

ನವದೆಹಲಿ: ಭಾರತ ತಂಡವನ್ನು ವಿಶ್ವ ಕ್ರಿಕೆಟ್‌ನಲ್ಲೇ ಅಗ್ರ ತಂಡವೆಂದು ಹೇಳಬಹುದು. ಮೆನ್ ಇನ್ ಬ್ಲೂ ಎಲ್ಲ ಸ್ವರೂಪಗಳಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಅಂತಹ ತಂಡಕ್ಕೆ ತರಬೇತಿ ನೀಡುವ ಅವಕಾಶವನ್ನು ಯಾರು ಕೂಡ ಕಳೆದುಕೊಳ್ಳುವುದಿಲ್ಲ. ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಹಾಗೂ ರವಿಚಂದ್ರನ್ ಅಶ್ವಿನ್ ಅವರಂತಹ ದಿಗ್ಗಜ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲು ಮತ್ತು ತಂಡವನ್ನು ಯಶಸ್ಸಿನ ಹಾದಿಯಲ್ಲಿ ಇರಿಸಲು ಸರಿಯಾದ ಮಾರ್ಗದರ್ಶನ ನೀಡುವ ಅವಕಾಶವನ್ನು ಯಾರೂ ಕಳೆದುಕೊಳ್ಳುವುದಿಲ್ಲ.
ಆದರೆ, ಲೆಜೆಂಡರಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಭಾರತ ತಂಡಕ್ಕೆ ಕೋಚ್ ಆಗಿ ಕೆಲಸ ಮಾಡುವುದಕ್ಕಿಂತ ಐಪಿಎಲ್ ತಂಡಕ್ಕೆ ಕೋಚ್ ಆಗಲು ಆದ್ಯತೆ ನೀಡುತ್ತೇನೆ ಎನ್ನುವ ಮೂಲಕ ಅಚ್ಚರಿ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ಸೆಹ್ವಾಗ್ ಈ ರೀತಿ ಏಕೆ ಹೇಳಿದರು ಎಂಬುದನ್ನು ನಾವೀಗ ತಿಳಿಯೋಣ.
ಟೀಮ್ ಇಂಡಿಯಾಗೆ ಕೋಚ್ ಆಗುವ ಆಸಕ್ತಿ ನನಗಿಲ್ಲ. ಒಂದು ವೇಳೆ ಐಪಿಎಲ್ ತಂಡಕ್ಕೆ ಕೋಚ್ ಆಗುವ ಅವಕಾಶ ಬಂದರೆ ಆ ಅವಕಾಶವನ್ನು ಕೈ ಬಿಡುವುದಿಲ್ಲ. ಏಕೆಂದರೆ, ಭಾರತ ತಂಡಕ್ಕೆ ಕೋಚ್ ಆಗಿ ಹೋದರೆ 8 ತಿಂಗಳು ಮನೆಯಿಂದ ದೂರ ಇರಬೇಕಾಗುತ್ತದೆ. ಸುಮಾರು 15 ವರ್ಷಗಳ ಕಾಲ ಭಾರತ ತಂಡದಲ್ಲಿ ಆಡುವಾಗ ನಾನು ಮಾಡಿದ್ದು ಅದನ್ನೇ. ನಾನು ಮತ್ತೆ ಮನೆಯಿಂದ ದೂರವಿರಲು ಬಯಸುವುದಿಲ್ಲ ಎಂದು ಅಮರ್ ಉಜಾಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸೆಹ್ವಾಗ್ ಹೇಳಿದರು.
ನನಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬನಿಗೆ 14 ವರ್ಷ ಮತ್ತು ಇನ್ನೊಬ್ಬನಿಗೆ 16 ವರ್ಷ. ಇಬ್ಬರೂ ಕ್ರಿಕೆಟಿಗರು. ಒಬ್ಬ ಆಫ್ ಸ್ಪಿನ್ನರ್ ಮತ್ತು ಇನ್ನೊಬ್ಬ ಬ್ಯಾಟ್ಸ್‌ಮನ್. ನಾನು ಅವರಿಬ್ಬರ ಜತೆ ಹೆಚ್ಚು ಸಮಯ ಕಳೆಯಲು ಬಯಸುತ್ತೇನೆ. ಅವರಿಗೆ ಅನೇಕ ವಿಷಯಗಳನ್ನು ಕಲಿಸಬೇಕು. ಈ ಕ್ಷಣದಲ್ಲಿ ಭಾರತ ತಂಡಕ್ಕೆ ತರಬೇತಿ ನೀಡುವಷ್ಟು ಸಮಯ ನನ್ನ ಬಳಿ ಇಲ್ಲ. ಐಪಿಎಲ್ ತಂಡಕ್ಕೆ ಒಂದೂವರೆ ತಿಂಗಳಿಂದ ಎರಡು ತಿಂಗಳು ಕೋಚ್ ಆಗಿ ಹೋದರೆ ಸಾಕು. ಅದಕ್ಕಾಗಿಯೇ ಆ ಆಯ್ಕೆಯು ಉತ್ತಮವಾಗಿದೆ ಎಂದು ಸೆಹ್ವಾಗ್ ಹೇಳುತ್ತಾರೆ.
ಐಪಿಎಲ್-2025ರಲ್ಲಿ ಯಾವುದೇ ತಂಡಕ್ಕೆ ಕೋಚ್ ಆಗುವ ಅವಕಾಶ ಸಿಕ್ಕರೆ ಖಂಡಿತಾ ಆಫರ್ ಅನ್ನು ಪರಿಗಣಿಸುವುದಾಗಿ ಸೆಹ್ವಾಗ್ ಹೇಳಿದ್ದಾರೆ. ನಿವೃತ್ತಿಯ ನಂತರ ವೀರು ಒಂದೆಡೆ ಕಾಮೆಂಟರಿ ಮಾಡುತ್ತಲೇ ಕೋಚ್ ಆಗಿ ಮುಂದುವರೆದರು. ಐಪಿಎಲ್-2016ರಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಮೆಂಟರ್ ಆಗಿ ಕೆಲಸ ಮಾಡಿದ್ದಾರೆ. ಇದಾದ ಬಳಿಕ ಪಂಜಾಬ್ ಫ್ರಾಂಚೈಸಿಗೆ ಕ್ರಿಕೆಟ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಐಪಿಎಲ್-2018 ರವರೆಗೆ ಪಂಜಾಬ್ ಕಿಂಗ್ಸ್‌ನೊಂದಿಗೆ ಪ್ರಯಾಣಿಸಿದರು.
2017 ರಲ್ಲಿ ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಅವಕಾಶ ತಪ್ಪಿತು. ಮತ್ತೋರ್ವ ಅನುಭವಿ ಆಟಗಾರ ರವಿಶಾಸ್ತ್ರಿಗೆ ಆ ಸ್ಥಾನ ಲಭಿಸಿತು. ಮುಂದೆ ಟೀಮ್ ಇಂಡಿಯಾಗೆ ಕೋಚ್ ಆಗಲು ಬಯಸುತ್ತೀರಾ ಎಂಬ ಪ್ರಶ್ನೆಗೆ ವೀರೂ ಈ ಮೇಲಿನ ಉತ್ತರವನ್ನು ನೀಡಿದರು. ಭಾರತ ತಂಡಕ್ಕೆ ಕೋಚ್ ಆಗಲು ಆಸಕ್ತಿ ಇಲ್ಲ. ಏಳೆಂಟು ತಿಂಗಳು ಮನೆಯಿಂದ ಹೊರಗುಳಿಯಲು ಇಷ್ಟವಿಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್)