ಸುಪ್ರೀಂ ಕೋರ್ಟ್​​ಗೆ ಭಾವನಾತ್ಮಕ ವಿದಾಯ ಹೇಳಿದ ಮುಖ್ಯ ನ್ಯಾಯಮೂರ್ತಿ ಎಸ್​.ಎ.ಬೊಬ್ಡೆ

CJI bobde
Published on

ನವದೆಹಲಿ : ಅಯೋಧ್ಯೆಯ ರಾಮಜನ್ಮಭೂಮಿ ವಿವಾದ ಸೇರಿದಂತೆ ಹಲವು ಮಹತ್ವದ ಪ್ರಕರಣಗಳನ್ನು ತಮ್ಮ ಕರ್ತವ್ಯಾವಧಿಯಲ್ಲಿ ಪರಿಹರಿಸಿರುವ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಶರದ್ ಅರವಿಂದ್ ಬೊಬ್ಡೆ ಅವರು ಇಂದು ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ಉಲ್ಲೇಖ ಬಂದಾಗ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬೊಬ್ಡೆ ಅವರು, ಉತ್ತಮ ಕಾರ್ಯ ಮಾಡಿರುವೆನೆಂಬ ಸಂತೃಪ್ತಿ ನನಗಿದೆ ಎಂದಿದ್ದಾರೆ.

ಕಳೆದ 21 ವರ್ಷಗಳಿಂದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ನ್ಯಾಯಮೂರ್ತಿ ಬೊಬ್ಡೆ ಅವರು 2019 ರ ನವೆಂಬರ್​ನಲ್ಲಿ ಸುಪ್ರೀಂ ಕೋರ್ಟ್​​ನ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದ್ದರು. ಕರೊನಾ ಮಹಾಮಾರಿ ಹರಡಿದ ಸಂದರ್ಭದಲ್ಲಿ ಭಾರತದ ನ್ಯಾಯಾಂಗದ ನೇತೃತ್ವ ವಹಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯ ವ್ಯವಸ್ಥೆ ಸುಗಮವಾಗಿ ನಡೆಯಲು ಸ್ಪೂರ್ತಿಯಾಗಿದ್ದರು.

ಇಂದು ಕೋರ್ಟ್​ನಲ್ಲಿ ಹಿರಿಯ ವಕೀಲರೊಂದಿಗೆ ಸಂಭಾಷಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರು, "ಸಂತೋಷ ಮತ್ತು ಅಭಿಮಾನದಿಂದ, ಅದ್ಭುತ ವಾದಗಳು, ಅತ್ಯುತ್ತಮ ಪ್ರಸ್ತುತಿ, ಉತ್ತಮ ನಡವಳಿಕೆ, ಬಾರ್‌ನಿಂದ ಮಾತ್ರವಲ್ಲದೆ ಎಲ್ಲಾ ಸಂಬಂಧಿತರಿಂದ ನ್ಯಾಯದ ಬಗೆಗಿನ ಬದ್ಧತೆಯ ನೆನಪುಗಳೊಂದಿಗೆ ನಾನು ಈ ನ್ಯಾಯಾಲಯವನ್ನು ಬಿಟ್ಟುಹೋಗುತ್ತಿದ್ದೇನೆ" ಎಂದರು.

ಭಾರತದ ಸುಪ್ರೀಂ ಕೋರ್ಟ್​ನಲ್ಲಿ ಕಾರ್ಯನಿರ್ವಹಿಸಿದ್ದು ತಮ್ಮ ಅತ್ಯಂತ ಶ್ರೀಮಂತ ಅನುಭವವಾಗಿದೆ. ಇಲ್ಲಿ ಸೋದರ ನ್ಯಾಯಾಧೀಶರ ನಡುವಿನ ಭಾತೃತ್ವವು ಅದ್ಭುತವಾಗಿದೆ ಎಂದ ನ್ಯಾಯಮೂರ್ತಿ ಬೊಬ್ಡೆ, "ನಾಳೆ ನೂತನ ಸಿಜೆಐ ಆಗಿ ಅಧಿಕಾರ ಸ್ವೀಕರಿಸುತ್ತಿರುವ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಉತ್ತಮ ನೇತೃತ್ವ ವಹಿಸುವರು ಎಂಬ ನಂಬಿಕೆ ನನಗಿದೆ" ಎಂದರು.

ಈ ಸಂದರ್ಭದಲ್ಲಿ ಅಟೋರ್ನಿ ಜನರಲ್ ಕೆ.ಕೆ.ವೇಣುಗೋಪಾಲ್​ ಅವರು, ಸಿಜೆಐ ಅಧಿಕಾರಾವಧಿ ಕನಿಷ್ಠ ಮೂರು ವರ್ಷಗಳು ಆಗಿರಬೇಕು ಎಂದು ಹೇಳಿದರು. “ಮಾರ್ಚ್ 2020 ರಲ್ಲಿ ಜಗತ್ತು ಕರೊನಾದಿಂದ ನಲುಗಿದಾಗ ನ್ಯಾಯಾಲಯ ಮುಚ್ಚಲ್ಪಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಸಿಜೆಐ ಬೊಬ್ಡೆ ಆ ಸಂದರ್ಭಕ್ಕೆ ಅನುಗುಣವಾಗಿ ವರ್ಚುವಲ್ ಹಿಯರಿಂಗ್​ಅನ್ನು ಆರಂಭಿಸಿದರು. ಸುಮಾರು 50,000 ಪ್ರಕರಣಗಳನ್ನು ತನ್ಮೂಲಕ ವಿಲೇವಾರಿ ಮಾಡಲಾಗಿದೆ. ಇದು ಒಂದು ದೊಡ್ಡ ಸಾಧನೆಯಾಗಿದೆ”ಎಂದು ವೇಣುಗೋಪಾಲ್ ಹೇಳಿದರು.

ಸಿಜೆಐ ನಡೆದು ಬಂದ ದಾರಿ : 1956 ರ ಏಪ್ರಿಲ್ 24 ರಂದು ಮಹಾರಾಷ್ಟ್ರದ ನಾಗಪುರದಲ್ಲಿ ಜನಿಸಿದ ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರು, ನಾಗಪುರ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದು, 1978 ರಲ್ಲಿ ವಕಾಲತ್ತು ಆರಂಭಿಸಿದರು. ಸುಮಾರು 1998 ರಲ್ಲಿ ಹಿರಿಯ ವಕೀಲರಾಗಿ ಹೆಸರಿಸಲ್ಪಟ್ಟ ಅವರು, 2000ನೇ ಇಸವಿಯಲ್ಲಿ ಬಾಂಬೆ ಹೈಕೋರ್ಟ್​ ನ್ಯಾಯಮೂರ್ತಿಗಳಾದರು. ನಂತರ 2012ರಲ್ಲಿ ಮಧ್ಯಪ್ರದೇಶದ ಮುಖ್ಯ ನ್ಯಾಯಮೂರ್ತಿಗಳಾದರು. 2013ರ ಏಪ್ರಿಲ್ 12 ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಂಡು, 2019ರ ನವೆಂಬರ್​ನಲ್ಲಿ ಸಿಜೆಐ ಆಗಿ ಹುದ್ದೆ ಅಲಂಕರಿಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net