ಅಸ್ಸಾಂ ಚುನಾವಣೆ: 42 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್; ಜೋರ್ಹತ್​ನಿಂದ ಗೊಗೊಯ್ ಸ್ಪರ್ಧೆ | Assam elections

ಸಂಸದ ಗೌರವ್ ಗೊಗೊಯ್
ಸಂಸದ ಗೌರವ್ ಗೊಗೊಯ್
Published on
ಗುವಾಹಟಿ: ಮುಂದಿನ ಎರಡು ತಿಂಗಳಲ್ಲಿ ನಡೆಯಲಿರುವ ಅಸ್ಸಾಂ ವಿಧಾನಸಭೆ ಚುನಾವಣೆಗೆ(Assam elections) ಕಾಂಗ್ರೆಸ್​ ತನ್ನ 42 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ(ಮಾ. 03) ಬಿಡುಗಡೆ ಮಾಡಿದ್ದು, ಸಿಎಂ ಅಭ್ಯರ್ಥಿಯಾಗಿರುವ ಸಂಸದ ಗೌರವ್ ಗೊಗೊಯ್ ಜೋರ್ಹತ್​ನಿಂದ ಸ್ಪರ್ಧಿಸಲಿದ್ದಾರೆ.
ಅಸ್ಸಾಂನಲ್ಲಿ ಒಟ್ಟು 126 ವಿಧಾನಸಭೆ ಕ್ಷೇತ್ರಗಳಿದ್ದು, ಪಕ್ಷದ ಬೆಳವಣಿಗೆ ಮತ್ತು ಗೆಲ್ಲುವ ನಿರೀಕ್ಷೆಯಲ್ಲಿ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್​ ಚುನಾವಣೆ ಸಮಿತಿ, ಅನುಭವಿ ನಾಯಕರು ಮತ್ತು ಕೆಲವು ಹೊಸ ಮುಖಗಳಿಗೆ ಸ್ಪರ್ಧಿಸಲು ಟಿಕೆಟ್ ನೀಡಿದೆ.
ಪಟ್ಟಿಯಲ್ಲಿ ಐವರು ಹಾಲಿ ಶಾಸಕರ ಜೊತೆ ಐವರು ಮಹಿಳೆಯರ ಹೆಸರುಗಳಿವೆ. ಮಾಜಿ ಸಚಿವೆ ಪ್ರಣತಿ ಫುಕನ್, ಶಾಸಕಿ ನಂದಿತಾ ದಾಸ್, ಮೀರಾ ಬೋರ್ತಕೂರ್, ಪಲ್ಲಬಿ ಸೈಕಿಯಾ ಗೊಗೊಯ್ ಮತ್ತು ಸುರುಚಿ ರಾಯ್ ಪಟ್ಟಿಯಲ್ಲಿರುವ ಮಹಿಳಾ ಅಭ್ಯರ್ಥಿಗಳು. ಇನ್ನೂ ಶಾಸಕರ ಪೈಕಿ ನಂದಿತಾ ದಾಸ್ ಸೇರಿ, ದೇಬಬ್ರತ ಸೈಕಿಯಾ, ನೂರುಲ್ ಹುದಾ, ಅಬ್ದುಸ್ ಸೋಬಹಾನ್ ಅಲಿ ಸರ್ಕಾರ್ ಮತ್ತು ದಿಗಂತ ಬರ್ಮನ್ ಮತ್ತೆ ಟಿಕೆಟ್ ಪಡೆದಿದ್ದಾರೆ.
ವಿಪಕ್ಷ ನಾಯಕ ಸೈಕಿಯಾ ನಜೀರಾದಿಂದ ಸ್ಪರ್ಧಿಸಿದ್ರೆ, ರೂಪಹಿಹತ್‌ನಿಂದ ಹುಡಾ, ಗೌರಿಪುರದಿಂದ ಅಲಿ, ಹಜೋ-ಸುಲ್ಕುಚಿ (ಎಸ್‌ಸಿ ಮೀಸಲು) ಯಿಂದ ದಾಸ್ ಮತ್ತು ಬರ್ಖೇತ್ರಿಯಿಂದ ಬರ್ಮನ್ ಸ್ಪರ್ಧಿಸಲಿದ್ದಾರೆ. ಉದರಬಂದ್​ನಿಂದ ಮಾಜಿ ಸಚಿವ ಅಜಿತ್ ಸಿಂಗ್, ಧುಬ್ರಿಯಿಂದ ಸಂಸದ ರಕಿಬುಲ್ ಹುಸೇನ್ ಅವರ ಪುತ್ರ ತಂಜಿಲ್ ಹುಸೇನ್​ಗೆ ಅವಕಾಶ ನೀಡಲಾಗಿದೆ.

ಜೋರ್ಹತ್​ನಿಂದ ಗೌರವ್ ಗೊಗೊಯ್ ಸ್ಪರ್ಧೆ

ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ, ಲೋಕಸಭೆ ವಿರೋಧ ಪಕ್ಷದ ಉಪನಾಯಕ ಹಾಗೂ ಅಸ್ಸಾಂ ಕಾಂಗ್ರೆಸ್​ನ ಸಿಎಂ ಅಭ್ಯರ್ಥಿಯಾಗಿರುವ ಗೌರವ್ ಗೊಗೊಯ್ ಅವರುವ ಜೋರ್ಹತ್​ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಅದೇ ಜೋರ್ಹತ್​ ಸಂಸದೀಯ ಸ್ಥಾನದಿಂದ ಗೊಗೊಯ್ ಗೆದ್ದಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಗೊಗೊಯ್, ಜೋರ್ಹತ್ ಲೋಕಸಭಾ ಕ್ಷೇತ್ರದ ಜನರಿಗೆ ನಾನು ಕೃತಜ್ಞನಾಗಿದ್ದೇನೆ. ಅವರಿಲ್ಲದಿದ್ದರೆ ನಾನು ಈ ಸ್ಥಾನವನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ. ಅಸ್ಸಾಮಿ ಮತ್ತು ಕಾಂಗ್ರೆಸ್ಸಿಗನಾಗುವುದು ಹೇಗೆಂದು ನನಗೆ ಕಲಿಸಿದ ನನ್ನ ದಿವಂಗತ ತಂದೆ ತರುಣ್ ಗೊಗೊಯ್ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಯಾವಾಗಲೂ ದಯೆ, ಸಂತೋಷ ಮತ್ತು ಘನತೆಯಿಂದ ಬಹಳಷ್ಟು ಸಹಿಸಿಕೊಂಡಿರುವ ನನ್ನ ಕುಟುಂಬ, ತಾಯಿ, ಸಹೋದರಿ, ಹೆಂಡತಿ ಹಾಗೂ ಇಬ್ಬರು ಪುಟ್ಟ ಮಕ್ಕಳಿಗೆ ನಾನು ಕೃತಜ್ಞನಾಗಿದ್ದೇನೆ. ನನ್ನ ಸಹ ಕಾಂಗ್ರೆಸ್ ಸಹೋದರರು, ಸಹೋದರಿಯರು, ಸಹೋದ್ಯೋಗಿಗಳು ಮತ್ತು ಹಿರಿಯರಿಗೆ, ಈಗ ಅಸ್ಸಾಂ ಅನ್ನು ಹೊಸ ಮತ್ತು ದಿಟ್ಟ ದಿಕ್ಕಿನಲ್ಲಿ ಕೊಂಡೊಯ್ಯುವ ಸಮಯ. ನಾವು ಮತ್ತೊಮ್ಮೆ #NatunBorAxomನ ಕನಸು ಕಾಣೋಣ. #SamayParivartanor ಎಂದು ಬರೆದುಕೊಂಡಿದ್ದಾರೆ.
ಅಸ್ಸಾಂನ ಮೇಲ್ಭಾಗದಲ್ಲಿ ಕಳದುಕೊಂಡಿರುವ ನೆಲೆಯನ್ನು ಮರಳಿ ಪಡೆಯಲು ಕಾಂಗ್ರೆಸ್​ ಪ್ರಯತ್ನದ ಭಾಗವಾಗಿ ಜೋರ್ಹತ್​ನಿಂದ ವಿಧಾನಸಭೆಗೆ ಗೊಗೊಯ್ ಸ್ಪರ್ಧಿಸುವುದು ಮಹತ್ವದ್ದಾಗಿದೆ ಎನ್ನಲಾಗಿದೆ. ಅಹೋಮ್ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಆ ಭಾಗದಲ್ಲಿ ಅದೇ ಸಮುದಾಯ ಗೊಗೊಯ್ ಹಿಡಿತ ಹೊಂದಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net