

ಪ್ರಯಾಗರಾಜ್: ವಿಶ್ವದ ಗಮನ ಸೆಳೆದಿರುವ ಮಹಾ ಕುಂಭಮೇಳಕ್ಕೆ ತೆರೆ ಬೀಳುವ ದಿನ ಹತ್ತಿರವಾಗುತ್ತಿರುವಂತೆ ಪ್ರಯಾಗ್ರಾಜ್ನಲ್ಲಿ ಅವ್ಯವಸ್ಥೆ ಹೆಚ್ಚುತ್ತಿರುವುದು ಭಕ್ತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ದೇಶ, ವಿದೇಶಗಳಿಂದ ನಿತ್ಯ ಕೋಟ್ಯಂತರ ಭಕ್ತರು ಆಗಮಿಸಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಆದರೆ ಕುಂಭದ ಅಂತಿಮ ಹಂತದಲ್ಲಿ ಸಂಚಾರ ಸಮಸ್ಯೆ ನಿಯಂತ್ರಣ ತಪ್ಪಿದೆ. ಕುಂಭಮೇಳ ಪ್ರದೇಶ ತಲುಪುವ 300 ಕಿ.ಮೀ ಮೊದಲೇ ಸಂಚಾರ ಅಸ್ತವ್ಯಸ್ತಗೊಂಡಿರುವ ಪರಿಣಾಮ ಭಕ್ತರು ಟ್ರಾಫಿಕ್ನಲ್ಲಿ ಸಿಲುಕುವ ಸನ್ನಿವೇಶ ಉಂಟಾಗಿದೆ. 30 -40 ಕಿ.ಮೀ ಅಂತರದಲ್ಲಿರುವವರು ನಡೆದೇ ಕುಂಭಮೇಳಕ್ಕೆ ತೆರಳುತ್ತಿದ್ದರೆ, ನೂರಾರು ಕಿ.ಮೀ ದೂರದಲ್ಲಿ ಸಿಕ್ಕಿಬಿದ್ದವರು ಊಟ, ನಿದ್ರೆಯಿಲ್ಲದೆ ಪರದಾಡುವಂತಾಗಿದೆ.
ಪ್ರಯಾಗ್ರಾಜ್ ಸುತ್ತ ಜನಸಾಗರ ಹರಿದಿದ್ದರೂ ಜಿಲ್ಲಾಡಳಿತ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಭಕ್ತರು ಸಿಡಿದೆದ್ದಿದ್ದಾರೆ. ಮಹಾಕುಂಭ ಮೇಳ ಪ್ರದೇಶ ಮತ್ತು ಪ್ರಯಾಗರಾಜ್ ನಗರಗಳಲ್ಲಿ ಮಂಗಳವಾರದಿಂದ ಎಲ್ಲ ರೀತಿಯ ವಾಹನ ನಿಷೇಧಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಈ ನಿಷೇಧ ಬುಧವಾರದವರೆಗೆ ಜಾರಿಯಲ್ಲಿ ಇರಲಿದೆ. ಫೆ. 12ರಂದು ಮಾಘ ಪೂರ್ಣಿಮೆ ಪುಣ್ಯಸ್ನಾನಕ್ಕೆ ಕೋಟ್ಯಂತರ ಜನರು ಸೇರುವ ನಿರೀಕ್ಷೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ವಿಐಪಿಗಳಿಗೆ ಆದ್ಯತೆ ಯಾಕೆ?: ಕುಂಭಮೇಳದಲ್ಲಿ ತೊಂದರೆ ಆಗದಂತೆ ಎಲ್ಲ ಬಗೆಯ ವ್ಯವಸ್ಥೆ ಕೈಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದರು. ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ವಿಐಪಿಗಳಿಗಷ್ಟೇ ಅನುಕೂಲ ಮಾಡಿಕೊಡುತ್ತಿದ್ದಾರೆ. ಜನಸಾಮಾನ್ಯರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದರಿಂದಾಗಿ ಸಂಗಮದಲ್ಲಿ ಪುಣ್ಯಸ್ನಾನದಂತಹ ಮಹತ್ವದ ಕ್ಷಣ ಕೈತಪು್ಪತ್ತಿದೆ. ಇಂಥ ಆಧ್ಯಾತ್ಮಿಕ ಸಂದರ್ಭಗಳಲ್ಲಿ ವಿಐಪಿಗಳಿಗೆ ಆದ್ಯತೆ ನೀಡುವ ರೂಢಿ ನಿಲ್ಲಬೇಕು ಎಂದು ಮಹಿಳೆಯರ ಸಹಿತ ಕೆಲ ಭಕ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಅನುಭವ ಹಂಚಿಕೊಂಡಿದ್ದಾರೆ. ಲಕ್ಷಾಂತರ ಜನರು ಕಳೆದ ಎರಡು ದಿನಗಳಿಂದ ಸಂಚಾರ ಸಿಕ್ಕಿನಲ್ಲಿ ಸಿಲುಕಿದ್ದರೂ ಅವರ ನೆರವಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆಹಾರ, ನೀರು ಸಹಿತ ಅಗತ್ಯ ವಸ್ತುಗಳಿಗೂ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದೂ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಯೋಗಿ ಖಡಕ್ ಸೂಚನೆ: ಮಹಾಕುಂಭದ ಸಮಯದಲ್ಲಿ ಪ್ರಯಾಗರಾಜ್ ಸುತ್ತ ಉಂಟಾಗಿರುವ ಸಂಚಾರ ದಟ್ಟಣೆ ಸಹಿತ ಇತರ ಅವ್ಯವಸ್ಥೆಗಳ ಬಗ್ಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅಸಮಾಧಾನ ಹೊರಹಾಕಿದ್ದಾರೆ. ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಪ್ರತಿ ಅಧಿಕಾರಿಗಳು ತಮ್ಮ ಹೊಣೆಗಾರಿಕೆ ಪೂರೈಸಬೇಕು. ಇತರರ ಮೇಲೆ ಹೊಣೆಗಾರಿಕೆ ವಹಿಸಬಾರದು. ಶನಿವಾರ, ಭಾನುವಾರ ಏನು ವ್ಯವಸ್ಥೆ ಮಾಡಿದ್ದೀರಿ? ಎಂದು ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.
ಕಾಶಿಯಲ್ಲೂ ಟ್ರಾಫಿಕ್: ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ಲಕ್ಷಾಂತರ ಭಕ್ತರು ಕಾಶಿ ಮತ್ತು ಅಯೋಧ್ಯೆಗೆ ತೆರಳಲು ಪ್ರಯತ್ನಿಸುತ್ತಿದ್ದಾರೆ. ಇದರಿಂದಾಗಿ ಕಾಶಿ ಸುತ್ತಲಿನ ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಕಂಡುಬರುತ್ತಿದೆ. ಫೆ.11ರಿಂದ 14ರವರೆಗೆ ವಾರಾಣಸಿಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಅಂಬಾನಿ ಭೇಟಿ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಂಗಳವಾರ ಕುಟುಂಬ ಸಮೇತ ಮಹಾಕುಂಭಕ್ಕೆ ಭೇಟಿ ನೀಡಿ, ಪುಣ್ಯಸ್ನಾನ ಮಾಡಿದರು. ತಾಯಿ ಕೋಕಿಲಾ ಬೆನ್ ಸೇರಿ ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿತು.