ಎಂದು ಭಾರತೀಯ ಸೇನಾಪಡೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸದ್ಯ ಆ ಪ್ರದೇಶದಲ್ಲಿ ಭಾರತ ಕೂಡ 1 ಸಾವಿರ ಯೋಧರನ್ನು ನಿಯೋಜಿಸಿದ್ದು, ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿಯ ಯೋಧರ ಚಲನವಲನಗಳಲ್ಲದೆ, ನೇಪಾಳದ ಯೋಧರ ಚಲನವಲನವನ್ನು ಗಮನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಾಸ್ತವ ಗಡಿರೇಖೆಯ ಬಳಿ ಸದ್ಯದ ಪರಿಸ್ಥಿತಿ ಉದ್ವಿಗ್ನವಾಗಿದೆ. ಲಡಾಖ್​ನಿಂದಾಚೆ ತನ್ನ ಅಸ್ತಿತ್ವವನ್ನು ತೋರಿಸಲು ಎಲ್​ಎಸಿಯ ತಮ್ಮ ಭಾಗದಲ್ಲಿ ಹಲವು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ ಎಂದು ಮಿಲಿಟರಿ ಕಮಾಂಡರ್​ ಒಬ್ಬರು ಹೇಳಿದ್ದಾರೆ.

ಲಿಪುಲೇಖ್​ ಪಾಸ್​, ಉತ್ತರ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ಸುತ್ತಮುತ್ತಲಿನ ಎಲ್​ಎಸಿ ಪ್ರದೇಶದಲ್ಲಿ ಪಿಎಲ್​ಎ ಯೋಧರ ಚಲನವಲನ ತುಂಬಾ ಜೋರಾಗಿದೆ ಎಂದು ತಿಳಿಸಿದ್ದಾರೆ.

ಲಿಪುಲೇಖ್​ ಪಾಸ್​ ಮಾನಸಸರೋವರ ಯಾತ್ರೆಯ ಮಾರ್ಗದಲ್ಲಿ ಬರುತ್ತದೆ. ಅತ್ಯಂತ ಮುಖ್ಯವಾದ ಮಾರ್ಗವಾಗಿದೆ. ಆದರೆ ಈ ಪ್ರದೇಶದಲ್ಲಿ ಭಾರತ 80 ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಿಸಿ, ಲೋಕಾರ್ಪಣೆ ಮಾಡಿದ ನಂತರದಲ್ಲಿ ಈ ಪ್ರದೇಶ ತನ್ನದೆಂದು ಹೇಳಿಕೊಂಡು ನೇಪಾಳ ತಗಾದೆ ತೆಗೆದಿತ್ತು. ಅಲ್ಲದೆ, ಈ ಪ್ರದೇಶವನ್ನು ಒಳಗೊಂಡಂತೆ ಪರಿಷ್ಕೃತ ನಕ್ಷೆಯನ್ನು ಸಿದ್ಧಪಡಿಸಿಕೊಂಡು ತನ್ನ ಸಂಸತ್​ನ ಉಭಯ ಸದನಗಳಲ್ಲೂ ಅನುಮೋದನೆ ಪಡೆದುಕೊಂಡಿತ್ತು. ಸಾಮಾನ್ಯವಾಗಿ ಲಿಪುಲೇಖ್​ ಪಾಸ್​ ಬಳಿ ಜೂನ್​ನಿಂದ ಅಕ್ಟೋಬರ್​ವರೆಗೆ ಜಮಾಯಿಸುವ ಭಾರತ ಮತ್ತು ಚೀನಾದ ಬುಡಕಟ್ಟು ಜನಾಂಗದವರು ಪದಾರ್ಥಗಳನ್ನು ಅದಲುಬದಲು ಮಾಡಿಕೊಳ್ಳುತ್ತಾರೆ. ಇದೀಗ ಈ ಪ್ರದೇಶದಲ್ಲಿ ಚೀನಾ ಯೋಧರ ಜಮಾವಣೆ ಈ ವಹಿವಾಟಿಗೂ ಅಡ್ಡಿಯನ್ನುಂಟು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net