More

  ರಾಜಕೀಯದೊಂದಿಗೆ ಸಂಸ್ಕೃತಿ ಉಳಿಯಲಿ


  ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ ಒಡೆಯರ್ ಸಲಹೆ ಗವಿಶ್ರೀ ಮಠಕ್ಕೆ ಭೇಟಿ

  ಕೊಪ್ಪಳ: ದೇಶದ ಸಂಸ್ಕೃತಿ, ಪರಂಪರೆ ಉಳಿಸುವ ಜತೆಗೆ ಅಭಿವೃದ್ಧಿ ನಿಟ್ಟಿನಲ್ಲಿ ಬಿಜೆಪಿ ಕೆಲಸ ಮಾಡುತ್ತಿದೆ. ಹೀಗಾಗಿ ಜನರು ಬಿಜೆಪಿ ಬೆಂಬಲಿಸುವ ವಿಶ್ವಾಸವಿದೆ ಎಂದು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಜಯ ಚಾಮರಾಜ ಒಡೆಯರ್ ಹೇಳಿದರು.

  ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ನಾನು ದಾವಣರೆಗೆ, ಬಳ್ಳಾರಿ ಹಾಗೂ ಕೊಪ್ಪಳ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಂಚರಿಸಿರುವೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಮ್ಮ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ರಾಜಕೀಯದೊಂದಿಗೆ ನಮ್ಮ ಸಂಸ್ಕೃತಿ, ಪರಂಪರೆ, ಪ್ರವಾಸಿ ತಾಣಗಳನ್ನು ಉಳಿಸುವ ಕೆಲಸವಾಗಬೇಕಿದೆ. ಕೊಪ್ಪಳದ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿಪಡಿಸಬೇಕಿದೆ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನನ್ನ ಆಸಕ್ತಿ ಹಾಗೂ ಬಿಜೆಪಿ ವರಿಷ್ಠರ ಕರೆ ಮೇರೆಗೆ ನಾನು ರಾಜಕೀಯಕ್ಕೆ ಬಂದಿರುವೆ. ಮೈಸೂರಿನಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.

  ಅಂಜನಾದ್ರಿ, ಹಂಪಿ ಸೇರಿ ಈ ಭಾಗದ ಪ್ರದೇಶಗಳೊಂದಿಗೆ ನಂಟಿದೆ. ಚಿಕ್ಕಂದಿನಿಂದ ಈವರೆಗೆ ಆಗಾಗ ಈ ಭಾಗಕ್ಕೆ ಬಂದು ಹೋಗಿರುವೆ. ಸಾಕಷ್ಟು ಪ್ರವಾಸಿ ತಾಣಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಬೇಕಿದೆ. ನಮ್ಮ ಅಭ್ಯರ್ಥಿ ಆಯ್ಕೆಯಾಗಿ ಈ ಭಾಗದ ಬೇಡಿಕೆ ಈಡೇರಿಸಲಿದ್ದಾರೆ ಎಂದರು.

  ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿ ವರಿಷ್ಠರು ಈಗಾಗಲೇ ನಿಲುವು ಸ್ಪಷ್ಟಪಡಿಸಿದ್ದಾರೆ. ಎಸ್‌ಐಟಿ ರಚನೆಯಾಗಿದ್ದು, ತನಿಖೆ ನಡೆಯಲಿ. ತಪ್ಪು ಎಸಗಿದವರಿಗೆ ಶಿಕ್ಷೆಯಾಗಲಿ ಎಂದರು. ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಪಕ್ಷದ ಚಂದ್ರು ಹಲಗೇರಿ, ನವೀನ ಗುಳಗಣ್ಣನವರ, ಶರಣು ತಳ್ಳಿಕೇರಿ, ಅಮಿತ್ ಕಂಪ್ಲಿಕರ್, ಮಹೇಶ ಹಾದಿಮನಿ ಇತರರಿದ್ದರು.

  See also  ಯೂಕ್ರೇನ್‌ನಿಂದ ಹಿಂದಿರುಗುತ್ತಿರುವ ಜಿಲ್ಲೆಯ ವಿದ್ಯಾರ್ಥಿಗಳು

  ಅಂಬೇಡ್ಕರ್ ಮೂರ್ತಿಗೆ ನಮನ , ಹುಚ್ಚಮ್ಮ ಚೌದ್ರಿಗೆ ಸನ್ಮಾನ


  ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹತ್ತಾರು ನಾಯಕರನ್ನು ಕರೆತಂದ ಬಿಜೆಪಿ, ಭಾನುವಾರ ಮೈಸೂರಿನ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಜಯಚಾಮರಾಜ ಒಡೆಯರ್ ಮೂಲಕ ವಿವಿಧೆಡೆ ಭೇಟಿ ಕೊಡಿಸಿ ಮತ ಸೆಳೆಯಲು ಯತ್ನಿಸಿತು. ಬೆಳಗ್ಗೆಯೇ ಕೊಪ್ಪಳಕ್ಕೆ ಆಗಮಿಸಿದ ಒಡೆಯರ್, ಗವಿಮಠ ದರ್ಶನ ಪಡೆದರು. ಅಭಿನವ ಗವಿಶ್ರೀಗಳಿಂದ ಆಶೀರ್ವಾದ ಪಡೆದು ಮಠದಂಗಳದಲ್ಲಿ ಕೆಲ ಸಮಯ ಕಳೆದರು. ಬಳಿಕ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಪುಷ್ಪಾರ್ಪಣೆ ಮಾಡಿದರು. ದಲಿತ ಸಮುದಾಯದ ಪತ್ರಿಕಾ ವಿತರಕ ಮಂಜುನಾಥ ಟಪಾಲ್ ಮನೆಗೆ ತೆರಳಿ ಉಪಾಹಾರ ಸೇವಿಸುವ ಮೂಲಕ ಸರಳತೆ ಮೆರೆದರು. ಮನೆಗೆ ಬಂದ ಅತಿಥಿಯನ್ನು ವಾರ್ಡ್ ಮಹಿಳೆಯರು ಆರತಿ ಎತ್ತಿ ಸ್ವಾಗತಿಸಿದರು. ಬಳಿಕ ಇಡ್ಲಿ, ವಡಾ, ಸಿರಾ ಉಪಾಹಾರ ಬಡಿಸಿದರು. ಒಡೆಯರ್ ಕೈಗೆ ಕಂಕಣ ಕಟ್ಟಿ ಚುನಾವಣೆಯಲ್ಲಿ ಜಯವಾಗಲೆಂದು ಹರಸಿದರು.ಬಳಿಕ ಹುಲಿಕೆರೆಗೆ ಹೊಂದಿಕೊಂಡಿರುವ ಶಿವರಾತ್ರೇಶ್ವರ ದೇಗುಲಕ್ಕೆ ತೆರಳಿದ ಯದುವೀರ್ ಈಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕುಣಿಕೇರಿಯ ಹುಚ್ಚಮ್ಮ ಚೌದ್ರಿ ನಿವಾಸಕ್ಕೆ ಭೇಟಿ ನೀಡಿ, ಅವರನ್ನು ಸನ್ಮಾನಿಸಿದರು. ಶಾಲೆ ಹಾಗೂ ಮಕ್ಕಳಿಗಾಗಿ ತನ್ನ ಜೀವನಕ್ಕೆ ಇದ್ದ ಜಮೀನು ಮಾರಾಟ ಮಾಡಿದ ಹುಚ್ಚಮ್ಮ ಕಾರ್ಯ ಶ್ಲಾಸಿದರು. ವಿವಿಧೆಡೆ ಕಾರ್ಯಕರ್ತರು ಹಾಗೂ ಕೆಲವೆಡೆ ಮನೆಮನೆ ಭೇಟಿ ನೀಡಿ ಪಕ್ಷಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಒಡೆಯರ್ ಹೋದಲೆಲ್ಲ ಜನರು ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದು ಕಂಡುಬಂತು.

  ಗವಿಮಠ ಪರಂಪರೆ ಬಗ್ಗೆ ಕೇಳಿರುವೆ. ಜಾತ್ರೆಯನ್ನು ವಾಧ್ಯಮಗಳಲ್ಲಿ ಗಮನಿಸಿರುವೆ. ಉತ್ತಮ ಗುರುಗಳು, ಆಧ್ಯಾತ್ಮ ಜತೆಗೆ ಆರೋಗ್ಯ ಸೇರಿ ಇತರ ರಂಗಗಳಲ್ಲಿ ಗುರುತರ ಸಾಧನೆ ವಾಡಿದೆ. ಮುಂದೆ ಆಹ್ವಾನ ಬಂದಲ್ಲಿ ಗವಿಮಠ ಜಾತ್ರೆಯಲ್ಲಿ ಪಾಲ್ಗೊಳ್ಳುವೆ.
  ಯದುವೀರ ಕೃಷ್ಣದತ್ತ ಜಯಚಾಮರಾಜ ಒಡೆಯರ್

  ರಾಜಕೀಯದೊಂದಿಗೆ ಸಂಸ್ಕೃತಿ ಉಳಿಯಲಿ
  ಕೊಪ್ಪಳದ ಪತ್ರಿಕಾ ವಿತರಕ ಮಂಜುನಾಥ ಟಪಾಲ್ ಮನೆಯಲ್ಲಿ ಉಪಾಹಾರ ಸೇವಿಸಿದ ಒಡೆಯರ್.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts