ಸೀಟ್​ಬೆಲ್ಟ್​ ಧರಿಸದ್ದಕ್ಕೆ ದಂಡ ದುಪ್ಪಟ್ಟು; ಹೊಸ ಆದೇಶ ಜಾರಿ..

Seat belt
Published on

ಬೆಂಗಳೂರು: ಸಂಚಾರ ನಿಯಮ ಪಾಲಿಸುವಂತೆ ಮಾಡುವ ಹಾಗೂ ರಸ್ತೆ ಅಪಘಾತ ತಗ್ಗಿಸುವ ಹಿನ್ನೆಲೆಯಲ್ಲಿ ಆಗಾಗ ನಿಯಮಗಳು ಪರಿಷ್ಕೃತವಾಗುತ್ತಿದ್ದು, ಇದೀಗ ಸೀಟ್​ಬೆಲ್ಟ್​ ಧರಿಸದ್ದಕ್ಕೆ ವಿಧಿಸುವ ದಂಡದಲ್ಲೂ ಪರಿಷ್ಕರಣೆ ಆಗಿದೆ. ಹೊಸ ಆದೇಶದ ಪ್ರಕಾರ ಈ ಹಿಂದಿನದ್ದಕ್ಕಿಂತ ದುಪ್ಟಟ್ಟು ದಂಡ ವಿಧಿಸಲಾಗುವುದು.

ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸೂಚನೆ ಪ್ರಕಾರ ರಾಜ್ಯ ಪೊಲೀಸರು ಈ ಹೊಸ ಆದೇಶ ಹೊರಡಿಸಿದ್ದಾರೆ. ಮೈಸೂರು ನಗರ, ಹುಬ್ಬಳ್ಳಿ-ಧಾರವಾಡ ನಗರ, ಮಂಗಳೂರು ನಗರ, ಬೆಳಗಾವಿ ನಗರ ಮತ್ತು ಕಲಬುರಗಿ ನಗರ ಪೊಲೀಸ್ ಆಯುಕ್ತರಿಗೆ ಮತ್ತು ಬೆಂಗಳೂರ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಿಗೆ ಹಾಗೂ ರಾಜ್ಯದ ಎಲ್ಲ ಜಿಲ್ಲಾ ಪೊಲೀಸ್​ ಅಧೀಕ್ಷರಿಗೆ ಈ ಹೊಸ ಆದೇಶವನ್ನು ಹೊರಡಿಸಲಾಗಿದೆ.

ಹೊಸ ಆದೇಶದ ಪ್ರಕಾರ ಸೀಟ್​ಬೆಲ್ಟ್​ ಧರಿಸದೆ ಸಿಕ್ಕಿಹಾಕಿಕೊಂಡರೆ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಈ ಹಿಂದೆ ಇದು 500 ರೂ. ಇದ್ದು, ಈಗ ಪರಿಷ್ಕೃತ ಆದೇಶದಲ್ಲಿ ದುಪ್ಪಟ್ಟುಗೊಳಿಸಲಾಗಿದೆ. ಟಾಟಾ ಗ್ರೂಪ್ ಚೇರ್ಮನ್​ ಸೈರಸ್ ಮಿಸ್ತ್ರಿ ಇತ್ತೀಚೆಗೆ ಕಾರು ಅಪಘಾತದಲ್ಲಿ ಮೃತಪಟ್ಟಾಗ ಸೀಟ್​​ಬೆಲ್ಟ್ ವಿಚಾರ ಮುನ್ನೆಲೆಗೆ ಬಂದು ಸಾಕಷ್ಟು ಚರ್ಚೆ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net