

Pig Farm : ಈ ಆಧುನಿಕ ಯುಗದಲ್ಲಿ ಹೆಚ್ಚಿನ ಯುವಕರು ಕೃಷಿ ಕೆಲಸ ಮಾಡಲು ಹಿಂಜರಿಯುತ್ತಾರೆ. ತುಂಬಾ ಓದಿದ ನಂತರ ಕೆಲಸ ಸಿಗದಿದ್ದಾಗ ಕೃಷಿಯಂತಹ ಕೆಲಸಗಳನ್ನು ಮಾಡಲು ಯಾರೂ ಮುಂದ ಬರುವುದಿಲ್ಲ. ಆದರೆ, ಕೆಲವರು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡು ಯಶಸ್ಸನ್ನು ಸಹ ಸಾಧಿಸಿದ್ದಾರೆ. ಚೆನ್ನಾಗಿ ಓದಿದ ಬಳಿಕ ಲಕ್ಷ ಲಕ್ಷ ಸಂಬಳ ಸಿಗುವ ಕೆಲಸ ಸಿಕ್ಕರೂ ಅದನ್ನು ತೊರೆದು ಕೃಷಿಯನ್ನು ಮಾಡಿ ಯಶಸ್ಸು ಕಂಡಿದ್ದಾರೆ. ಅಂಥದ್ದೇ ಸ್ಟೋರಿಯನ್ನು ನಾವಿಂದು ನಿಮಗೆ ತಿಳಿಸಲಿದ್ದೇವೆ.
ಇದು ಚೀನಾದ ಯುವತಿಯೊಬ್ಬಳ ಯಶೋಗಾಥೆ. 27 ವರ್ಷದ ಯುವತಿ ಗಗನಸಖಿ ಕೆಲಸವನ್ನು ತೊರೆದು ಕೃಷಿ ಜೀವನ ಆರಂಭಿಸಿದ ಕಥೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಂಬಳದ ಉದ್ಯೋಗವನ್ನು ಬಿಟ್ಟು ಕೃಷಿ ಆರಂಭಿಸಿದ ಯುವತಿ, ಕೇವಲ ಎರಡೇ ತಿಂಗಳಲ್ಲಿ 2,00,000 ಯುವಾನ್ ಅಂದರೆ, ಭಾರತೀಯ ಕರೆನ್ಸಿ ಪ್ರಕಾರ 22.8 ಲಕ್ಷ ರೂಪಾಯಿ ಸಂಪಾದನೆ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾಳೆ. ವಿಮಾನದಲ್ಲಿ ಗಗನಸಖಿಯಾಗಿ ಕೆಲಸ ಮಾಡುವಾಗ ಆಕೆ ತಿಂಗಳಿಗೆ ಕೇವಲ 32,000 ರೂ.ಗಳನ್ನು ಮಾತ್ರ ಪಡೆಯುತ್ತಿದ್ದಳು.
ಈಶಾನ್ಯ ಚೀನಾದ ಹೈಲಾಂಗ್‌ಜಿಯಾಂಗ್ ಪ್ರಾಂತ್ಯದ ಯುವತಿ ಯಾಂಗ್ ಯಾಂಕ್ಸಿ ಹಂದಿ ಫಾರ್ಮ್ ಅನ್ನು ಪ್ರಾರಂಭಿಸಿದ್ದಾರೆ. ಪದವಿ ಪಡೆದ ನಂತರ, ಶಾಂಘೈ ಏರ್‌ಲೈನ್ಸ್‌ನಲ್ಲಿ ಐದು ವರ್ಷಗಳ ಗಗನಸಖಿಯಾಗಿ ಕೆಲಸ ಮಾಡಿದರು. 2022ರಲ್ಲಿ ತಮ್ಮ ಕೆಲಸವನ್ನು ತ್ಯಜಿಸಿ, ಅನಾರೋಗ್ಯ ಪೀಡಿತ ತಮ್ಮ ತಾಯಿಯನ್ನು ನೋಡಿಕೊಳ್ಳಲು ಮನೆಗೆ ಮರಳಿದರು.
2023ರ ಏಪ್ರಿಲ್ನಲ್ಲಿ ಸಂಬಂಧಿಕರೊಬ್ಬರ ಹಂದಿ ಸಾಕಣೆ ಕೇಂದ್ರವನ್ನು ಯಾಂಗ್, ವಹಿಸಿಕೊಂಡರು. ಇದೀಗ ಕೇವಲ ಎರಡೇ ತಿಂಗಳಲ್ಲಿ ಬರೋಬ್ಬರಿ 22 ಲಕ್ಷ ರೂ. ಆದಾಯದ ಮೂಲದ ಎಲ್ಲರ ಹುಬ್ಬೇರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯಾಂಗ್, ಆಗಾಗ ಕೃಷಿ ಮತ್ತು ಜೀವನಶೈಲಿಯ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಯುವತಿ ಇದೀಗ ಹಂದಿ ಸಾಕಾಣಿಕೆ ಮಾಡುತ್ತಾ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಾರೆ. ಅಲ್ಲದೆ, ತುಂಬಾ ಸಂತೋಷವಾಗಿರುವುದಾಗಿ ತಿಳಿಸಿದ್ದಾಳೆ. ಭವಿಷ್ಯದಲ್ಲಿ, ತನ್ನ ಕೃಷಿ ಜಮೀನನ್ನು ವಿಸ್ತರಿಸಲು, ಅಂಗಡಿಯನ್ನು ತೆರೆಯಲು ಮತ್ತು ಹೋಟೆಲ್ ಅನ್ನು ಪ್ರಾರಂಭಿಸಲು ಪ್ಲಾನ್ ಮಾಡಿದ್ದಾಳೆ. (ಏಜೆನ್ಸೀಸ್)