More

  ಆಟದ ಮೈದಾನ ಬಳಿ ಅಪಾಯಕಾರಿ ಕೆರೆ: ತಲ್ಲೂರಿನ ಮಕ್ಕಳ ಹಬ್ಬದಲ್ಲಿ ವಿದ್ಯಾರ್ಥಿಗಳ ಅಹವಾಲು

  ಕುಂದಾಪುರ: ಹೆದ್ದಾರಿ ದಾಟಲು ಸಮಸ್ಯೆಯಾಗುತ್ತಿದ್ದು, ಪಾದಚಾರಿ ಕಾಲು ಸೇತುವೆ ಬೇಕಾಗಿದೆ. ಉಪ್ಪಿನಕುದ್ರುವಿನಲ್ಲಿ ಉಪ ಗ್ರಂಥಾಲಯ ಬೇಕು. ಆಟದ ಮೈದಾನದ ಹತ್ತಿರವೇ ಅಪಾಯಕಾರಿ ಕೆರೆಯಿದೆ. ನೀರು, ಬೀದಿ ದೀಪ ಸಮಸ್ಯೆ, ಹೆಣ್ಣು ಮಕ್ಕಳಿಗೆ ರಕ್ಷಣೆಗಾಗಿ ಕರಾಟೆ ಕಲಿಸಬೇಕು.

  ಜಿಪಂ ಉಡುಪಿ, ತಾಪಂ ಕುಂದಾಪುರ, ತಲ್ಲೂರು ಗ್ರಾಪಂ ಹಾಗೂ ನಮ್ಮ ಭೂಮಿ ಸಂಸ್ಥೆಯ ಆಶ್ರಯದಲ್ಲಿ ತಲ್ಲೂರಿನ ಪಾರ್ತಿಕಟ್ಟೆಯಲ್ಲಿ ಶುಕ್ರವಾರ ನಡೆದ ಮಕ್ಕಳ ಹಬ್ಬದಲ್ಲಿ ಹೊರಬಂದ ಸಮಸ್ಯೆಗಳ ಪಟ್ಟಿ ಇದು.

  ಅಹವಾಲು ಸ್ವೀಕರಿಸಿ ತಹಸೀಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್. ಮಾತನಾಡಿ, ಮಕ್ಕಳು ಮಂಡಿಸಿದ ಈ ಎಲ್ಲ ಸಮಸ್ಯೆಗಳನ್ನು ತಾಲೂಕು ಆಡಳಿತ, ಗ್ರಾಪಂ ಗಂಭೀರವಾಗಿ ಪರಿಗಣಿಸಿ ಪರಿಹರಿಸಲಿದೆ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಗತ್ಯ ಕ್ರಮಕ್ಕೆ ಸೂಚಿಸಲಾಗುವುದು ಎಂದರು.

  ಗ್ರಾಪಂ ಅಧ್ಯಕ್ಷ ಗಿರೀಶ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ತಾಪಂ ಕಾರ‌್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್, ಉಪಾಧ್ಯಕ್ಷೆ ಚಂದ್ರಮತಿ ಹೆಗ್ಡೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಉದಯ ಕುಮಾರ್, ಸದಸ್ಯರಾದ ಸಂಜೀವ ದೇವಾಡಿಗ, ಕೃಷ್ಣ ಪೂಜಾರಿ, ರಾಧಾಕೃಷ್ಣ ಶೇರುಗಾರ್, ಚಂದ್ರ ದೇವಾಡಿಗ, ಶಿವರಾಮ ಕೊಠಾರಿ, ಅಕ್ಷಯ್, ಸರೋಜಾ, ಸುಶೀಲಾ, ರುಕ್ಮಿಣಿ, ಲಕ್ಷ್ಮೀ, ಮಾಜಿ ಸದಸ್ಯೆ ಜಯಲಕ್ಷ್ಮೀ ಕೊಠಾರಿ, ನಮ್ಮ ಭೂಮಿ ಸಂಸ್ಥೆಯ ಆಶಾ, ಬೈಂದೂರು ಬಿಇಒ ನಾಗೇಶ್ ನಾಯ್ಕ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ, ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ರಮೇಶ್ ಕುಲಾಲ್, ತಾಲೂಕು ವೈದ್ಯಾಧಿಕಾರಿ ಡಾ.ಪ್ರೇಮಾನಂದ್, ಗಂಗೊಳ್ಳಿ ವೈದ್ಯಾಧಿಕಾರಿ ಡಾ.ಅಮಿತಾ, ಸಿಡಿಪಿಒ ಅನುರಾಧಾ, ಕುಂದಾಪುರ ಎಸ್‌ಐ ವಿನಯ ಕೊರ್ಲಹಳ್ಳಿ, ಕಾರ‌್ಯದರ್ಶಿ ರತ್ನಾ ಉಪಸ್ಥಿತರಿದ್ದರು.

  ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು. ನಮ್ಮ ಭೂಮಿಯ ಪರಮೇಶ್ವರ ಗಾಣಿಗ ಪ್ರಸ್ತಾಪಿಸಿದರು. ಗ್ರಾ.ಪಂ. ಪಿಡಿಒ ನಾಗರತ್ನಾ ವರದಿ ಮಂಡಿಸಿದರು. ಸದಸ್ಯೆ ಜುಡಿತ್ ಮೆಂಡೋನ್ಸಾ ನಿರೂಪಿಸಿದರು.

  ಸ್ಕೈ ಪಾತ್ ನಿರ್ಮಿಸಿ

  ತಲ್ಲೂರು ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳು ನಿತ್ಯ ಹೆದ್ದಾರಿ ದಾಟಿ ಶಾಲೆಗೆ ಬರಬೇಕಾಗಿದೆ. ಆದರೆ ಹೆದ್ದಾರಿಯಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ನಿತ್ಯವೂ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ರಸ್ತೆ ದಾಟಲು ಭಯ ಆಗುತ್ತದೆ. ಅದಕ್ಕಾಗಿ ದಾಟಲು ಅನುಕೂಲವಾಗುವಂತೆ ಸ್ಕೈ ಪಾತ್ ನಿರ್ಮಿಸಿದರೆ ಅನುಕೂಲವಾಗಲಿದೆ. ಇದರೊಂದಿಗೆ ಇಲ್ಲಿನ ಜಂಕ್ಷನ್‌ನಲ್ಲಿ ಸಂಚಾರಿ ಪೊಲೀಸರನ್ನು ನಿಯೋಜಿಸಬೇಕು. ಟ್ರಾಫಿಕ್ ಲೈಟ್ ವ್ಯವಸ್ಥೆ ಅಳವಡಿಸಬೇಕು ಎನ್ನುವ ಬೇಡಿಕೆ ಹಲವು ಮಕ್ಕಳಿಂದ ಕೇಳಿ ಬಂತು.

  ರಸ್ತೆಯ ಆಚೆ ಇದೆ ಶೌಚಗೃಹ

  ಉಪ್ಪಿನಕುದ್ರು ಸರ್ಕಾರಿ ಪ್ರೌಢಶಾಲೆ ಹಾಗೂ ಹಿ.ಪ್ರಾ. ಶಾಲೆಗಳ ಆಟದ ಮೈದಾನದ ಹತ್ತಿರವೇ ಒಂದು ಕೆರೆಯಿದ್ದು, ಅದಕ್ಕೆ ಸರಿಯಾದ ದಂಡೆ ಇಲ್ಲದ ಕಾರಣ ಅಪಾಯಕಾರಿಯಾಗಿದೆ. ಆಟ ಆಡುವ ವೇಳೆ ಬಾಲ್ ಆ ಕೆರೆಗೆ ಬೀಳುತ್ತಿದೆ. ಇದಕ್ಕೆ ಆವರಣ ಗೋಡೆ ಮಾಡಬೇಕು. ಇಲ್ಲಿನ ಶಾಲಾ ಮಕ್ಕಳ ಶೌಚಗೃಹವು ರಸ್ತೆಯ ಆಚೆ ಇದ್ದು, ರಸ್ತೆ ದಾಟುವುದು ಸಹ ಕಷ್ಟಕರವಾಗಿದೆ ಎಂದು ಮಕ್ಕಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

  ಸಂಕಷ್ಟದಲ್ಲಿರುವ ವಿದ್ಯಾರ್ಥಿನಿಗೆ ಸ್ಕಾಲರ್‌ಶಿಪ್

  ಉಪ್ಪಿನಕುದ್ರುವಿನ 5ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ತಾಯಿ ಕೂಲಿ ಕೆಲಸ ಮಾಡಿ ಮನೆ ನಿರ್ವಹಿಸುತ್ತಿದ್ದು, ವಿದ್ಯಾರ್ಥಿವೇತನ ನೀಡುವಂತೆ ಮನವಿ ಮಾಡಿಕೊಂಡಳು. ತಲ್ಲೂರು ಹಾಗೂ ಉಪ್ಪಿನಕುದ್ರು ಎರಡು ಗ್ರಾಮಗಳಿಗೆ ತಲ್ಲೂರು ಗ್ರಾಪಂ ಬಳಿ ಸಾರ್ವಜನಿಕ ಗ್ರಂಥಾಲಯವಿದೆ. ಇದು ಉಪ್ಪಿನಕುದ್ರು ಭಾಗದ ಮಕ್ಕಳಿಗೆ ಸಮಸ್ಯೆಯಾಗುತ್ತಿದ್ದು, ಇಲ್ಲಿನ ಶ್ರೀಗೋಪಾಲಕೃಷ್ಣ ದೇಗುಲ ಬಳಿ ಉಪ ಗ್ರಂಥಾಲಯ ತೆರೆದರೆ ನಮಗೆ ಓದಲು ಅನುಕೂಲವಾಗಲಿದೆ ಎನ್ನುವ ಸಲಹೆಯೊಂದನ್ನು ಮಕ್ಕಳು ಮುಂದಿಟ್ಟರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts