ದೆಹಲಿ ಕಾರು ಸ್ಫೋಟ... ಅಲ್​-ಫಲಾಹ್​ ವಿಶ್ವವಿದ್ಯಾಲಯದ ಕಟ್ಟಡ 17, ರೂಮ್​ ನಂ.​ 13ರ ಸ್ಫೋಟಕ ರಹಸ್ಯ ಬಯಲು! Delhi Blast

Delhi Blast
Published on

ನವದೆಹಲಿ: ಇಡೀ ದೇಶದಲ್ಲಿ ಸರಣಿ ಬಾಂಬ್​ ದಾಳಿಗಳನ್ನು ನಡೆಸಿ ಅರಾಜಕತೆ ಸೃಷ್ಟಿಸಲು ವೈದ್ಯರ ಸೋಗಿನಲ್ಲಿದ್ದ ಕಿರಾತಕ ಉಗ್ರರು ಭಾರಿ ಸಂಚು ರೂಪಿಸಿದ್ದರು. ಯಾವಾಗ ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟ ಗೊಂಡಿತೋ ( Delhi Blast ) ನಂತರದ ತನಿಖೆಯಲ್ಲಿ ಉಗ್ರರ ಒಂದೊಂದೆ ಸಂಚು ಬಯಲಿಗೆ ಬರುತ್ತಿವೆ.

ಇಡೀ ದೇಶದಲ್ಲಿ ಪ್ರಮುಖ ಸ್ಥಳಗಳಲ್ಲಿ ದಾಳಿ ನಡೆಸಲು ಮಹಾ ಸಂಚು ಮಾಡಿದ್ದರು. ಅದಕ್ಕಾಗಿ ಉಗ್ರರ ಗುಂಪು ಸಕಲ ತಯಾರಿಯನ್ನೂ ಮಾಡಿಕೊಳ್ಳುತ್ತಿತ್ತು. ಆ ತಯಾರಿಗೆ ಅವರು ಬಳಸಿದ್ದು ಮಾತ್ರ ಹರಿಯಾಣದ ಪ್ರತಿಷ್ಠಿತ ಅಲ್​-ಫಲಾಹ್​ ವಿಶ್ವವಿದ್ಯಾಲಯ.

ಹೌದು, ಅಲ್-ಫಲಾಹ್ ವಿಶ್ವವಿದ್ಯಾಲಯದ ಆವರಣದಲ್ಲಿರುವ ಕೊಳಕು ಹಾಸ್ಟೆಲ್ ಕೊಠಡಿಯಲ್ಲಿ ವೈದ್ಯರ ಸೋಗಿನಲ್ಲಿದ್ದ ಉಗ್ರರು ಒಟ್ಟಿಗೆ ಸೇರಿ ಸಂಚು ಮಾಡುತ್ತಿದ್ದರು. ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಸರಣಿ ದಾಳಿಗಳನ್ನು ನಡೆಸಲು ಪ್ರತಿದಿನ ಸಭೆ ಸೇರಿ ಚರ್ಚೆ ನಡೆಸುತ್ತಿದ್ದರು. ಯಾವಾಗ ಉಗ್ರರ ಸಂಚು ವಿಫಲವಾಯಿತೋ ಅಲ್​ ಫಲಾಹ್​ ಯೂನಿವರ್ಸಿಟಿ ಇದೀಗ ದೇಶದ ಗಮನ ಸೆಳೆದಿದೆ.

ಅಲ್ಲಿನ ಹುಡುಗರ ಹಾಸ್ಟೆಲ್​ನ ಕಟ್ಟಡ 17ರ ಕೊಠಡಿ ಸಂಖ್ಯೆ 13 ವೈಟ್ ಕಾಲರ್ ಭಯೋತ್ಪಾದಕ ಮಾಡ್ಯೂಲ್‌ನ ರಹಸ್ಯ ಸಭೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಅವರಲ್ಲಿ ಹಲವರನ್ನು ಈಗಾಗಲೇ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನು ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ತಿಳಿಯಲು ತನಿಖೆ ಮುಂದುವರಿದಿದೆ.

ದೆಹಲಿ ಸ್ಫೋಟ ನಡೆದ ಅದೇ ದಿನ ಬೆಳಗ್ಗೆ ಅಲ್-ಫಲಾಹ್ ಯೂನಿವರ್ಸಿಟಿಯಲ್ಲಿ ಕೆಲಸ ಮಾಡುತ್ತಿದ್ದ ಡಾ. ಮುಜಾಮಿಲ್​ ಶಕೀಲ್​ ಎಂಬಾತನ ಬಾಡಿಗೆ ಮನೆಯಲ್ಲಿ ಬರೋಬ್ಬರಿ 2900 ಕೆಜಿ ತೂಕದ ಐಇಡಿ ಸ್ಫೋಟಕಗಳನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದರು. ಅಲ್ಲದೆ, ಮುಜಾಮಿಲ್​ನನ್ನು ಬಂಧಿಸಲಾಯಿತು.

ಇದೀಷ್ಟೇ ಅಲ್ಲದೆ, ಭಾರತದಲ್ಲಿ ಪಾಕಿಸ್ತಾನ ಮೂಲದ ಜೈಶ್​ ಎ ಮೊಹಮ್ಮದ್​ ಸಂಘಟನೆಯ ಮಹಿಳಾ ಘಟಕವನ್ನು ಸ್ಥಾಪಿಸುವ ಹೊಣೆ ಹೊತ್ತಿದ್ದಳು ಎನ್ನಲಾದ ಹಾಗೂ ಅಲ್​ ಫಲಾಹ್​ ಯೂನಿವರ್ಸಿಟಿಯಲ್ಲಿ ವೈದ್ಯಳಾಗಿದ್ದ ಡಾ. ಶಾಹೀನ್​ ಶಾಹೀದ್​ ಎಂಬಾಕೆಯನ್ನೂ ಅದೇ ದಿನ ಬೆಳಗ್ಗೆ ಬಂಧಿಸಲಾಯಿತು. ಇಬ್ಬರನ್ನು ಬಂಧಿಸಿದ ಅದೇ ದಿನ ವೈದ್ಯನ ಸೋಗಿನಲ್ಲಿದ್ದ ಮತ್ತೊಬ್ಬ ಉಗ್ರ ಉಮರ್​ ಕೆಂಪುಕೋಟೆಯ ಬಳಿ ಕಾರು ಸ್ಫೋಟ ಮಾಡಿದನು.

ಹಾಸ್ಟೆಲ್‌ನಲ್ಲಿನ ಕೊಠಡಿ ಸಂಖ್ಯೆ 13 ಪುಲ್ವಾಮಾದ ಡಾ. ಮುಜಮ್ಮಿಲ್‌ಗೆ ಸೇರಿತ್ತು. ಆ ಕೋಣೆಯೊಳಗೆ ಆತ ಇನ್ನಿತರ ಮೂಲಭೂತವಾದಿ ವೈದ್ಯರನ್ನು ಭೇಟಿಯಾಗಿ ದೆಹಲಿ ಮತ್ತು ಹತ್ತಿರದ ರಾಜ್ಯಗಳಲ್ಲಿ ಸಂಘಟಿತ ಸ್ಫೋಟಗಳನ್ನು ನಡೆಸಲು ಸಂಚು ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ದೆಹಲಿ ಸ್ಫೋಟ ಪ್ರಕರಣದಲ್ಲಿ ದಿನನಿತ್ಯ ಒಂದಲ್ಲ ಒಂದು ಸ್ಫೋಟಕ ಮಾಹಿತಿಗಳು ಹೊರಬರುತ್ತಲೇ ಇವೆ. ಈ ಪ್ರಕರಣ ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net