ಪ್ರಕೃತಿ ರಕ್ಷಣೆ ಎಲ್ಲರ ಹೊಣೆ ; ಸಿಎಂ ಸಿದ್ದರಾಮಯ್ಯ ಅಭಿಮತ,ಅರಣ್ಯ ಹುತಾತ್ಮರಿಗೆ ನಮನ

aranya
Published on

ಬೆಂಗಳೂರು: ಪ್ರಕೃತಿಯಿಂದ ಲಾಭ ಪಡೆಯುತ್ತಿರುವ ಎಲ್ಲರ ಮೇಲೂ ಪ್ರಕೃತಿ ರಕ್ಷಣೆಯ ಹೊಣೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಷ್ಟ್ರೀಯ ಅರಣ್ಯ ಹುತಾತ್ಮ ದಿನದ ಅಂಗವಾಗಿ ಅರಣ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಅರಣ್ಯ ಹುತಾತ್ಮರಿಗೆ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ರಾಜ್ಯದಲ್ಲಿ ಅನುಪಾತಕ್ಕೆ ತಕ್ಕಷ್ಟು ಅರಣ್ಯವಿಲ್ಲ. ಆದ್ದರಿಂದ ಅರಣ್ಯೀಕರಣ ಹೆಚ್ಚಾಗಬೇಕು. ಕಾಡು ಮತ್ತು ವನ್ಯ ಪ್ರಾಣಿ ಸಂಪತ್ತಿನ ರಕ್ಷಣೆ ಕೇವಲ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಯ ಕರ್ತವ್ಯವಲ್ಲ. ಬದಲಾಗಿ ಪ್ರಕೃತಿಯನ್ನು ಬಳಸಿಕೊಳ್ಳುವ ಪ್ರತಿ ಲಾನುಭವಿಗಳು ಕೂಡಾ ಪ್ರಕೃತಿಯ ರಕ್ಷಣೆಗೆ ಮುಂದಾಗುವ ಮೂಲಕ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಬೇಕು.

ರಾಜ್ಯದಲ್ಲಿ ಆನೆ, ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ಸಂಗತಿ. ಆದರೆ ಪ್ರಾಣಿ-ಮನುಷ್ಯ ಸಂಘರ್ಷ ತಪ್ಪಿಸಿ ಮಾನವ, ಪ್ರಾಣಿ ಸಂಪತ್ತನ್ನು ಕಾಪಾಡುವ ದಿಕ್ಕಿನಲ್ಲಿ ಇನ್ನಷ್ಟು ಪರಿಣಾಮಕಾರಿ ಕೆಲಸಗಳು ಆಗಬೇಕಿದೆ. ಇದಕ್ಕಾಗಿ ಲಭ್ಯ ಇರುವ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕಿದೆ. ಅರಣ್ಯ ಹುತಾತ್ಮರು ಮಾನವ ಮತ್ತು ಪರಿಸರದಲ್ಲಿರುವ ಜೀವ ಸಂಕುಲದ ಸಂರಕ್ಷಕರು. ಈ ಹೋರಾಟದಲ್ಲಿ ತಮ್ಮ ಜೀವವನ್ನೇ ಕಳೆದುಕೊಂಡು ಹುತಾತ್ಮರಾಗಿದ್ದಾರೆ. ಅರಣ್ಯ ಹುತಾತ್ಮರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತವನ್ನು 30 ರಿಂದ 50 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಸಿಎಂ ಇದೇ ವೇಳೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ಅರಣ್ಯ ಕಾರ್ಯಪಡೆ ಮುಖ್ಯಸ್ಥ ಬ್ರಿಜೇಶ್ ದೀಕ್ಷಿತ್ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅರಣ್ಯ ಸಿಬ್ಬಂದಿಗೂ ಪೊಲೀಸ್ ಕ್ಯಾಂಟೀನ್‌ಗೆ ಮನವಿ

ರಾಜ್ಯದ ಸಮೃದ್ಧ ಅರಣ್ಯ ಸಂಪತ್ತಿನ ರಕ್ಷಣೆಗೆ ಹಗಲಿರುಳು, ಜೀವದ ಹಂಗು ತೊರೆದು ಶ್ರಮಿಸುವ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಾಲಿ ಇರುವ ಪೊಲೀಸ್ ಕ್ಯಾಂಟೀನ್ ಸೌಲಭ್ಯ ಬಳಸಿಕೊಳ್ಳಲು ಅವಕಾಶ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

ಕಾಡ್ಗಿಚ್ಚು, ಮಾನವ-ವನ್ಯಜೀವಿ ಸಂಘರ್ಷ, ಒತ್ತುವರಿ, ಕಾಡುಗಳ್ಳರೊಂದಿಗೆ ಹೋರಾಟದ ಸಂದರ್ಭದಲ್ಲಿ ತಮ್ಮರಾಜ್ಯದ 60ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು ಹುತಾತ್ಮರಾಗಿದ್ದು, ಅವರ ಕುಟುಂಬದೊಂದಿಗೆ ಇಲಾಖೆ ಸದಾ ಇರುತ್ತದೆ ಎಂದು ಖಂಡ್ರೆ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net