

Chanakya Niti : ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು ಇಲ್ಲ. ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ರಾಜಕೀಯ, ರಾಜತಾಂತ್ರಿಕತೆ ಮತ್ತು ಮಿಲಿಟರಿ ಸೈನ್ಸ್ ಸೇರಿದಂತೆ ಅನೇಕ ವಿಷಯಗಳ ಮೇಲೆ ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಪ್ರತಿಯೊಂದು ವಿಷಯದ ಮೇಲೂ ಚಾಣಕ್ಯರ ದೃಷ್ಟಿಕೋನ ತುಂಬಾ ವಿಶಾಲವಾಗಿದೆ. ಈ ಕಾರಣದಿಂದಲೇ ಮಾನವ ಜೀವನದ ಮೇಲೆ ಪರಿಣಾಮ ಬೀರುವ ಸಣ್ಣ ಮತ್ತು ದೊಡ್ಡ ವಿಚಾರಗಳ ಮೇಲೆ ಬಹಳ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತಾರೆ. ಚಾಣಕ್ಯನ ನೀತಿಯು ಒಬ್ಬ ವ್ಯಕ್ತಿಯನ್ನು ಯಶಸ್ವಿಯಾಗಲು ಪ್ರೇರೇಪಿಸುತ್ತದೆ.
ಚಾಣಕ್ಯ ತತ್ವಗಳನ್ನು ಒಳಗೊಂಡಿರುವ ಚಾಣಕ್ಯ ನೀತಿ ಎಂಬ ಪುಸ್ತಕವನ್ನು ಬರೆಯಲಾಗಿದೆ. ಸಂತೋಷದ ಜೀವನದ ಅನೇಕ ರಹಸ್ಯಗಳನ್ನು ಆ ಪುಸ್ತಕದಲ್ಲಿ ತಿಳಿಸಲಾಗಿದೆ. ಅಲ್ಲದೆ, ಮನುಷ್ಯನಾಗಿ ಜನ್ಮ ತಾಳಿದ ವ್ಯಕ್ತಿ ತನ್ನ ಬದುಕನ್ನು ಸುಧಾರಿಸಿಕೊಳ್ಳಲು ಅನುಸರಿಸಬೇಕಾದ ಧರ್ಮ, ಕರ್ಮ, ಪಾಪ ಹಾಗೂ ಪುಣ್ಯಗಳ ಬಗ್ಗೆ ಚಾಣಕ್ಯನ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಮನುಷ್ಯರಾಗಿ ಹುಟ್ಟಿದ ನಾವು ನಮ್ಮ ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಭಾವಿಸುತ್ತೇವೆ. ಅದಕ್ಕೆ ದಾರಿಯನ್ನು ಚಾಣಕ್ಯ ಹಾಕಿಕೊಟ್ಟಿದ್ದಾರೆ. ಆ ದಾರಿಯಲ್ಲಿ ನಡೆದರೆ ಯಶಸ್ಸು ಖಂಡಿತವಾಗಿ ಸಿಗುತ್ತದೆ.
ಚಾಣಕ್ಯ ನೀತಿಯ ಪ್ರಕಾರ, ನಿಮ್ಮ ಜೀವನದಲ್ಲಿ ನೀವು ಹೆಚ್ಚಿನ ಹಣವನ್ನು ತಮ್ಮ ಬಳಿಗೆ ಆಕರ್ಷಿಸಲು ಬಯಸಿದರೆ, ನಿಮ್ಮಲ್ಲಿರುವ ಹಣವನ್ನು ನೀವು ಯಾವ ರೀತಿ ಬಳಸುತ್ತೀರಿ ಎಂಬುದರ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು.
* ಚಾಣಕ್ಯನ ಪ್ರಕಾರ, ನಿಮ್ಮ ಜೀವನದಲ್ಲಿ ಹೆಚ್ಚು ಹಣ ಬರಬೇಕೆಂದು ಬಯಸಿದರೆ, ನೀವು ಹಣ ಗಳಿಸಲು ಪ್ರಾರಂಭಿಸಿದಾಗ ಯಾವುದೇ ಕಾರಣಕ್ಕೂ ಬಡಾಯಿ ಕೊಚ್ಚಿಕೊಳ್ಳಬಾರದು. ಗಳಿಸುವಾಗ ತಾಳ್ಮೆಯನ್ನು ಬೆಳೆಸಿಕೊಳ್ಳುವವರು ಹೆಚ್ಚಿನ ಹಣವನ್ನು ಸಂಪಾದಿಸುತ್ತಾರೆ.
* ನೀವು ಗಳಿಸಿದ ಹಣವನ್ನು ನಿಮ್ಮ ಸ್ವಂತ ಲಾಭಕ್ಕಾಗಿ ಮಾತ್ರವಲ್ಲದೆ ಇತರರ ಪ್ರಯೋಜನಕ್ಕಾಗಿಯೂ ಖರ್ಚು ಮಾಡುವ ಅಭ್ಯಾಸವನ್ನು ಹೊಂದಿದ್ದರೆ, ನೀವು ಹಣದ ದೇವತೆ ಎಂದು ಪರಿಗಣಿಸಲ್ಪಟ್ಟ ಲಕ್ಷ್ಮಿ ದೇವಿಯ ಸಂಪೂರ್ಣ ಆಶೀರ್ವಾದವನ್ನು ಪಡೆಯುತ್ತೀರಿ. ನೀವು ಇತರರ ಮೇಲೆ ಖರ್ಚು ಮಾಡುವ ಹಣವು ನಿಮಗೆ ಹೇಗಾದರೂ ಹಿಂತಿರುಗುತ್ತದೆ. ಅಲ್ಲದೆ, ಅದು ಹಲವು ಪಟ್ಟು ಹೆಚ್ಚು ಹಣ ನಿಮ್ಮ ಬಳಿಗೆ ಬರುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.
* ನಾವು ಹಣದ ಮೌಲ್ಯವನ್ನು ತಿಳಿದುಕೊಳ್ಳಬೇಕು ಮತ್ತು ಅದನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಲು ಕಲಿಯಬೇಕು. ನಮ್ಮ ಗಳಿಕೆಯ ಹತ್ತನೇ ಒಂದು ಭಾಗವನ್ನು ಉಳಿಸಿದಾಗ, ಉಳಿತಾಯದಲ್ಲಿರುವ ಹಣವು ಹೆಚ್ಚಿನ ಹಣವನ್ನು ಆಕರ್ಷಿಸುತ್ತದೆ ಎಂದು ಚಾಣಕ್ಯ ಹೇಳುತ್ತಾನೆ. ಉಳಿತಾಯದ ಹಣವು ನಮಗೆ ಆದಾಯ ಬರುವ ಮಾರ್ಗಗಳನ್ನು ಹೆಚ್ಚಿಸುತ್ತದೆ.
* ನೀವು ಬಹಳಷ್ಟು ಹಣ ಸಂಪಾದಿಸುತ್ತಿದ್ದರೆ, ಹೊರಗಿನವರಿಗೆ ಅದರ ಬಗ್ಗೆ ತುಂಬಾ ಹೇಳಿಕೊಳ್ಳುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಅದರಿಂದ ನೀವು ನಿಮ್ಮ ಹಣವನ್ನು ಕಳ್ಳರು ಮತ್ತು ದುಷ್ಟ ಕಣ್ಣುಗಳಿಂದ ಸಂಪೂರ್ಣವಾಗಿ ರಕ್ಷಿಸಬಹುದು ಮತ್ತು ನಿಮ್ಮ ಸಂಪತ್ತನ್ನು ಹೆಚ್ಚಿಸಬಹುದು.
* ಹಣವನ್ನು ಎಂದಿಗೂ ಇತರರನ್ನು ಅವಮಾನಿಸಲು ಅಥವಾ ಕಿರುಕುಳ ನೀಡಲು ಬಳಸಬಾರದು, ಬದಲಿಗೆ ಇತರರಿಗೆ ಸಹಾಯ ಮಾಡಲು ಬಳಸಬೇಕು. ಆಗ ಮಾತ್ರ ಆ ಹಣವು ನಿಮ್ಮ ಬಳಿಗೆ ಆಕರ್ಷಣೆಗೊಳ್ಳುತ್ತದೆ. ಅಲ್ಲದೆ, ಚಾಣಕ್ಯನ ಪ್ರಕಾರ ನಾವು ನಮ್ಮ ಸಂಪತ್ತನ್ನು ಒಳ್ಳೆಯದಕ್ಕಾಗಿ ಬಳಸಿದಷ್ಟು ಹಣವು ಬೆಳೆಯುತ್ತಲೇ ಹೋಗುತ್ತದೆ.
ವಿಶೇಷ ಸೂಚನೆ: ಮೇಲಿನ ಮಾಹಿತಿ ಸಾಮಾನ್ಯ ಸಾರ್ವಜನಿಕ ಮಾಹಿತಿಯನ್ನು ಆಧರಿಸಿದೆ. ವಿಜಯವಾಣಿ.ನೆಟ್ ಅದರ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ. ಯಾವುದೇ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೊದಲು, ಸಂಬಂಧಿತ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.