

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಭಾರಿ ಬಾಂಬ್ ಸ್ಪೋಟಕ್ಕೆ ಸಂಚು ರೂಪಿಸಿ ಸಿಕ್ಕಿಬಿದ್ದಿರುವ ಐವರು ಶಂಕಿತ ಉಗ್ರರಿಂದ ವಶಕ್ಕೆ ಪಡೆಯಲಾಗಿರುವ 4 ಜೀವಂತ ಗ್ರೆನೇಡ್ಗಳ ಹಿಂದಿನ ರಹಸ್ಯ ಭೇದಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಗ್ರೆನೇಡ್ಗಳು ಎಲ್ಲಿ ಬಂದವು, ಶಂಕಿತರಿಗೆ ತಲುಪಿಸಿದ್ದು ಯಾರು, ಎಲ್ಲೆಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರೆಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಿದ್ಧತೆ ನಡೆಸಿದ್ದಾರೆ.
ನ್ಯಾಯಾಲಯದ ಅನುಮತಿ ಪಡೆದ ಬಳಿಕ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ಹಾಗೂ ರಾಷ್ಟ್ರೀಯ ಬಾಂಬ್ ಡೇಟಾ ಸೆಂಟರ್ಗಳು (ಎನ್ಬಿಡಿಸಿ) ಪರಿಶೀಲನೆ ಆರಂಭಿಸಲಿವೆ. ಮೊದಲಿಗೆ ಗ್ರೆನೇಡ್ಗಳನ್ನು ನಿಷ್ಕ್ರಿಯಗೊಳಿಸುವ ಕೆಲಸ ಮಾಡಲಾಗುತ್ತದೆ. ನಂತರ ಅವುಗಳ ತಯಾರಿಕೆಗೆ ಬಳಕೆಯಾಗಿರುವ ಕಚ್ಚಾ ವಸ್ತುಗಳ ವಿಂಗಡಣೆ ಮಾಡಲಾಗುತ್ತದೆ. ಬಳಿಕ ಪ್ರತಿಯೊಂದು ಕಚ್ಚಾವಸ್ತು ಎಲ್ಲಿ ತಯಾರಾಗಿರಬಹುದು? ಎಂಬುದರ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಗ್ರೆನೇಡ್ ಮಾದರಿಯನ್ನು ಬಳಿಕ ಎನ್.ಬಿ.ಡಿ.ಸಿ ಡಾಟಾಗಳ ಜತೆಗೆ ಅನಾಲಿಸಿಸ್ ಮಾಡಲಾಗುತ್ತದೆ. ದೇಶದಲ್ಲಿ ಸಂಭವಿಸುವ ಪ್ರತೀ ಸ್ಪೋಟಗಳ ಡಾಟಾ ನಿರ್ವಹಣೆ ಮಾಡುವ ಎನ್ಬಿಡಿಸಿ ಈ ಮಾದರಿಯ ಗ್ರೆನೇಡ್ ಎಲ್ಲಿಯಾದರೂ ಬಳಕೆಯಾಗಿದೆಯಾ ಎಂಬುದರ ಕುರಿತು ಕೂಲಂಕಷವಾಗಿ ಪರಿಶೀಲಿಸುತ್ತದೆ. ಈ ಎಲ್ಲ ಪರಿಶೀಲನೆಗಳ ನಂತರ ಗ್ರೆನೇಡ್ ಎಲ್ಲಿಯದ್ದು? ಹೇಗೆ ತಯಾರಾಗಿದೆ? ಈ ಮಾದರಿಯ ಸ್ಪೋಟಕ ಈ ಹಿಂದೆ ಎಲ್ಲಿಯಾದರೂ ಬಳಕೆಯಾಗಿತ್ತೆ? ಸ್ಫೋಟ ಮತ್ತು ಅದರ ಪರಿಣಾಮವೇನು ಎಂಬ ಮಾಹಿತಿ ಲಭ್ಯವಾಗಲಿದೆ ಎಂದು ಸಿಸಿಬಿಯ ಉನ್ನತ ಮೂಲಗಳು ತಿಳಿಸಿವೆ.
ಮೊಬೈಲ್ ಫೋನ್ ರಿಟ್ರೀವ್: ಶಂಕಿತ ಉಗ್ರರ ಕಳೆದ ಎರಡು ವರ್ಷಗಳ ಕರೆಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. ಶಂಕಿತರು ಈವರೆಗೆ ಯಾರ ಯಾರ ಜತೆ ಸಂಪರ್ಕ ಹೊಂದಿದ್ದರು ಎಂದು ಯುಎಪಿಎ ಸೆಕ್ಷನ್ ಅಡಿಯಲ್ಲಿ ಎರಡು ವರ್ಷಗಳ ಸಿಡಿಆರ್ ಪಡೆದು ಪರಿಶೀಲನೆಗೆ ಮುಂದಾಗಿದ್ದಾರೆ. ಅಲ್ಲದೆ ಈಗಾಗಲೆ ಕೆಲವರು ಸಿಮ್ ಬದಲಿಸಿ ಹೊಸ ಸಿಮ್ಳ ಖರೀದಿ ಮಾಡಿದ್ದಾರೆ. ಈ ಹೊಸ ಸಿಮ್ಲ್ಲಿ ಯಾರಿಗೆಲ್ಲ ಕರೆ ಮಾಡಿದ್ದಾರೆ ಎಂದು ಸಿಸಿಬಿ ತನಿಖೆ ನಡೆಸಲು ಸಿಸಿಬಿ ಮುಂದಾಗಿದೆ. ಇದಲ್ಲದೇ ಶಂಕಿತ ಉಗ್ರರ ಮೊಬೈಲ್ನಲ್ಲಿ ವಾಟ್ಸ್ಆಪ್ ಚಾಟಿಂಗ್ ಮತ್ತು ಕರೆಗಳು ಪತ್ತೆಯಾಗಿವೆ. ಶಂಕಿತರು ವಾಟ್ಸ್ಆಪ್ ಮೂಲಕ ಹಲವರಿಗೆ ಕರೆ ಮಾಡಿದ್ದಾರೆ, ಜತೆಗೆ ಚಾಟಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ. ಈ ವಾಟ್ಸ್ಆಪ್ ಚಾಟಿಂಗ್ ಮತ್ತು ಕರೆಗಳನ್ನು ಯಾರಿಗೆ ಮಾಡಿದರು? ಯಾರ ಜತೆ ಮಾತಾಡಿದ್ದಾರೆ? ಯಾವ ಲೋಕೇಷನ್ಗೆ ಕರೆಗಳು ಹೋಗಿವೆ ಎಂದು ಸಿಸಿಬಿ ವಿಶೇಷ ತಂಡ ತನಿಖೆ ನಡೆಸುತ್ತಿದೆ. ಕೆಲವರ ಬಳಿ ಆಂಡ್ರಾಯ್ಡ್ ಮೊಬೈಲ್ ಇದ್ದರೆ ಇನ್ನೂ ಕೆಲವರ ಬಳಿ ಬೆಸಿಕ್ ಮೊಬೈಲ್ಗಳಿವೆ. ಸದ್ಯ ಶಂಕಿತರ ಬಳಿಯಿದ್ದ 12 ಮೊಬೈಲ್ ಫೋನ್ ರಿಟ್ರೀವ್ ಮಾಡಲು ಸಿಸಿಬಿ ಕಳಿಸಿದೆ.
ಬ್ಯಾಂಕ್ ಖಾತೆ ಪರಿಶೀಲನೆ: ಇದಷ್ಟೇ ಅಲ್ಲದೇ ಶಂಕಿತ ಉಗ್ರರ ಡಿಜಿಟಲ್ ಪೇಮೆಂಟ್ ಖಾತೆಗಳಿಗೆ ಸಂದಾಯವಾಗಿರುವುದು ಸಿಸಿಬಿ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಬಂಧಿತ ಐವರು ಶಂಕಿತರ ಬ್ಯಾಂಕ್ ಖಾತೆ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಕೆಲವು ಬಾರಿ ಅಗತ್ಯ ಅನುಸಾರ ಹಣ ವರ್ಗಾವಣೆ ಆಗಿರುವುದು, ಐವರು ಶಂಕಿತ ಉಗ್ರರಿಗೆ ಆರೋಪಿ ಜುನೈದ್ ವಿದೇಶದಿಂದ ಹಣ ಸಂದಾಯ ಮಾಡುತ್ತಿದ್ದನು ಎಂಬ ಅಂಶ ಸಿಸಿಬಿ ತನಿಖೆಯಲ್ಲಿ ತಿಳಿದು ಬಂದಿದೆ.
ಕೇಂದ್ರಕ್ಕೆ ವರದಿ ರವಾನೆ: ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಬಂಧಿಸಿರುವ ಸಿಸಿಬಿ ಪ್ರಕರಣದ ಪ್ರಾಥಮಿಕ ತನಿಖಾ ವರದಿಯನ್ನು ಕೇಂದ್ರ ಗೃಹ ಇಲಾಖೆಗೆ ವರದಿ ರವಾನೆ ಮಾಡಿದ್ದಾರೆ. ಬಂಧನವಾದ ಶಂಕಿತ ಉಗ್ರರ ಸಂಖ್ಯೆ, ಹೆಸರು, ಯಾವ ಸೆಕ್ಷನ್ನಲ್ಲಿ ಪ್ರಕರಣ ದಾಖಲಾಗಿದೆ. ಶಂಕಿತರ ಮೇಲಿರುವ ಆರೋಪಗಳು ಹಾಗೂ ಸಂಚಿನ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಶೀಘ್ರ ಲುಕ್ಔಟ್ ನೋಟಿಸ್ ಜಾರಿ: ವಿದೇಶಕ್ಕೆ ಪರಾರಿಯಾಗಿರುವ ಶಂಕಿತ ಉಗ್ರ ಜುನೈದ್ ಬಂಧನಕ್ಕಾಗಿ ಇಂಟರ್ ಪೋಲ್ ನೆರವು ಪಡೆಯಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ. ಜುನೈದ್ ಜಾಮೀನು ಪಡೆದು ಎರಡು ವರ್ಷಗಳ ಹಿಂದೆ ಜೈಲಿನಿಂದ ಹೊರಬಂದು ದುಬೈಗೆ ಹಾರಿ ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಆತನ ಬಂಧನಕ್ಕಾಗಿ ಇಂಟರ್ಪೋಲ್ಗೆ ವರದಿ ಸಲ್ಲಿಸಲು ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. 2021ರಲ್ಲಿ ಜುನೈದ್ ದುಬೈಗೆ ಪ್ರಯಾಣ ಬೆಳೆಸಿರುವ ಮಾಹಿತಿ ಲಭ್ಯವಾಗಿದ್ದು ಆತ ಅಲ್ಲಿಂದ ಎಲ್ಲಿಗೆ ಹೋಗಿದ್ದಾನೆ ಎಂಬುದು ಖಚಿತವಾಗಿಲ್ಲ. ವಿದೇಶದಲ್ಲಿ ನೆಲೆಸಿರುವ ಜುನೈದ್ ಬಗ್ಗೆ ರಾಷ್ಟ್ರೀಯ ತನಿಖಾ ದಳ, ಕೇಂದ್ರ ತನಿಖಾ ಸಂಸ್ಥೆಗಳ ಜತೆ ಈಗಾಗಲೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗಿದೆ. ಅಲ್ಲದೇ ಇಂಟರ್ಪೋಲ್ಗೆ ಸಹ ವರದಿ ನೀಡಲಾಗಿದ್ದು, ಶೀಘ್ರ ಲುಕ್ಔಟ್ ನೋಟಿಸ್ ಹೊರಡಿಸಲಾಗುತ್ತದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.