ಜೀವನದಲ್ಲಿ ಖುಷಿಯಾಗಿ, ನೆಮ್ಮದಿಯಿಂದ ಇರಬೇಕಾ? ಹಾಗಾದ್ರೆ ಚಾಣಕ್ಯನ ಈ ಮಾತುಗಳನ್ನು ಅನುಸರಿಸಿ! Chanakya Niti

Chanakya Niti
Published on

Chanakya Niti : ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು ಇಲ್ಲ. ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ರಾಜಕೀಯ, ರಾಜತಾಂತ್ರಿಕತೆ ಮತ್ತು ಮಿಲಿಟರಿ ಸೈನ್ಸ್ ಸೇರಿದಂತೆ ಅನೇಕ ವಿಷಯಗಳ ಮೇಲೆ ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಪ್ರತಿಯೊಂದು ವಿಷಯದ ಮೇಲೂ ಚಾಣಕ್ಯರ ದೃಷ್ಟಿಕೋನ ತುಂಬಾ ವಿಶಾಲವಾಗಿದೆ. ಈ ಕಾರಣದಿಂದಲೇ ಮಾನವ ಜೀವನದ ಮೇಲೆ ಪರಿಣಾಮ ಬೀರುವ ಸಣ್ಣ ಮತ್ತು ದೊಡ್ಡ ವಿಚಾರಗಳ ಮೇಲೆ ಬಹಳ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತಾರೆ. ಚಾಣಕ್ಯನ ನೀತಿಯು ಒಬ್ಬ ವ್ಯಕ್ತಿಯನ್ನು ಯಶಸ್ವಿಯಾಗಲು ಪ್ರೇರೇಪಿಸುತ್ತದೆ.

ಚಾಣಕ್ಯ ತತ್ವಗಳನ್ನು ಒಳಗೊಂಡಿರುವ ಚಾಣಕ್ಯ ನೀತಿ ಎಂಬ ಪುಸ್ತಕವನ್ನು ಬರೆಯಲಾಗಿದೆ. ಸಂತೋಷದ ಜೀವನದ ಅನೇಕ ರಹಸ್ಯಗಳನ್ನು ಆ ಪುಸ್ತಕದಲ್ಲಿ ತಿಳಿಸಲಾಗಿದೆ. ಅಲ್ಲದೆ, ಮನುಷ್ಯನಾಗಿ ಜನ್ಮ ತಾಳಿದ ವ್ಯಕ್ತಿ ತನ್ನ ಬದುಕನ್ನು ಸುಧಾರಿಸಿಕೊಳ್ಳಲು ಅನುಸರಿಸಬೇಕಾದ ಧರ್ಮ, ಕರ್ಮ, ಪಾಪ ಹಾಗೂ ಪುಣ್ಯಗಳ ಬಗ್ಗೆ ಚಾಣಕ್ಯನ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಮನುಷ್ಯರಾಗಿ ಹುಟ್ಟಿದ ನಾವು ನಮ್ಮ ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಭಾವಿಸುತ್ತೇವೆ. ಅದಕ್ಕೆ ದಾರಿಯನ್ನು ಚಾಣಕ್ಯ ಹಾಕಿಕೊಟ್ಟಿದ್ದಾರೆ. ಆ ದಾರಿಯಲ್ಲಿ ನಡೆದರೆ ಯಶಸ್ಸು ಖಂಡಿತವಾಗಿ ಸಿಗುತ್ತದೆ.

ಚಾಣಕ್ಯ ನೀತಿಯಲ್ಲಿ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಜೀವನದಲ್ಲಿ ಕೆಲವೊಂದು ನಿಯಮಗಳನ್ನು ಅನುಸರಿಸಿದರೆ ಮತ್ತು ಕೆಲವೊಂದು ಭಾವನೆಗಳನ್ನು ನಿಯಂತ್ರಿಸಿದರೆ ಖುಷಿಯಾಗಿ ಮತ್ತು ನೆಮ್ಮಯಿಂದ ಬದುಕಬಹುದು.

ನಿಮ್ಮ ಜೀವನ ಸಂತೋಷವಾಗಿರಬೇಕೆಂದರೆ, ನೀವು ಪ್ರಪಂಚದೊಂದಿಗೆ ಸಾಮರಸ್ಯದಿಂದ ಬದುಕಲು ಕಲಿಯಬೇಕು. ನಿಮ್ಮಲ್ಲಿನ ಹಠಮಾರಿತನವನ್ನು ಬಿಡಬೇಕು. ಏಕೆಂದರೆ ಹಠಮಾರಿತನ ಸಂತೋಷವನ್ನೇ ನಾಶಪಡಿಸುತ್ತದೆ. ನಾನು ಹೇಳಿದ್ದೇ ನಡೆಯಬೇಕೆಂಬ ಭಾವನೆ ಇರಬಾರದು. ಮದುವೆಯಾದ ಬಳಿಕ ಗಂಡ ಮತ್ತು ಹೆಂಡತಿ ತಮ್ಮ ಸಂಬಂಧದಲ್ಲಿ ಸಂತೋಷವಾಗಿರಲು ಬಯಸಿದರೆ, ಉತ್ತಮ ಸ್ನೇಹಿತರಂತೆ ಇರಲು ಮತ್ತು ಪರಸ್ಪರ ಬಿಟ್ಟುಕೊಡದಿರುವುದನ್ನು ಕಲಿಯಬೇಕು.

ಚಾಣಕ್ಯನ ಬೋಧನೆಗಳ ಪ್ರಕಾರ, ಕಾಮವು ಜಗತ್ತಿನ ಅತ್ಯಂತ ದೊಡ್ಡ ರೋಗ. ಅದೇ ರೀತಿ, ಅಜ್ಞಾನವು ಕೂಡ ನಮ್ಮ ದೊಡ್ಡ ಶತ್ರು. ಕೋಪಕ್ಕಿಂತ ಮಾರಕವಾದ ಬೆಂಕಿ ಇನ್ನೊಂದಿಲ್ಲ. ಈ ಭಾವನೆಗಳನ್ನು ಹೇಗೆ ನಿಯಂತ್ರಿಸಬೇಕೆಂದು ತಿಳಿದಿರುವವರಿಗೆ ಜೀವನದಲ್ಲಿ ಎಂದಿಗೂ ಸಂತೋಷದ ಕೊರತೆ ಇರುವುದಿಲ್ಲ.

ಶ್ರೀಮಂತನಾಗಿ ಹುಟ್ಟಿದರೂ ಶಿಕ್ಷಣವನ್ನು ಖಂಡಿತವಾಗಿಯೂ ಮುಂದುವರಿಸಬೇಕು ಎಂದು ಚಾಣಕ್ಯ ಹೇಳುತ್ತಾನೆ. ಸಂಪತ್ತು ಇದೆ ಎಂಬ ಕಾರಣಕ್ಕೆ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಜೀವನವು ದುಃಖದಿಂದ ತುಂಬುತ್ತದೆ. ನಾವು ಎಲ್ಲವನ್ನೂ ಕಳೆದುಕೊಂಡಿದ್ದರೂ ಸಹ, ಅದನ್ನು ಒಂದೇ ಒಂದು ವಿಷಯದ ಮೂಲಕ ಮರಳಿ ಪಡೆಯಬಹುದು. ಅದುವೇ ಶಿಕ್ಷಣ. ಶಿಕ್ಷಣ ಮಾತ್ರ ನಮಗೆ ಜೀವನದಲ್ಲಿ ನಿಜವಾದ ಸಂತೋಷ ಮತ್ತು ಭದ್ರತೆಯನ್ನು ನೀಡುತ್ತದೆ.

ಒಬ್ಬ ವ್ಯಕ್ತಿಯು ತನ್ನ ಜ್ಞಾನವನ್ನು ಬೆಳೆಸಿಕೊಳ್ಳಲು ಹೆಚ್ಚು ಶ್ರಮಿಸಿದಷ್ಟೂ, ಅವನು ಸಂತೋಷದಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಚಾಣಕ್ಯ ಹೇಳುತ್ತಾನೆ. ಜೀವನದಲ್ಲಿ ಸಂತೋಷವಾಗಿರಲು ಬಯಸಿದರೆ, ನೀವು ಪ್ರಾಮಾಣಿಕವಾಗಿ ಆಧ್ಯಾತ್ಮಿಕತೆಯನ್ನು ಅಭ್ಯಾಸ ಮಾಡಬೇಕು. ಇದು ನಿಮ್ಮ ಮನಸ್ಸನ್ನು ಶುದ್ಧೀಕರಿಸುತ್ತದೆ ಮತ್ತು ದುಃಖವನ್ನು ಉಂಟುಮಾಡುವ ಕ್ರಿಯೆಗಳಿಂದ ದೂರವಿರಲು ಅಗತ್ಯವಾದ ಸ್ಪಷ್ಟ ಚಿಂತನೆಯನ್ನು ನೀಡುತ್ತದೆ.

ವಿಶೇಷ ಸೂಚನೆ: ಮೇಲಿನ ಮಾಹಿತಿ ಸಾಮಾನ್ಯ ಸಾರ್ವಜನಿಕ ಮಾಹಿತಿಯನ್ನು ಆಧರಿಸಿದೆ. ವಿಜಯವಾಣಿ.ನೆಟ್​ ಅದರ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ. ಯಾವುದೇ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೊದಲು, ಸಂಬಂಧಿತ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net