

ಮೈಸೂರು: ಹಣಕ್ಕಾಗಿ ಸಾಮಿಲ್ ಒಂದರ ಕಾವಲುಗಾರ ಹಾಗೂ ಮಾನಸಿಕ ಅಸ್ವಸ್ಥನನ್ನು ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಎಸ್.ಎಸ್. ಸಾಮಿಲ್ನಲ್ಲಿ ನಡೆದಿದೆ.
ಮೃತರನ್ನು ವೆಂಕಟೇಶ್(65), ಷಣ್ಮುಗಂ(60) ಎಂದು ಗುರತಿಸಲಾಗಿದ್ದು, ಪ್ರಕರಣ ಸಂಬಂಧ ಹುಣಸೂರು ಪೊಲೀಸರು ಮೂವರು ಆರೋಪಿಗಳ ಪೈಕಿ ಅಭಿಷೇಕ್(23)ನನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ತಲೆಮಾರಿಸಿಕೊಂಡಿದ್ದು, ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಜೂನ್ 22ರಂದು ಹಣದ ಆಸೆಗಾಗಿ ಮೂವರು ಆರೋಪಿಗಳು ಹುಣಸೂರಿನ ವಿಶ್ವೇಶ್ವರಯ್ಯ ಸರ್ಕಲ್ನಲ್ಲಿರುವ ಎಸ್.ಎಸ್. ಸಾಮಿಲ್ನ ಕಾವಲುಗಾರರಾದ ವೆಂಕಟೇಶ್ ಹಾಗೂ ಮಾನಸಿಕ ಅಸ್ವಸ್ಥ ಷಣ್ಮುಗಂನನ್ನು ಹತ್ಯೆ ಮಾಡಿದ್ದರು.
ಹತ್ಯೆ ಬಳಿಕ ಮೃತರ ಜೇಬನ್ನು ಪರಿಶೀಲಿಸಿ ಅದರಲ್ಲಿ ಸಿಕ್ಕ 488 ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿಗಳನ್ನು ಪರಿಶೀಲಿಸಿ ಘಟನೆ ನಡೆದ 36 ಘಂಟೆಗಳ ಒಳಗಾಗಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಅಭಿಷೇಕ್ ಈ ಹಿಂದೆ ಹುಣಸೂರು ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ನಡೆದ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.