

ವೈಶಾಲಿ: ಆಹಾರ ಅರಸಿ ಅಲೆದಾಡುತ್ತಿದ್ದ ಬೆಕ್ಕಿನ ತಲೆ ಸ್ಟೀಲ್ ಪಾತ್ರೆಯಲ್ಲಿ ಸಿಲುಕಿಕೊಂಡಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.
ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಆಹಾರಕ್ಕಾಗಿ ಅಲೆಯುತ್ತಿದ್ದ ಲಾಲ್ಗಂಜ್ ಪ್ರದೇಶದ ಮನೆಗೆ ಬೆಕ್ಕೊಂದು ಪ್ರವೇಶಿಸಿದೆ. ದುಂಡಗಿನ ಉಕ್ಕಿನ ಪಾತ್ರೆಯಲ್ಲಿ ಹಾಲಿರುವುದನ್ನು ನೋಡಿದ ಬೆಕ್ಕು, ಅದನ್ನು ಕುಡಿಯುವುದಕ್ಕೊಸ್ಕರ ತಲೆಯ ಭಾಗವನ್ನು ಮಾತ್ರ ಪಾತ್ರೆಯಲ್ಲಿ ಹಾಕಿದೆ.
ಈ ವೇಳೆ ತಲೆಯು ಪಾತ್ರೆಯೊಳಗೆ ಹೋಗದಿದ್ದಾಗ ಹಲವು ಸಲ ಪ್ರಯತ್ನಿಸಿ, ಕೊನೆಗೂ ತನ್ನ ತಲೆಯನ್ನು ಪಾತ್ರೆಯಲ್ಲಿ ಸೇರಿಸಿದೆ. ಕೊನೆಗೆ ಹಾಲು ಕುಡಿದ ನಂತರ ತಲೆಯನ್ನು ಹೊರತೆಗೆಯಲು ಯತ್ನಿಸಿದ್ದು. ಬೆಕ್ಕಿನ ಪ್ರಯತ್ನ ವಿಫಲವಾಗಿದೆ. ಕೊನೆಗೆ ಈ ತೊಂದರೆಯಿಂದಾಗಿ ಬೆಕ್ಕು ಹತಾಶೆಯಿಂದ ಮನೆಯಲ್ಲಿ ತಿರುಗಾಡುತ್ತಿತ್ತು.
ಬಳಿಕ ಮನೆಯ ಸದಸ್ಯರು ಬೆಕ್ಕಿನ ಮೈಮೇಲೆ ಬಿದಿರಿನ ಕೋಲನ್ನು ಎಸೆದಿದ್ದು, ಗಾಬರಿಯಾದ ಬೆಕ್ಕು ಓಡಿಹೋಗಲು ಯತ್ನಿಸಿ ಪಾತ್ರೆಯಿಂದ ತಲೆ ಹೊರತೆಗೆದು ಕಿಟಕಿ ಮೂಲಕ ಎಸ್ಕೇಪ್ ಆಗಿದೆ. ಈ ವೇಳೆ ಬಾಯಿಯ ಭಾಗದಲ್ಲಿ ಸಣ್ಣ ಪುಟ್ಟ ಗಾಯಗಳಾಗಿವೆ.(ಏಜೆನ್ಸೀಸ್)