'ಡಿ ಗ್ಯಾಂಗ್'​ ವಿರುದ್ಧ ಚಾರ್ಚ್​ಶೀಟ್​ ಸಲ್ಲಿಕೆ: ರಕ್ತದ ಕಲೆ, 200ಕ್ಕೂ ಹೆಚ್ಚು ಸಾಕ್ಷ್ಯ! ಸ್ಫೋಟಕ ಸಂಗತಿ ಬಯಲು

ವಿಜಯವಾಣಿ - 2024-09-04T125206.848
Published on

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಭೀಕರ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಆರೋಪಿ ದರ್ಶನ್​, ಇದೀಗ ಬಳ್ಳಾರಿ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಇಂದು ಕೊಲೆ ಕೇಸ್​ಗೆ ಸಂಬಂಧಿಸಿದಂತೆ ಚಾರ್ಚ್​ಶೀಟ್​ ಸಲ್ಲಿಕೆಯಾಗಿದ್ದು, ಒಟ್ಟು 231 ಸಾಂದರ್ಭಿಕ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಲಾಗಿದೆ ಎಂದು ವರದಿಯಾಗಿದೆ. ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ದರ್ಶನ್​ ಮತ್ತು ಆತನ ಸಹಚರರಿಗೆ ವಿಧಿಸಿರುವ ನ್ಯಾಯಾಂಗ ಬಂಧನ ಇದೇ ಸೆ.9ರಂದು ಮುಕ್ತಾಯಗೊಳ್ಳಲಿದೆ. ಸದ್ಯ ಪ್ರಕರಣದ ತನಿಖೆಯೂ ಸಂಪೂರ್ಣವಾಗಿ ಮುಗಿದಿದ್ದು, ಸಾಕ್ಷ್ಯಗಳನ್ನು ನ್ಯಾಯಾಧೀಶರು ಪರಿಶೀಲಿಸಿ ಆನಂತರ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ವರದಿಯಲ್ಲಿ ಏನಿದೆ:

ದರ್ಶನ್ ಮತ್ತು ಇತರ ಆರೋಪಿಗಳ ಬಟ್ಟೆಗಳ ಮೇಲೆ ಮೃತ ರೇಣುಕಸ್ವಾಮಿ ರಕ್ತದ ಕಲೆಗಳ ಫೋರೆನ್ಸಿಕ್ ವರದಿಗಳು ಸೇರಿದಂತೆ ಪ್ರಕರಣದಲ್ಲಿ 200ಕ್ಕೂ ಹೆಚ್ಚು ಸಾಂದರ್ಭಿಕ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿ, ಇಂದು ಚಾರ್ಚ್​ಶೀಟ್​ ಸಲ್ಲಿಕೆ ಮಾಡಿದ್ದಾರೆ. ಸಾಕ್ಷ್ಯಾಧಾರದಲ್ಲಿ ಅಪರಾಧ ನಡೆದ ಸ್ಥಳದ ಫೋಟೋಗಳು ಸೇರಿವೆ. ಅದರಲ್ಲಿ ರೇಣುಕಾಸ್ವಾಮಿ ಆರೋಪಿಗಳನ್ನು ಹೊಡೆಯದಂತೆ ಮನವಿ ಮಾಡುವುದು ಕಂಡುಬಂದಿದೆ. ದರ್ಶನ್ ಸೆರೆಯಾಗಿರುವ ಸಿಸಿಟಿವಿ ದೃಶ್ಯಗಳು, ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲು ಬಳಸಿದ್ದ ವಸ್ತುಗಳು ಮತ್ತು ನಟಿ ಪವಿತ್ರಾ ಗೌಡ ಚಪ್ಪಲಿ ಮೇಲಿನ ರಕ್ತದ ಕಲೆಗಳು ಇರುವುದು ಪತ್ತೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಸಾಕ್ಷಿದಾರರ ವಿವರ:

  • ಪ್ರತ್ಯಕ್ಷ ಸಾಕ್ಷಿದಾರರು: 03
  • ಎಸ್ಎಸ್ಎಲ್/ಸಿ.ಎಪ್.ಎಸ್.ಎಲ್: 08
  • 161 ಮತ್ತು 164: (27 ಜನ 164 ಸಿಆರ್‌ಪಿಸಿ ಅಡಿಯಲ್ಲಿನ ಸಾಕ್ಷಿದಾರರು ಸೇರಿದಂತೆ)
  • ಪಂಚರು: 59
  • ಇತರೆ ಸರ್ಕಾರಿ ಅಧಿಕಾರಿಗಳು: 08 (ತಹಸಿಲ್ದಾರ್, ವೈದ್ಯರು, ಆರ್‌ಟಿಓ, ಅಭಿಯಂತರರು)
  • ಪೊಲೀಸರು: 56
  • ಒಟ್ಟು ಸಾಕ್ಷಿಗಳು: 231

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆತನನ್ನು ಅಮಾನುಷವಾಗಿ ಥಳಿಸಿ, ವಿದ್ಯುತ್ ಶಾಕ್ ನೀಡಿರುವುದು ಬೆಳಕಿಗೆ ಬಂದಿದೆ. ಮೃತಪಟ್ಟವನ ದೇಹವು ಅನೇಕ ಮೂಗೇಟುಗಳ ಗುರುತುಗಳನ್ನು ಹೊಂದಿದ್ದು, ಹರಿದ ಕಿವಿ ಮತ್ತು ವೃಷಣಗಳು ಛಿದ್ರಗೊಂಡಿವೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ2 ಆರೋಪಿ ದರ್ಶನ್ ಮತ್ತು ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಇಲ್ಲಿಯವರೆಗೆ ಪೊಲೀಸರು ಒಟ್ಟು 17 ಆರೋಪಿಗಳನ್ನು ಬಂಧಿಸಿದ್ದಾರೆ. ಸಾಕ್ಷಿದಾರರ ವಿವರದ ಪ್ರಕಾರ, ಪ್ರಕರಣದಲ್ಲಿ ಮೂವರು ಪ್ರತ್ಯಕ್ಷ ಸಾಕ್ಷಿದಾರರಿದ್ದಾರೆ. ಪವಿತ್ರಾ ಗೌಡಗೆ ರೇಣುಕಸ್ವಾಮಿ ಮಾಡಿದ ಅಶ್ಲೀಲ ಸಂದೇಶಗಳು ಕೂಡು ಸಿಕ್ಕಿದ್ದು, ತನಿಖೆಯಲ್ಲಿ ಬಯಲಾಗಿದೆ. ಸೆ.09ರಂದು ನಟ ದರ್ಶನ್ ಸೇರಿದಂತೆ ಇತರ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ನ್ಯಾಯಾಲಯದಲ್ಲಿ ಸಾಕ್ಷ್ಯಧಾರಗಳನ್ನು ಪರಿಶೀಲಿಸಿರುವ ಜಡ್ಜ್​, ಈ ಪ್ರಕರಣದ ವಿಚಾರಣೆಯಲ್ಲಿ ಯಾವ ತೀರ್ಪು ಕೊಡಲಿದ್ದಾರೆ ಎಂಬ ಕುತೂಹಲ ಅನೇಕರಲ್ಲಿ ಮೂಡಿದ್ದು, ದರ್ಶನ್​​ ಅಪರಾಧಿ ಪಟ್ಟ ಪಡೆದು ಶಿಕ್ಷೆಗೆ ಗುರಿಯಾಗುತ್ತಾರೋ ಅಥವಾ ನಿರಪರಾಧಿಯಾಗಿ ಪ್ರಕರಣದಿಂದ ಹೊರಬರುತ್ತಾರೋ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net