ಡಬ್ಲ್ಯುಎಚ್​ಒಗೆ ಅನುದಾನ ಅಮೆರಿಕ ಕೊಡದಿದ್ದರೇನಂತೆ? - ಹೆಚ್ಚುವರಿಯಾಗಿ 30 ಮಿಲಿಯನ್ ಡಾಲರ್ ದೇಣಿಗೆ ಕೊಡ್ತೇವೆ ಎಂದ ಚೀನಾ

WHO
Published on

ಬೀಜಿಂಗ್​: ಕರೊನಾ COVID19 ವೈರಸ್ ಸೋಂಕು ಜಾಗತಿಕವಾಗಿ ಹರಡದಂತೆ ತಡೆಯುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ)ಯ ಪಾತ್ರ ಮಹತ್ವದ್ದಾಗಿದೆ. ಈ ಸಂಸ್ಥೆಯ ಮುಖ್ಯಸ್ಥ ಡೈರೆಕ್ಟರ್ ಜನರಲ್ ಟೆಡ್ರೋಸ್ ಅಧನೋಂ ಅವರು ಚೀನಾ ಜತೆಗೆ ಕೈ ಜೋಡಿಸಿಕೊಂಡು ಸೋಂಕಿಗೆ ಸಂಬಂಧಿಸಿದ ವಾಸ್ತವಾಂಶ ಮರೆಮಾಚಿದ್ದಾರೆ ಎಂದು ಅಮೆರಿಕ ಮತ್ತು ಇತರೆ ಕೆಲವು ರಾಷ್ಟ್ರಗಳು ಕಳೆದ ವಾರ ಆರೋಪಿಸಿದ್ದವು. ಈ ಬೆಳವಣಿಗೆ ನಂತರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಡಬ್ಲ್ಯುಎಚ್​ಒಗೆ ನೀಡಬೇಕಾಗಿದ ಅನುದಾನವನ್ನು ತಡೆಹಿಡಿದಿದ್ದರು.

ಅಮೆರಿಕದ ಈ ನಡೆಯ ಬೆನ್ನಿಗೇ ಚೀನಾ ಹೆಚ್ಚುವರಿಯಾಗಿ 30 ದಶಲಕ್ಷ ಡಾಲರ್ ಹಣವನ್ನು ದೇಣಿಗೆಯಾಗಿ ಡಬ್ಲ್ಯುಎಚ್​ಒಗೆ ನೀಡಲು ಒಪ್ಪಿಕೊಂಡಿದೆ. ಈ ವಿಷಯವನ್ನು ಚೀನಾದ ವಿದೇಶಾಂಗ ಸಚಿವಾಲಯ ವಕ್ತಾರ ಹುವಾ ಚುನ್​ಯಿಂಗ್​ ಗುರುವಾರ ಪ್ರಕಟಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ 19 ವಿರುದ್ಧದ ಜಾಗತಿಕ ಸಮರದಲ್ಲಿ ತೊಡಗಿಕೊಂಡಿದ್ದು ಅದಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಹೆಚ್ಚುವರಿಯಾಗಿ ಈ ದೇಣಿಗೆ ನೀಡಲು ಚೀನಾ ಸಮ್ಮತಿಸಿದೆ ಎಂದು ಚುನ್​ಯಿಂಗ್ ಹೇಳಿಕೊಂಡಿದ್ದಾರೆ.

ಈ ದೇಣಿಗೆಯನ್ನು ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಆರೋಗ್ಯ ವ್ಯವಸ್ಥೆ ಸುಧಾರಿಸಲು ಬಳಸಬೇಕು. ಚೀನಾ ಈಗಾಗಲೇ ಕಳೆದ ತಿಂಗಳ ಡಬ್ಲ್ಯುಎಚ್​ಒಗೆ 20 ದಶಲಕ್ಷ ಡಾಲರ್ ದೇಣಿಗೆ ನೀಡಿತ್ತು ಎಂಬುದನ್ನೂ ಚುನ್​ಯಿಂಗ್ ಸ್ಮರಿಸಿಕೊಂಡಿದ್ದಾರೆ.

ಕಳೆದ ವರ್ಷ ಕೊನೆಯ ಭಾಗದಲ್ಲಿ ಚೀನಾದಲ್ಲೇ ಮೊದಲು ಕಾಣಿಸಿಕೊಂಡ ಈ ಸಾಂಕ್ರಾಮಿಕ ಸೋಂಕಿನ ವಿಚಾರದಲ್ಲಿ ಸರಿಯಾದ ಮುನ್ನೆಚ್ಚರಿಕೆಯನ್ನು ಡಬ್ಲ್ಯುಎಚ್​ಒ ತೆಗೆದುಕೊಂಡಿಲ್ಲ. ಡೈರೆಕ್ಟರ್ ಜನರಲ್​ ಟೆಡ್ರೋಸ್ ಚೀನಾದ ಮಾತನ್ನು ನಂಬಿ ಅವರ ತಾಳಕ್ಕೆ ತಕ್ಕಂತೆ ಕುಣಿದರು ಎಂಬ ಆರೋಪ ಅಮೆರಿಕ, ಆಸ್ಟ್ರೇಲಿಯಾ, ತೈವಾನ್​ಗಳು ಮಾಡಿದ್ದು, ಅವರ ರಾಜೀನಾಮೆಯನ್ನು ಬಯಸಿವೆ. ಪ್ರಸ್ತುತ ಜಗತ್ತಿನಾದ್ಯಂತ 2.7 ಲಕ್ಷ ಜನ ಈ ಸೋಂಕಿಗೆ ಒಳಗಾಗಿದ್ದು, ಹತ್ತಿರ ಹತ್ತಿರ 2 ಲಕ್ಷ ಜನ ಮೃತಪಟ್ಟಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net