

ನವದೆಹಲಿ: ಇಡೀ ವಿಶ್ವವನ್ನೇ ಕಂಗೆಡಿಸಿರುವ ಕರೊನಾ ವೈರಸ್ ಮಹಾಮಾರಿಯನ್ನು ಕಿತ್ತೆಸೆಯಲು ಪ್ರತಿಯೊಂದು ಸರ್ಕಾರಗಳೂ ಶ್ರಮಿಸುತ್ತಲೇ ಇವೆ. ಏನೇ ಪ್ರಯತ್ನ ಪಟ್ಟರೂ, ಕೆಲವು ಕಡೆಗಳಲ್ಲಿ ವೈರಸ್ ತನ್ನ ಪ್ರಭಾವವನ್ನು ಬೀರುತ್ತಲೇ ಸಾಗಿದೆ.
ಕರ್ನಾಟಕ ಕೂಡ ಇದಕ್ಕೆ ಹೊರತಾಗಿಲ್ಲ. ಭಾರತದ ಮೊದಲ ಕರೊನಾ ಸಾವು ಶುರುವಾದದ್ದು ಕರ್ನಾಟಕದಲ್ಲಿಯೇ (ಕಲಬುರಗಿ). ಆದರೆ ಆನಂತದಲ್ಲಿ ಇದರ ವೇಗ ಅಷ್ಟೊಂದು ಇರಲಿಲ್ಲ. ಆದರೆ ಇತ್ತೀಚೆಗೆ ಹೊರರಾಜ್ಯಗಳಿಂದ ಬಂದವರಲ್ಲಿ ವಿಪರೀತ ಪ್ರಮಾಣದಲ್ಲಿ ಸೋಂಕು ಪತ್ತೆಯಾಗುತ್ತಿದ್ದು, ರಾಜ್ಯ ಸರ್ಕಾರವನ್ನು ನಿದ್ದೆಗೆಡಿಸಿದೆ.
ಯಾವಾಗ, ಹೇಗೆ ಹರಡುತ್ತದೆ, ಹೇಗೆ ತನ್ನ ಮಾಯಾಜಾಲವನ್ನು ಈ ವೈರಸ್ ಬೀಸುತ್ತದೆ ಎಂದು ತಿಳಿವಳಿಕೆಗೆ ಬಾರದಿದ್ದರೂ ಅದನ್ನು ನಿಭಾಯಿಸುವಲ್ಲಿ, ಕೆಲವು ಸರ್ಕಾರಗಳು ಶಕ್ತಿಮೀರಿ ಪ್ರಯತ್ನಿಸುತ್ತಿವೆ.
ಅದರಲ್ಲಿಯೂ ಯಾವುದೇ ರಾಜ್ಯಗಳ ರಾಜಧಾನಿಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸುವುದು ಅಷ್ಟು ಸುಲಭದ ಮಾತಲ್ಲ.
ಇದರ ಹೊರತಾಗಿಯೂ ನಾಲ್ಕು ಮಹಾನಗರಗಳಲ್ಲಿ ಕರೊನಾ ವೈರಸ್ ನಿಯಂತ್ರಣಕ್ಕೆ ಆಯಾ ರಾಜಕ್ಯ ಸರ್ಕಾರಗಳು ತೆಗೆದುಕೊಂಡಿರುವ ಕ್ರಮದ ಬಗ್ಗೆ ಕೇಂದ್ರ ಸರ್ಕಾರ ಅತೀವ ಸಂತೋಷ ವ್ಯಕ್ತಪಡಿಸಿದ್ದು, ಇವು ಇತರ ನಗರಗಳಿಗೆ ರೋಲ್ ಮಾಡೆಲ್ ಆಗಿವೆ ಎಂದು ಶ್ಲಾಘಿಸಿದೆ.
ಆ ನಾಲ್ಕು ಮಹಾನಗರಗಳು ಎಂದರೆ ಬೆಂಗಳೂರು, ಜೈಪುರ, ಇಂದೋರ್ ಮತ್ತು ಚೆನ್ನೈ. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಇವು ಇತರ ನಗರಗಳಿಗೆಆದರ್ಶಪ್ರಾಯವಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಕೇಂದ್ರ ಕೇಳಿದೆ.
ಈ ವೈರಸ್ ನಿರ್ವಹಣೆ ಕುರಿತಂತೆ ಕೇಂದ್ರ ಸರ್ಕಾರ ಬೇರೆಬೇರೆ ಸ್ಥಳೀಯ ಸಂಸ್ಥೆಗಳ ಜತೆ ಸಭೆ ನಡೆಸಿತ್ತು. ಈ ಸಂದರ್ಭದಲ್ಲಿ ಅಧಿಕಾರಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿತ್ತು. ಜನಸಂಖ್ಯೆ ಹೆಚ್ಚಾಗಿ ಇರುವ ನಗರಗಳಲ್ಲಿ ವೈರಸ್ ನಿಯಂತ್ರಣ ಮಾಡಲು ತೆಗೆದುಕೊಂಡಿರುವ ಕ್ರಮ, ಮರಣದ ಸಂಖ್ಯೆಯನ್ನು ತಗ್ಗಿಸಲು ಒದಗಿಸಿರುವ ವೈದ್ಯಕೀಯ ಸೌಲಭ್ಯ ಇತ್ಯಾದಿಗಳ ವಿವರಗಳನ್ನು ಕಲೆ ಹಾಕಲಾಗಿತ್ತು. ಅದರ ಆಧಾರದ ಮೇಲೆ ಈ ನಿರ್ಣಯಕ್ಕೆ ಕೇಂದ್ರ ಬಂದಿದೆ.
ವೈರಸ್ ಶೀಘ್ರವಾಗಿ ಹರಡುವುದು ತಡೆಗಟ್ಟಲು ಜೈಪುರ ಮತ್ತು ಇಂದೋರ್ ಅತ್ಯಂತ ಉತ್ತಮ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೆ, ಚೆನ್ನೈ ಮತ್ತು ಬೆಂಗಳೂರು ಮರಣದ ಪ್ರಮಾಣ ಕಡಿಮೆ ಮಾಡಲು ಸೂಕ್ತ ವೈದ್ಯಕೀಯ ಕ್ರಮಗಳನ್ನು ತೆಗೆದುಕೊಂಡಿರುವುದು ಶ್ಲಾಘನಾರ್ಹ ಎಂದಿದೆ ಕೇಂದ್ರ. ಇಂದೋರ್ ಮತ್ತು ಜೈಪುರ ನಗರಗಳಲ್ಲಿ ಮನೆ-ಮನೆ ಸಮೀಕ್ಷೆ ನಡೆಸಿ ರೋಗ ಪತ್ತೆ ಹಚ್ಚುವಲ್ಲಿ ಕ್ರಮ ತೆಗೆದುಕೊಳ್ಳುವ ಮೂಲಕ ಸೋಂಕು ತಡೆಗಟ್ಟಲು ಸಾಕಷ್ಟು ಕ್ರಮ ತೆಗೆದುಕೊಳ್ಳುತ್ತಿದ್ದರೆ, ಚೆನ್ನೈ ಮತ್ತು ಬೆಂಗಳೂರಿನಲ್ಲಿ ವೈರಸ್ ಅತಿ ವೇಗದಲ್ಲಿ ಹರಡುತ್ತಿದ್ದರೂ ಸಾವಿನ ಸಂಖ್ಯೆ ಕೇವಲ ಶೇ.1ರಷ್ಟು ಮಾತ್ರ ಇದೆ. ಇದು ಅತ್ಯಂತ ಉತ್ತಮ ಬೆಳವಣಿಗೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. (ಏಜೆನ್ಸೀಸ್)