ಚನ್ನಪಟ್ಟಣ ತಹಸೀಲ್ದಾರ್ ಗಿರೀಶ್ ವಿವಸ್ತ್ರಗೊಳಿಸಿ ಹಲ್ಲೆ: ಮೂವರು ದುಷ್ಕರ್ಮಿಗಳಿಂದ ಕೃತ್ಯ; ಠಾಣೆಗೆ ದೂರು ನೀಡಿದ ಅಧಿಕಾರಿ | Tahsildar Girish

ತಹಸೀಲ್ದಾರ್ ಬಿ.ಎನ್​.ಗಿರೀಶ್ ಮತ್ತು ಆರೋಪಿ ಅನುಷ್
ತಹಸೀಲ್ದಾರ್ ಬಿ.ಎನ್​.ಗಿರೀಶ್ ಮತ್ತು ಆರೋಪಿ ಅನುಷ್
Published on
ಬೆಂಗಳೂರು ದಕ್ಷಿಣ: ಚನ್ನಪಟ್ಟಣ ತಹಸೀಲ್ದಾರ್ ಬಿ.ಎನ್. ಗಿರೀಶ್(Tahsildar Girish) ಮೇಲೆ ಅವರ ಸರ್ಕಾರಿ ನಿವಾಸದಲ್ಲಿಯೇ ಹಲ್ಲೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಮೂವರು ದುಷ್ಕರ್ಮಮಿಳು ತಮ್ಮನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿ, ಅದನ್ನು ವಿಡಿಯೋ ಮಾಡಿಕೊಂಡು ಹಣಕ್ಕೆ ಬ್ಲಾಕ್​ಮೇಲ್ ಮಾಡಿದ್ದಾರೆ ಎಂದು ಅಧಿಕಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚನ್ನಪಟ್ಟಣ ನಗರದ ಕುವೆಂಪುನಗರದ 7ನೇ ಅಡ್ಡರಸ್ತೆಯಲ್ಲಿರುವ ತಹಸೀಲ್ದಾ‌ರ್ ವಸತಿಗೃಹದಲ್ಲಿ ಜೂ.28ರಂದು ಹಲ್ಲೆ ಕೃತ್ಯ ನಡೆದಿದೆ. ವಿಡಿಯೋ ಬೈಟ್‌ಗಾಗಿ ಮಧ್ಯರಾತ್ರಿ ಬಂದಿದ್ದ ಮೂವರು ಆಸಾಮಿಗಳು, ಅವರ ಪ್ರಜ್ಞೆ ತಪ್ಪಿಸುವ ಜತೆಗೆ ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆ ಜೊತೆಗೆ ಬೆತ್ತಲೆ ವಿಡಿಯೋ ಚಿತ್ರೀಕರಣ ಮಾಡಿಕೊಂಡು ₹10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಗಿರೀಶ್ ಚನ್ನಪಟ್ಟಣ ಪುರ ಪೊಲೀಸ್ ಠಾಣೆಯಲ್ಲಿ ಜು.1ರಂದು ದೂರು ನೀಡಿದ್ದಾರೆ. ಬೆಂಗಳೂರಿನ ಅನುಷ್‌, ಶೋಭರಾಜ್, ನವೀನ್ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಏನಿದೆ?

ನಾನು ಮೈಸೂರಿನಲ್ಲಿ ತಹಸೀಲ್ದಾ‌ರ್ ಆಗಿದ್ದಾಗ ಫೇಸ್‌ಬುಕ್ ಮೂಲಕ ಅನುಷ್ ಅಲಿಯಾಸ್ ಅನುಷ್ ಶಿವಪ್ಪ ಪರಿಚಯವಾಗಿದ್ದರು. ಜೂ.28ರ ರಾತ್ರಿ 11ರಲ್ಲಿ ಫೇಸ್‌ಬುಕ್‌ನಲ್ಲಿ ಕಾಲ್ ಮೀ ಸಂದೇಶ ಕಳಿಸಿದ್ದ. ಕರೆ ಮಾಡಿದಾಗ ಬೆಂಗಳೂರಿಗೆ ಹೋಗುತ್ತಿದ್ದು, ನಿಮ್ಮ ನಿವಾಸದ ಬಳಿ ಬರುತ್ತೇವೆ ಎಂದರು. ಮಧ್ಯರಾತ್ರಿ 2ಕ್ಕೆ ಅನುಷ್ ತನ್ನಿಬ್ಬರು ಸ್ನೇಹಿತರಾದ ಶೋಭರಾಜ್, ನವೀನ್ ಜತೆ ಬಂದಿದ್ದರು. ಮದ್ಯದ ಬಾಟಲಿ ತಂದಿದ್ದ ಅವರು, ಮನೆಯಲ್ಲೇ ಕುಡಿಯಲು ಆರಂಭಿಸಿದರು. ನನಗೆ ಹಣ್ಣಿನ ಜ್ಯೂಸ್ ಕೊಟ್ಟರು. ಅದನ್ನು ಕುಡಿದ ಕೆಲ ಹೊತ್ತಿನಲ್ಲೇ ತಲೆ ಸುತ್ತಿದಂತಾಯಿತು.
ಬೆಳಗಿನ ಜಾವ ಎಚ್ಚರವಾದಾಗ ಮೈ ಮೇಲೆ ಬಟ್ಟೆಗಳಿರಲಿಲ್ಲ. ನನ್ನ ಕೆನ್ನೆಗೆ ಅನುಷ್ ಹೊಡೆಯುತ್ತಿದ್ದ. 8 ಗ್ರಾಂ ಚಿನ್ನದ ಉಂಗುರ, 14 ಗ್ರಾಂ ಚೈನ್ ಹಾಗೂ ಸೊಂಟದಲ್ಲಿದ್ದ ಬೆಳ್ಳಿ ಉಡುದಾರವನ್ನು ಬಲವಂತವಾಗಿ ಕಸಿದುಕೊಂಡರು. ₹10 ಲಕ್ಷಕ್ಕೆ ಬೇಡಿಕೆ ಇಟ್ಟು ಹಲ್ಲೆ ಮಾಡಿದರು. ಶೋಭರಾಜ್ ಮತ್ತು ನವೀನ್ ನನ್ನನ್ನು ಹಾಸಿಗೆ ಕೆಳಕ್ಕೆ ಮಲಗಿಸಿಕೊಂಡು ದಿಂಬಿನಿಂದ ಮುಖ ಮುಚ್ಚಿ ಉಸಿರುಗಟ್ಟಿಸುವ ಯತ್ನ ನಡೆಸಿದರು. ನಗ್ನ ವಿಡಿಯೋ ಚಿತ್ರೀಕರಿಸಿಕೊಂಡು, ಬೆಳಗ್ಗೆ 6 ಗಂಟೆಯವರೆಗೆ ಗೃಹಬಂಧನದಲ್ಲಿಟ್ಟರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಮುಖ ಆರೋಪಿ ಅರೆಸ್ಟ್

ಪ್ರಕರಣದಲ್ಲಿ ಪ್ರಮುಖ ಆರೋಪಿ ಅನುಷ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತಃ ಚಾಮರಾಜ ನಗರ ಜಿಲ್ಲೆಯವನಾದ ಅನುಷ್ (33) ಜಿಮ್ ತರಬೇತುದಾರನಾಗಿ ಮೈಸೂರಿನಲ್ಲಿ ನೆಲೆಸಿದ್ದ. ಈತನ ವಿರುದ್ಧ ಮೈಸೂರಿನ ವಿಜಯನಗರ ಠಾಣೆಯಲ್ಲಿ ರೌಡಿ ಶೀಟರ್ ಪಟ್ಟಿ ತೆರೆಯಲಾಗಿದೆ. ರಾಷ್ಟ್ರೀಯ ಶಿವಶಕ್ತಿ ಸೇನಾ ಪಡೆ ಸಂಸ್ಥಾಪಕ ಅಧ್ಯಕ್ಷನಾಗಿದ್ದ ಈತನ ವಿರುದ್ಧ ಹೊಡೆದಾಟ ಸೇರಿ ಕೆಲ ಪ್ರಕರಣಗಳು ದಾಖಲಾಗಿವೆ.

ಸರ್ಕಾರಿ ನಿವಾಸ ದುರ್ಬಳಕೆ

ಕೆಎಎಸ್ ಅಧಿಕಾರಿಯಾದ ಗಿರೀಶ್ ತಾವು ಕೆಲಸ ಮಾಡಿರುವ ಶಿವಮೊಗ್ಗ, ಮೈಸೂರು, ದಾವಣಗೆರೆ ಸೇರಿ ಈಗಿನ ಚನ್ನಪಟ್ಟಣದಲ್ಲೂ ಕರ್ತವ್ಯ ಮತ್ತು ಕರ್ತವೈತರ ಸೇವಾ ಕಾರ್ಯಗಳಿಂದ ಸಾಕಷ್ಟು ಜನಪ್ರಿಯರಾಗಿದ್ದಾರೆ. ಜಾಲತಾಣದ ಮೂಲಕವೂ ಖ್ಯಾತಿ ಗಳಿಸಿದ್ದಾರೆ.
ಚನ್ನಪಟ್ಟಣದಲ್ಲಿ ಅವರು ಆರಂಭಿಸಿದ ಸರ್ಕಾರಿ ಶಾಲೆಗೆ ಬಣ್ಣ ಬಳಿಯುವ ಅಭಿಯಾನ ಸಾಕಷ್ಟು ಜನಮೆಚ್ಚುಗೆಗೆ ಪಾತ್ರವಾಗಿತ್ತು. ಇಂತಹ ಓರ್ವ ಜವಾಬ್ದಾರಿಯುತ ಅಧಿಕಾರಿ, ಮಧ್ಯರಾತ್ರಿ ಸರ್ಕಾರಿ ನಿವಾಸಕ್ಕೆ ಬಂದ ಅಪರಿಚಿತ ಸ್ನೇಹಿತರಿಗೆ ಮದ್ಯಸೇವನೆಗೆ ಅವಕಾಶ ಮಾಡಿಕೊಟ್ಟಿದ್ದು ಎಷ್ಟು ಸರಿ? ಅವರೇ ದೂರಿನಲ್ಲಿ ತಿಳಿಸಿರುವಂತೆ ಮದ್ಯಸೇವನೆಗೆ ಡ್ರೈಫೂಟ್ಸ್ ಹಾಗೂ ಹಣ್ಣು ನೀಡಿದೆ ಎಂದಿರುವುದು ಸಾಕಷ್ಟು ಗೊಂದಲಕ್ಕೂ ಕಾರಣವಾಗಿದೆ. ಈ ಬಗ್ಗೆ ಕೂಲಂಕಷ ತನಿಖೆ ನಡೆದರೆ ಘಟನೆಯ ಸತ್ಯಾಸತ್ಯತೆ ಹೊರಬರಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net