ತಮಿಳುನಾಡು ಚುನಾವಣೆ: ಹೆಚ್ಚಿನ ಸೀಟು ಬೇಡಿಕೆಗೆ ಒಪ್ಪದೇ ಕಾಂಗ್ರೆಸ್​ ಅನ್ನು ಬಗ್ಗಿಸಿದ ಡಿಎಂಕೆ; ಇಂದು ಸಂಜೆ ಸೀಟು ಹಂಚಿಕೆ ಘೋಷಣೆ | TamilNadu elections

ರಾಹುಲ್ ಗಾಂಧಿ ಮತ್ತು ಸಿಎಂ ಎಂ.ಕೆ.ಸ್ಟಾಲಿನ್
ರಾಹುಲ್ ಗಾಂಧಿ ಮತ್ತು ಸಿಎಂ ಎಂ.ಕೆ.ಸ್ಟಾಲಿನ್
Published on
ಚೆನ್ನೈ: ಮುಂದಿನ ಎರಡು ತಿಂಗಳಲ್ಲಿ ನಡೆಯಲಿರುವ ತಮಿಳುನಾಡು ಚುನಾವಣೆಗೂ(TamilNadu elections) ಮುನ್ನ ಕಾಂಗ್ರೆಸ್-ಡಿಎಂಕೆ(ದ್ರಾವಿಡ ಮುನ್ನೇತ್ರ ಕಳಗಂ) ನಡುವಿನ ಸೀಟು ಹಂಚಿಕೆ ಅನಿಶ್ಚಿತತೆಗೆ ಕೊನೆಗೂ ಅಂತ್ಯ ಬಂದಿದ್ದು, ಇಂದು(ಮಾ. 04) ಸಂಜೆ ಎರಡೂ ಪಕ್ಷಗಳು ಸೀಟು ಹಂಚಿಕೆಯ ಒಪ್ಪಂದವನ್ನು ಅಂತಿಮಗೊಳಿಸಲಿವೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 2021ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 25 ಸ್ಥಾನಗಳಿಗಿಂತ ಮೂರ್ನಾಲ್ಕು ಹೆಚ್ಚಿನ ಸ್ಥಾನಗಳನ್ನಷ್ಟೇ ಪಡೆಯಬಹುದು. 28 ಅಥವಾ 29 ಸ್ಥಾನಗಳನ್ನು ಮತ್ತು ಜೊತೆಗೆ ಒಂದು ರಾಜ್ಯಸಭೆ ಸ್ಥಾನವನ್ನು ಡಿಎಂಕೆ ಬಿಟ್ಟುಕೊಡಲು ಒಪ್ಪಿದೆ ಎನ್ನಲಾಗಿದೆ.
ಸೀಟು ಹಂಚಿಕೆಯ ಅಂತಿಮ ಊಹಾಪೋಹಗಳ ನಡುವೆ ನಿನ್ನೆ ಹಿರಿಯ ಕಾಂಗ್ರೆಸ್​ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, ಸಿಎಂ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಸಿಎಂ ಸ್ಟಾಲಿನ್ ಹೇಳಿದ ಸೂತ್ರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಪ್ಪಿದ್ದು, ದೀರ್ಘಕಾಲದ ಕಾಂಗ್ರೆಸ್-ಡಿಎಂಕೆ ಮೈತ್ರಿಯನ್ನು ಮುಂದುವರೆಸಲು ಹಸಿರು ನಿಶಾನೆ ತೋರಿಸಿದ್ದಾರೆ ಎನ್ನಲಾಗಿದೆ. 
ಇತ್ತೀಚಿನ ತಿಂಗಳಲ್ಲಿ ಚುನಾವಣೆ ದಿನಗಳು ಹತ್ತಿರ ಬರುತ್ತಿದ್ದಂತೆ ತಮಿಳುನಾಡಿನ ಕೆಲವು ಕಾಂಗ್ರೆಸ್ ನಾಯಕರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್​ಗೆ 35ರಿಂದ 40 ಸ್ಥಾನಗಳನ್ನು ನೀಡುವುದರ ಜೊತೆಗೆ ಅಧಿಕಾರದಲ್ಲಿ ಪಾಲು ನೀಡಬೇಕು ಎಂಬ ಪ್ರಸ್ತಾಪವನ್ನು ಮಂಡಿಸಿದ್ದರು. ಆದರೆ ಡಿಎಂಕೆ ಮತ್ತು ಸಿಎಂ ಎಂ.ಕೆ.ಸ್ಟಾಲಿನ್ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರು.
ಏತನ್ಮಧ್ಯೆ ಹೆಚ್ಚಿನ ಸ್ಥಾನಗಳ ಬೇಡಿಕೆ ಮತ್ತು ಅಧಿಕಾರ ಹಂಚಿಕೆ ಬಗ್ಗೆ ಬೇಡಿಕೆ ಇಟ್ಟವರಲ್ಲಿ ಪ್ರಮುಖರಾಗಿರುವ ಕಾಂಗ್ರೆಸ್ ಸಂಸದ ಮಾಣಿಕ್ಯಂ ಟ್ಯಾಗೋರ್, ಇಂದು ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದು, ವ್ಯಕ್ತಿಗಳಲ್ಲಿ ಭಿನ್ನಾಭಿಪ್ರಾಯ ಇರಬಹುದು, ಆದರೆ ಪಕ್ಷವು ನಮ್ಮೆಲ್ಲರಿಗಿಂತಲೂ ದೊಡ್ಡದು. ಪಕ್ಷದ ನಾಯಕತ್ವ ಏನೇ ತೀರ್ಮಾನ ಮಾಡಿದ್ರೂ, ನಾವು ಅದನ್ನು ಸ್ವೀಕರಿಸುತ್ತೇವೆ. ಯಾಕಂದರೆ ಏಕತೆಯೇ ನಮ್ಮ ದೊಡ್ಡ ಶಕ್ತಿ ಎಂದು ಬರೆದುಕೊಂಡಿದ್ದಾರೆ.
ಟ್ಯಾಗೋರ್ ಅವರ ಈ ಮಾತು, ಡಿಎಂಕೆಯ ಸೀಟು ಹಂಚಿಕೆ ಒಪ್ಪಂದಕ್ಕೆ ಕಾಂಗ್ರೆಸ್ ಒಪ್ಪಿದ್ದು, ಮೈತ್ರಿ ಪಕ್ಷಗಳ ನಡುವಿನ ಸೀಟು ಹಂಚಿಕೆ ಘೋಷಣೆ ಮುನ್ನ ನೀಡಿರುವ ಈ ಹೇಳಿಕೆ ಮಹತ್ವದ್ದಾಗಿದೆ. ಜೊತೆಗೆ ಎರಡೂ ಪಕ್ಷಗಳ ನಡುವಿನ ಮೈತ್ರಿ ಮುಂದುವರೆಯು ಸೂಚನೆ ಎನ್ನಲಾಗಿದೆ.
ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟವು 2019ರಿಂದ ಸತತ ಮೂರು ಚುನಾವಣೆಗಳಲ್ಲಿ ಗೆದ್ದಿವೆ. 2024ರ ಲೋಕಸಭೆ ಚುನಾವಣೆಯಲ್ಲಿ ಪುದುಚೇರಿ ಸೇರಿ ತಮಿಳುನಾಡಿನ ಎಲ್ಲಾ 40 ಸ್ಥಾನಗಳಲ್ಲಿ ಗೆದ್ದು ಬೀಗಿದ್ದವು. ಈ ಬಾರಿ ಸೀಟು ಹಂಚಿಕೆ ಒಪ್ಪಂದದ ವಿಳಂಬವೂ ಕಾಂಗ್ರೆಸ್-ಡಿಎಂಕೆಯ ಮೈತ್ರಿ ಮುರಿಯುವ ಊಹಾಪೋಹಗಳಿಗೆ ಕಾರಣವಾಗಿತ್ತು. ಕಾಂಗ್ರೆಸ್ ಇತ್ತೀಚಿಗೆ ಹೊಸ ಪಕ್ಷ ಕಟ್ಟಿ ಸಂಚಲನ ಸೃಷ್ಟಿಸಿರುವ ದಳಪತಿ ವಿಜಯ್ ಅವರ ಟಿವಿಕೆ ಜೊತೆಗೆ ಮೈತ್ರಿಗೆ ಮುಂದಾಗಿದೆ ಎನ್ನಲಾಗಿತ್ತು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net