ಐದು ಹಂತದ ಭಯಾನಕ ಸಂಚು... ತನಿಖೆಯಲ್ಲಿ ಬಯಲಾಯ್ತು ಉಗ್ರರ ಡಿಸೆಂಬರ್​ 6ರ ಮಹಾ ರಹಸ್ಯ! Delhi Blast

Delhi Blast
Published on

ನವದೆಹಲಿ: ದೇಶದ ಐಕಾನಿಕ್​ ಸ್ಥಳವೆಂದೇ ಹೆಸರಾಗಿರುವ ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣ ( Delhi Blast ) ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ. ಈ ಪ್ರಕರಣದ ತನಿಖೆಯಲ್ಲಿ ಅನೇಕ ಆಘಾತಕಾರಿ ಸಂಗತಿ ಬೆಳಕಿಗೆ ಬರುತ್ತಲೇ ಇವೆ. ಉಗ್ರರ ಟಾರ್ಗೆಟ್​ ಕೇವಲ ಒಂದು ಪ್ರದೇಶ ಮಾತ್ರ ಆಗಿರಲಿಲ್ಲ ಸುಮಾರು 6 ಸ್ಥಳಗಳಲ್ಲಿ ಭೀಕರ ಬಾಂಬ್​ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು. ಆದರೆ, ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಸಂಭವನೀಯ ದುರಂತವೊಂದು ತಪ್ಪಿದಂತಾಗಿದೆ.

ಶಾಕಿಂಗ್​ ವಿಚಾರ ಏನೆಂದರೆ, ಈ ಸಂಚಿನಲ್ಲಿ ಭಾಗಿಯಾದ ಯಾರೊಬ್ಬರು ಅನಕ್ಷರಸ್ಥರಲ್ಲ, ಅವರೆಲ್ಲ ವೈದ್ಯರು. ಇದೊಂದು ವೈಟ್​ ಕಾಲರ್​ ಟೆರರ್​ ಮಾಡ್ಯೂಲ್​. ಇದರ ಹಿಂದಿರುವ ಕೈವಾಡ ಯಾರದ್ದು ಅಂದರೆ, ಪಾಕಿಸ್ತಾನದಲ್ಲಿ ಬೇರು ಬಿಟ್ಟಿರುವ ಮೋಸ್ಟ್​ ವಾಂಟೆಡ್​ ಉಗ್ರ ಸಂಘಟನೆ ಜೈಶ್​ ಎ ಮೊಹಮ್ಮದ್​. ಡಿಸೆಂಬರ್​ 6 ರಂದು ನ್ಯಾಷನಲ್​ ಕ್ಯಾಪಿಟಲ್​ ರೀಜನ್​ (ಎನ್​ಸಿಆರ್​) ನಲ್ಲಿ ಸುಮಾರು 6 ಕಡೆ ದಾಳಿ ಮಾಡಲು ಈ ಗುಂಪು ಭಾರಿ ಸಂಚು ರೂಪಿಸಿತ್ತು.

ಅಂದಹಾಗೆ, ಡಿಸೆಂಬರ್​ 6 ಅನ್ನೇ ಏಕೆ ಆಯ್ದುಕೊಂಡಿದ್ದರು ಗೊತ್ತಾ? ಏಕೆಂದರೆ, 1992 ರಲ್ಲಿ ಇದೇ ದಿನದಂದು ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿಯನ್ನು ಕೆಡವಲಾಗಿತ್ತು. ದೆಹಲಿ ಸ್ಫೋಟ ಪ್ರಕರಣದಲ್ಲಿ ಬಂಧಿಯಾಗಿರುವ ಶಂಕಿತ ಉಗ್ರರು ಈ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ. ಬಾಬರಿ ಮಸೀದಿ ಕೆಡವಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಸಂಚು ಮಾಡಿದ್ದಾಗಿ ತಿಳಿಸಿದ್ದಾರೆ.

ಉನ್ನತ ಗುಪ್ತಚರ ಮೂಲಗಳ ಪ್ರಕಾರ, ಶಂಕಿತ ಭಯೋತ್ಪಾದಕ ಗುಂಪಿನ ಸದಸ್ಯರು ವಿಚಾರಣೆಯ ಸಮಯದಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಅಂದರೆ, ಎನ್​ಸಿಆರ್​ನಲ್ಲಿ ಸರಣಿ ಸ್ಫೋಟಗಳನ್ನು ನಡೆಸಲು ಹಂತವಾರು ಯೋಜನೆಯನ್ನು ರೆಡಿ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ. ಆ ಯೋಜನೆಗಳಲ್ಲಿ ಐದು ಹಂತದ ಯೋಜನೆಯನ್ನು ತನಿಖಾಧಿಕಾರಿಗಳು ವಿವರವಾಗಿ ಹಂಚಿಕೊಂಡಿದ್ದಾರೆ.

ಮೊದಲನೇ ಹಂತ: ಜೈಶ್​-ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ ಜೊತೆ ಸಂಪರ್ಕ ಹೊಂದಿದ ಭಯೋತ್ಪಾದಕ ಮಾಡ್ಯೂಲ್ ರಚನೆ ಮಾಡುವುದು.

ಎರಡನೇ ಹಂತ: ಹರಿಯಾಣದ ನುಹ್ ಮತ್ತು ಗುರುಗ್ರಾಮ್‌ನಿಂದ ಪಡೆದ ಸುಧಾರಿತ ಸ್ಫೋಟಕ ಸಾಧನಗಳನ್ನು (IED) ಜೋಡಿಸಲು ಮತ್ತು ಮದ್ದುಗುಂಡುಗಳನ್ನು ಜೋಡಿಸಲು ಕಚ್ಚಾ ವಸ್ತುಗಳ ಖರೀದಿ ಮಾಡುವುದು.

ಮೂರನೇ ಹಂತ: ಮಾರಕ ರಾಸಾಯನಿಕ ಐಇಡಿಗಳನ್ನು ತಯಾರಿಸುವುದು ಮತ್ತು ಸಂಭಾವ್ಯ ಗುರಿ ಸ್ಥಳಗಳನ್ನು ಪರಿಶೀಲಿಸುವುದು.

ನಾಲ್ಕನೇ ಹಂತ: ಟಾರ್ಗೆಟ್​ ಸ್ಥಳವನ್ನು ಅನ್ವೇಷಿಸಿದ ಬಳಿಕ ಮಾಡ್ಯೂಲ್‌ನ ಸದಸ್ಯರಿಗೆ ರೆಡಿ ಮಾಡಿದ ಬಾಂಬ್‌ಗಳನ್ನು ವಿತರಿಸುವುದು.

ಐದನೇ ಹಾಗೂ ಕೊನೆಯ ಹಂತ: ದೆಹಲಿಯ ಆರರಿಂದ ಏಳು ಸ್ಥಳಗಳಲ್ಲಿ ಸಂಘಟಿತ ಬಾಂಬ್ ದಾಳಿಗಳನ್ನು ನಡೆಸುವುದು.

ಆರಂಭದ ಪ್ಲಾನ್​ ಏನಾಗಿತ್ತು ಅಂದರೆ, ಈ ವರ್ಷದ ಆಗಸ್ಟ್​ ತಿಂಗಳಲ್ಲಿ ಬಾಂಬ್​ ದಾಳಿಗಳನ್ನು ನಡೆಸುವುದಾಗಿತ್ತು. ಆದರೆ, ಅದು ತಡವಾದ್ದರಿಂದ ಬೇರೆ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಅಂತಿಮವಾಗಿ ಬಾಬ್ರಿ ಮಸೀದಿಯನ್ನು ಕೆಡವಿದ ದಿನವಾದ ಡಿಸೆಂಬರ್​ 6 ಅನ್ನು ಆಯ್ಕೆ ಮಾಡಿಕೊಳ್ಳಲಾಯಿತು.

16ನೇ ಶತಮಾನದಲ್ಲಿ ನಿರ್ಮಾಣವಾದ ಬಾಬರಿ ಮಸೀದಿಯನ್ನು ರಾಮನ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. 1992ರ ಡಿಸೆಂಬರ್​ 6ರಂದು ಗುಂಪೊಂದು ಈ ಕಟ್ಟಡವನ್ನು ಕೆಡವಿತು. ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಸುದೀರ್ಘವಾದ ಹೋರಾಟದ ನಂತರ, ಅದೇ ಸ್ಥಳದಲ್ಲಿ ಹೊಸ ರಾಮ ಮಂದಿರವನ್ನು ನಿರ್ಮಿಸಲಾಯಿತು. ಈ ನಿರ್ಮಾಣ ಕಾರ್ಯವು 2020ರಲ್ಲಿ ಪ್ರಾರಂಭವಾಗಿ, ಈ ವರ್ಷ ಕೊನೆಗೊಂಡಿತು. ರಾಮ ಮಂದಿರ ವಿಚಾರದಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆ ಬಹಳ ದಿನಗಳಿಂದ ಬೆದರಿಕೆಗಳನ್ನು ಹಾಕುತ್ತಾ ಬಂದಿದ್ದು, ಬಾಬರಿ ಮಸೀದಿ ಧ್ವಂಸಕ್ಕೆ ಸೇಡು ತೀರಿಸಿಕೊಳ್ಳಲು ಕರೆ ನೀಡುತ್ತಾ ಬರುತ್ತಿದೆ. ಈ ವಿಚಾರವನ್ನು ಅನೇಕ ಬಾರಿ ಗುಪ್ತಚರ ಅಧಿಕಾರಿಗಳು ಕೂಡ ತಿಳಿಸಿದ್ದಾರೆ. ಅಲ್ಲದೆ, ಜೈಶ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಕೂಡ ತನ್ನ ಅಂಕಣಗಳಲ್ಲಿ ಅಯೋಧ್ಯೆಯನ್ನು ಗುರಿಯಾಗಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾನೆ.

ಅಂದಹಾಗೆ, ಕೆಂಪು ಕೋಟೆಯ ಮೆಟ್ರೋ ನಿಲ್ದಾಣದ ಬಳಿಯ ಟ್ರಾಫಿಕ್ ಸಿಗ್ನಲ್​ನಲ್ಲಿ ಸೋಮವಾರ (ನ.10) ಕಾರು ಸ್ಫೋಟಗೊಂಡು ಒಂಬತ್ತು ಜನರು ಸಾವಿಗೀಡಾದರು. ಅಲ್ಲದೆ, ಈ ದುರ್ಘಟನೆಯಲ್ಲಿ 20 ಕ್ಕೂ ಹೆಚ್ಚು ಜನರು ಗಾಯಗೊಂಡರು. ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಕಾಶ್ಮೀರಿ ವೈದ್ಯ ಡಾ. ಉಮರ್ ಮೊಹಮ್ಮದ್ ಅಲಿಯಾಸ್ ಉಮರ್ ಉನ್-ನಬಿ ಈ ಕಾರನ್ನು ಚಲಾಯಿಸುತ್ತಿದ್ದನು. ಫರಿದಾಬಾದ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆ ಸಮಯದಲ್ಲಿ ಅಮೋನಿಯಂ ನೈಟ್ರೇಟ್ ಎಂದು ನಂಬಲಾದ 2,900 ಕೆಜಿ ಸ್ಫೋಟಕ ವಸ್ತು ಪತ್ತೆಯಾಯಿತು. ಈ ಪ್ರಕರಣದಲ್ಲಿ ವೈದ್ಯರಾದ ಮುಜಮ್ಮಿಲ್ ಶೇಖ್ ಮತ್ತು ಶಾಹೀನ್ ಸಯೀದ್ ಅವರನ್ನು ಬಂಧಿಸಿದ ಬಳಿಕ ಸೋಮವಾರ ಸಂಜೆ ಈ ಸ್ಫೋಟ ಸಂಭವಿಸಿದೆ. ಈ ವೈದ್ಯರು ಜೈಶ್‌ನ ಹೊಸದಾಗಿ ರಚಿಸಲಾದ ಉನ್ನತ ಶಿಕ್ಷಣ ಪಡೆದ ವೃತ್ತಿಪರರನ್ನು ಒಳಗೊಂಡ ಭಯೋತ್ಪಾದಕ ಸಂಘಟನೆಯ ಭಾಗವೆಂದು ಶಂಕಿಸಲಾಗಿದೆ.

ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಬೃಹತ್ ದಾಳಿ ನಡೆಸಲು ಭಾರಿ ಸಂಚು ರೂಪಿಸಲಾಗಿತ್ತು. ಆ ಸಂಚನ್ನು ಕಾರ್ಯಗತಗೊಳಿಸಲು ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ತನಿಖೆಯ ಪ್ರಕಾರ, ತನ್ನ ಸಹಚರರನ್ನು ಬಂಧಿಸಿದ ಹತಾಶೆಯಿಂದ ಹಾಗೂ ಭಯದಿಂದ ಉಮರ್​ ಕಾರು ಸ್ಫೋಟಿಸಿದ್ದಾನೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net