ಚೇತನ್​ಗೆ ವೃತ್ತಿಮಾತ್ಸರ್ಯ; ಸಿನಿಮಾ ಹಿಟ್​ ಮಾಡಿ ನಟನಾಗಿ ಉಳಿಯುವ ಸಾಮರ್ಥ್ಯವಿಲ್ಲ: ಚಕ್ರವರ್ತಿ ಸೂಲಿಬೆಲೆ

Chetan
Published on

ಬಾಗಲಕೋಟೆ: 'ಕಾಂತಾರ' ಸಿನಿಮಾ ಹಿನ್ನೆಲೆಯಲ್ಲಿ ಕರಾವಳಿಯ ಭೂತದ ಕೋಲಗಳ ಕುರಿತು ಕಮೆಂಟ್ ಮಾಡಿ, ಅದು ಹಿಂದೂ ಸಂಸ್ಕೃತಿ ಅಲ್ಲ ಎನ್ನುವ ಮೂಲಕ ವಿವಾದಕ್ಕೆ ಈಡಾಗಿರುವ ನಟ ಚೇತನ್​ಗೆ ಇದೀಗ ಯುವ ಬ್ರಿಗೇಡ್​ನ ಚಕ್ರವರ್ತಿ ಸೂಲಿಬೆಲೆ ಟಾಂಗ್ ನೀಡಿದ್ದಾರೆ. ಮಾತ್ರವಲ್ಲ, ಚೇತನ್​ಗೆ ನಟನಾಗಿ ಉಳಿಯುವ ಸಾಮರ್ಥ್ಯವಿಲ್ಲ ಎಂದೂ ಹೇಳಿದ್ದಾರೆ.

ನಟ ಚೇತನ್​ ನೀಡಿರುವ ವಿವಾದಾತ್ಮಕ ಹೇಳಿಕೆ ಕುರಿತು ಇಂದು ಬಾಗಲಕೋಟೆಯ ಬನಹಟ್ಟಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಚಕ್ರವರ್ತಿ ಸೂಲಿಬೆಲೆ, ಟೀಕೆಗೆ ತಿರುಗೇಟು ನೀಡಿದ್ದಾರೆ. ಚೇತನ್​ಗೆ ವೃತ್ತಿಮಾತ್ಸರ್ಯ, ಅವರಿಗೆ ಸಿನಿಮಾ ಹಿಟ್ ಮಾಡಿ ನಟನಾಗಿ ಉಳಿಯುವ ಸಾಮರ್ಥ್ಯವಿಲ್ಲ ಎಂದು ಹೇಳಿದ್ದಾರೆ.

ಚೇತನ್ ಕಳೆದ ಕೆಲವು ತಿಂಗಳಿಂದ ಒಂದಲ್ಲ ವಿಚಾರ ತೆಗೆದು ಹಿಂದೂ ಧರ್ಮವನ್ನು ಟಾರ್ಗೆಟ್ ಮಾಡಿ, ತಾವು ಸುದ್ದಿಯಲ್ಲಿ ಇರಲು ಪ್ರಯತ್ನಿಸುತ್ತಿದ್ದಾರೆ. ಈಗ ರಿಷಬ್ ಶೆಟ್ಟಿ ಅವರ 'ಕಾಂತಾರ' ಚಿತ್ರದ ಬಗ್ಗೆ ಹೀಗಳೆಯುವ ಪ್ರಯತ್ನ ಮಾಡಿದ್ದಾರೆ. ಭಾರತೀಯ ಸಂಸ್ಕೃತಿ ಬೇರೆ, ಮೂಲ ಭಾರತಿಯ ಸಂಸ್ಕೃತಿ ಬೇರೆ ಎನ್ನುವುದು ಎಡಪಂಥೀಯರ ಕಾಮನ್ ಅಜೆಂಡಾ. ಅವರದು ಎಂಥ ಮೂರ್ಖತನದ ವಾದವೆಂದರೆ, ಜಗತ್ತು ಅದನ್ನು ತಿರಸ್ಕರಿಸಿದ್ದರೂ ಅವರು ಇವತ್ತಿಗೂ ಅದನ್ನು ಹಿಡಿದು ನೇತಾಡುತ್ತಿದ್ದಾರೆ. ಅದನ್ನು ಬಿಟ್ಟುಬಿಟ್ಟರೆ ಇಷ್ಟು ದಿನದ ಹೋರಾಟದ ಫೇಸ್ ಹೋಗಿ ಬಿಡುತ್ತದೆ ಎಂದು ಹೀಗೆ ಮಾಡುತ್ತಿದ್ದಾರೆ ಎಂಬುದಾಗಿ ಸೂಲಿಬೆಲೆ ಹೇಳಿದ್ದಾರೆ.

ಹಿಂದೂ ಧರ್ಮ ಎಲ್ಲವನ್ನೂ ಒಳಗೊಳ್ಳುವ ಧರ್ಮ ಎಂದು ಸ್ವಾಮಿ ವಿವೇಕಾನಂದರು ಚಿಕಾಗೋ ಸಮ್ಮೇಳನದಲ್ಲಿ ಹೇಳಿದ್ದಾರೆ. ಅದು ಬುಡಕಟ್ಟು ಆಗಿರಲಿ, ಯಾವುದೇ ಸಂಸ್ಕೃತಿ ಆಗಿದ್ದರೂ ಅದು ಹಿಂದೂ ಸಂಸ್ಕೃತಿಯ ಅಂಗವೇ. ಕಾಂತಾರ ಸಿನಿಮಾದಲ್ಲಿ ದೇವರಿಗಿಂತ ದೈವಕ್ಕೆ ಹೆಚ್ಚು ಬೆಲೆ ಅಂತ ಹೇಳಿದ್ದಾರೆ. ದೈವವೂ ಹಿಂದೆ ವ್ಯಕ್ತಿಯಾಗಿದ್ದು ಸಮಾಜಕ್ಕೊಸ್ಕರ ತನ್ನನ್ನು ಸಮರ್ಪಿಸಿಕೊಂಡಿದ್ದರಿಂದ ಅವರು ತುಂಬಾ ಗೌರವಿಸ್ತಾರೆ. ಆ ಗೌರವ ದೇವರಿಗಿಂತ ಹೆಚ್ಚು. ಹಾಗಂತ ಅವರು ದೇವರನ್ನು ಪೂಜಿಸಲ್ಲ ಅಂತಲ್ಲ. ದೈವ ಪೂಜೆ ಮತ್ತು ದೇವ ಪೂಜೆ ಎರಡು ಜೊತೆಯಾಗಿ ಹೋಗುವಂಥದ್ದು. ದುರಾದೃಷ್ಟವೆಂದರೆ ಚೇತನ್​ಗೆ ಇಷ್ಟೆಲ್ಲ ಅಧ್ಯಯನ ಮಾಡುವ ಪುರಸೊತ್ತಿಲ್ಲ ಎಂದು ಸೂಲಿಬೆಲೆ ಹೇಳಿದ್ದಾರೆ.

ದಯಮಾಡಿ ಒಂದು ಸಲ ದಕ್ಷಿಣ ಕರ್ನಾಟಕ ಸುತ್ತಾಡಿಕೊಂಡು ಬನ್ನಿ. ಅಲ್ಲಿನ‌ ಜನರ ಜೊತೆ ಸಂಭಾಷಣೆ ನಡೆಸಿ. ಅಲ್ಲಿನ ಜನರ ಸಂಸ್ಕೃತಿ ಎಷ್ಟು ಆಳವಾಗಿದೆ ಎಂದರೆ ಅದು ಸನಾತನ ಧರ್ಮದ ಒಂದು ಭಾಗವೇ ಆಗಿದೆ. ಚೇತನ್ ಈ ಥರದ ಮೂರ್ಖವಾದ ಬಿಟ್ಟು ಭಾರತೀಯ ಸಂಸ್ಕೃತಿ, ಜನರೊಂದಿಗೆ ಒಂದಾಗಬೇಕು ಅಂತ ಚೇತನ್​ಗೆ ಕೇಳಿಕೊಳ್ಳುತ್ತಿದ್ದೇನೆ ಎಂಬುದಾಗಿ ಚಕ್ರವರ್ತಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net