ರಾಜಣ್ಣನಿಗೆ ಅಭಿಮಾನಿಗಳೇ ದೇವರು, ನನಗೆ ಮತದಾರರೇ ದೇವರು, ಸಂವಿಧಾನವೇ ಧರ್ಮ‌: ರಾಜೀನಾಮೆ ಬೆನ್ನಲ್ಲೇ ಸಿದ್ದರಾಮಯ್ಯ ಭಾವುಕ ಮಾತು! Siddaramaiah

ರಾಜಣ್ಣನಿಗೆ ಅಭಿಮಾನಿಗಳೇ ದೇವರು, ನನಗೆ ಮತದಾರರೇ ದೇವರು, ಸಂವಿಧಾನವೇ ಧರ್ಮ‌: ರಾಜೀನಾಮೆ ಬೆನ್ನಲ್ಲೇ ಸಿದ್ದರಾಮಯ್ಯ ಭಾವುಕ ಮಾತು! Siddaramaiah
ರಾಜಣ್ಣನಿಗೆ ಅಭಿಮಾನಿಗಳೇ ದೇವರು, ನನಗೆ ಮತದಾರರೇ ದೇವರು, ಸಂವಿಧಾನವೇ ಧರ್ಮ‌: ರಾಜೀನಾಮೆ ಬೆನ್ನಲ್ಲೇ ಸಿದ್ದರಾಮಯ್ಯ ಭಾವುಕ ಮಾತು! Siddaramaiah
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಭಾವುಕ ಮಾತುಗಳನ್ನಾಡಿದ ಸಿದ್ದರಾಮಯ್ಯ
  • ರಾಜಣ್ಣನಿಗೆ ಅಭಿಮಾನಿಗಳು ದೇವರಾದರೆ ನನಗೆ ಸಂವಿಧಾನವೇ ಧರ್ಮ, ಮತದಾರರೇ ದೇವರು ಎಂದ ಅಹಿಂದ ನಾಯಕ
  • ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ‌ಖರ್ಗೆ ಅವರಿಗೆ ಧನ್ಯವಾದ ತಿಳಿಸಿದ ಸಿದ್ದರಾಮಯ್ಯ
  • ನಾನೆಂದಿಗೂ ಶಾಸಕ, ಮಂತ್ರಿ, ಮುಖ್ಯಮಂತ್ರಿ ಅಥವಾ ವಿಪಕ್ಷ ನಾಯಕನಾಗುವ ಕನಸು ಕಂಡವನಲ್ಲ ಅಂದ್ರು ಸಿದ್ದು
ಬೆಂಗಳೂರು: ಮೇರು ನಟ ಡಾ. ರಾಜಕುಮಾರ್ ಅವರು ತಮ್ಮ ಅಭಿಮಾನಿಗಳನ್ನು ದೇವರು ಎಂದು ಕರೆಯುತ್ತಿದ್ದರು. ನಾನು ರಾಜಕಾರಣಿಯಾಗಿರುವುದರಿಂದ ಸಂವಿಧಾನವೇ ಧರ್ಮ, ಮತದಾರರೇ ದೇವರು ಎಂದು ನಾನು ಕರೆಯುತ್ತೇನೆ. ಕರ್ನಾಟಕದ 7 ಕೋಟಿ ಜನರ ಸೇವೆ ಮಾಡುವ‌ ಅವಕಾಶ ನನಗೆ ಸಿಕ್ಕಿತು. ಎರಡು ಬಾರಿ ಮುಖ್ಯಮಂತ್ರಿ ಹಾಗೂ ಎರಡು ಬಾರಿ ವಿಪಕ್ಷ ನಾಯಕನಾಗುವ ಅವಕಾಶ ನೀಡಿದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ‌ಖರ್ಗೆಯವರಿಗೆ ಅಪಾರವಾದ ಧನ್ಯವಾದಗಳು ಎಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೆ ಸಿದ್ದರಾಮಯ್ಯ ( Siddaramaiah ) ಅವರು ಭಾವುಕ ಮಾತುಗಳನ್ನಾಡಿದರು.
ಲೋಕಭವನದಲ್ಲಿ ರಾಜ್ಯಪಾಲರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಗೃಹ ಕಚೇರಿ ಕೃಷ್ಣದಲ್ಲಿ ಮುಂದಿನ ಸಿಎಂ ಡಿಕೆ ಶಿವಕುಮಾರ್ ಜತೆಗೂಡಿ​ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜ್ಯಪಾಲರ ಲೋಕಭವನದಲ್ಲಿ ರಾಜೀನಾಮೆ ಸಲ್ಲಿಸಿದ್ದೇನೆ. ರಾಜ್ಯಪಾಲರು ಊರಿನಲಿಲ್ಲ, ರಾತ್ರಿ ಬರಲಿದ್ದಾರೆ. ಹೀಗಾಗಿ, ರಾಜೀನಾಮೆ ಪತ್ರವನ್ನು ಅವರ ಕಾರ್ಯದರ್ಶಿ ಬಳಿ ಕೊಟ್ಟಿದ್ದೇನೆ. ನಾನು ಮೊದಲಿನಿಂದಲೂ, ಅನೇಕ ಬಾರಿ ಹೇಳಿದ್ದೇನೆ, ಹೈಕಮಾಂಡ್​ನವರು ಯಾವಾಗ ಸೂಚಿಸುತ್ತಾರೋ ಆಗಲೇ ರಾಜೀನಾಮೆ ಕೊಡುವುದಾಗಿ ತಿಳಿಸಿದ್ದೆ. ಅದರ ಪ್ರಕಾರ ಮೊನ್ನೆ ಹೈಕಮಾಂಡ್​ನವರು ರಾಜೀನಾಮೆ ಕೊಡಿ ಎಂದು ಹೇಳಿದರು. ನಾನು ನಾಡಿದ್ದು ರಾಜೀನಾಮೆ ಕೊಡುವುದಾಗಿ ಹೇಳಿದ್ದೆ. ಅದರಂತೆ ರಾಜೀನಾಮೆ ನೀಡಿದ್ದೇನೆ. ರಾಜ್ಯಪಾಲರು ಬೆಂಗಳೂರಿಗೆ ಮರಳಿ ಬಂದ ನಂತರ ನನ್ನ ರಾಜೀನಾಮೆ ಪತ್ರವನ್ನು ಅಂಗೀಕಾರ ಮಾಡುತ್ತಾರೆಂಬ ಪೂರ್ಣ ಭರವಸೆ ನನಗಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ರಾಜೀನಾಮೆ ಅಂಗೀಕಾರದ ಪ್ರಕ್ರಿಯೆಯು ಸಂಪೂರ್ಣವಾಗಿ ಸಂವಿಧಾನಬದ್ಧವಾಗಿದ್ದು, ರಾಜ್ಯಪಾಲರು ಸಂವಿಧಾನದ ಪ್ರಕಾರ ಇದನ್ನು ಅಂಗೀಕರಿಸಲೇಬೇಕು ಎಂದು ಮುಖ್ಯಮಂತ್ರಿಗಳು ಪ್ರತಿಪಾದಿಸಿದ್ದಾರೆ. ಪ್ರಸ್ತುತ ಸರ್ಕಾರವು ಹೊಂದಿರುವ ಸಂಖ್ಯಾಬಲವನ್ನು ನೆನಪಿಸಿದ ಅವರು, "ನಾವು ಚುನಾವಣೆಯಲ್ಲಿ 135ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದಿದ್ದೇವೆ ಮತ್ತು ಇಬ್ಬರು ಸ್ವತಂತ್ರ ಶಾಸಕರೂ ನಮಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ನಾವು ಸಂಪೂರ್ಣ ಬಹುಮತದಲ್ಲಿದ್ದೇವೆ ಎಂದು ನೆನಪಿಸಿದರು. ಮುಖ್ಯಮಂತ್ರಿಗಳ ರಾಜೀನಾಮೆಯನ್ನು ಅಂಗೀಕರಿಸಿ, ಸಂಪೂರ್ಣ ಬಹುಮತ ಹೊಂದಿರುವ ಪಕ್ಷದ ಮುಂದಿನ ಮುಖ್ಯಮಂತ್ರಿಗೆ ಆಡಳಿತ ನಡೆಸಲು ಅವಕಾಶ ಮಾಡಿಕೊಡುವುದು ರಾಜ್ಯಪಾಲರ ಸಾಂವಿಧಾನಿಕ ಜವಾಬ್ದಾರಿಯಾಗಿದೆ ಎಂದು ಅವರು ಜ್ಞಾಪಿಸಿದರು.
ನಾನು ರಾಜಕಾರಣಕ್ಕೆ ಬಂದದ್ದು ಕೇವಲ ಆಕಸ್ಮಿಕ, ನನ್ನ ಕುಟುಂಬದ ಯಾರೊಬ್ಬರೂ ರಾಜಕೀಯ ಹಿನ್ನೆಲೆ ಹೊಂದಿರಲಿಲ್ಲ, ಹಳ್ಳಿಗಾಡಿನಿಂದ ಬಂದ ನಾನು ಎಂದಿಗೂ ಶಾಸಕ, ಮಂತ್ರಿ, ಮುಖ್ಯಮಂತ್ರಿ ಅಥವಾ ವಿಪಕ್ಷದ ನಾಯಕನಾಗುವ ಕನಸು ಕಂಡವನಲ್ಲ ಎಂದು ಭಾವುಕರಾಗಿ ನುಡಿದಿರುವ ಮುಖ್ಯಮಂತ್ರಿಗಳು, ತಮ್ಮ ಸುದೀರ್ಘ ರಾಜಕೀಯ ಪಯಣಕ್ಕೆ ಸಾಥ್ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
2006ರಲ್ಲಿ ಕಾಂಗ್ರೆಸ್ ಸೇರಿದಾಗಿನಿಂದ ಇಂದಿನವರೆಗೆ ತಮಗೆ ಅಪಾರ ಪ್ರೀತಿ, ವಿಶ್ವಾಸ ಹಾಗೂ ಉನ್ನತ ಅವಕಾಶಗಳನ್ನು ಕಲ್ಪಿಸಿಕೊಟ್ಟ ಪಕ್ಷದ ಸಾಮಾನ್ಯ ಕಾರ್ಯಕರ್ತರು, ಮುಖಂಡರು, ಶಾಸಕರು, ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರನ್ನು ಈ ಸಂದರ್ಭದಲ್ಲಿ ಸ್ಮರಿಸಿ ಧನ್ಯವಾದ ತಿಳಿಸಿದರು. ಜೊತೆಗೆ, 2013 ರಿಂದ 2016ರ ವರೆಗೆ ಹಾಗೂ 2023ರಿಂದ ಇಲ್ಲಿಯವರೆಗೆ ಮುಖ್ಯಮಂತ್ರಿಯಾಗಿ ಸುದೀರ್ಘ ಅವಧಿಗೆ ಜವಾಬ್ದಾರಿ ನಿಭಾಯಿಸುವಾಗ ತಮಗೆ ಎಲ್ಲಾ ರೀತಿಯ ಬೆಂಬಲ, ಸಹಕಾರ ಮತ್ತು ಪ್ರೀತಿಯನ್ನು ಧಾರೆ ಎರೆದ ಸಹೋದ್ಯೋಗಿ ಸಚಿವ ಸಂಪುಟದ ಸದಸ್ಯರಿಗೆ ತಾವು ಸದಾ ಚಿರಋಣಿಯಾಗಿರುವುದಾಗಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ನಾವು ಜನರಿಗೆ ನೀಡಿದ ವಚನವನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಮತ್ತು ಯಾವುದೇ ಸಂದರ್ಭದಲ್ಲೂ ಮಾತಿಗೆ ತಪ್ಪಿ ನಡೆಯುವ ಕೆಲಸ ಮಾಡಿಲ್ಲ ಎಂಬ ಸಂತೃಪ್ತಿ ನನಗೂ ಹಾಗೂ ನಮ್ಮ ಪಕ್ಷಕ್ಕೂ ಇದೆ ಎಂದು ಸಿದ್ದರಾಮಯ್ಯ ಹೆಮ್ಮೆಯಿಂದ ಹೇಳಿದ್ದಾರೆ. ಪ್ರಧಾನಮಂತ್ರಿಗಳೂ ಸೇರಿದಂತೆ ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಎಷ್ಟೇ ಅಪಪ್ರಚಾರ ಮಾಡಿದರೂ, ಪ್ರಸ್ತುತ ಕರ್ನಾಟಕ ಇಡೀ ದೇಶದಲ್ಲೇ ತಲಾ ಆದಾಯ ಹಾಗೂ ಜಿಎಸ್‌ಟಿ (GST) ಸಂಗ್ರಹದಲ್ಲಿ ನಂಬರ್ 1 ಸ್ಥಾನದಲ್ಲಿದೆ ಎಂದು ಅವರು ಅಂಕಿ-ಅಂಶಗಳ ಸಮೇತ ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲದೆ,2026-27ರ ಆರ್ಥಿಕ ವರ್ಷದಲ್ಲಿ ಇಡೀ ದೇಶದಲ್ಲೇ ಕರ್ನಾಟಕದ ಆರ್ಥಿಕ ಪ್ರಗತಿ ದರವು ಶೇ. 8.1 ರಷ್ಟಿದೆ ಎಂದು ಸ್ಪಷ್ಟಪಡಿಸಿರುವ ಅವರು, ಸರ್ಕಾರ ಸಾಲ ಮಾಡಿದೆ ಎಂದು ವಿಪಕ್ಷಗಳು ಮಾಡುತ್ತಿರುವ ಟೀಕೆಗಳೆಲ್ಲವೂ ಕೇವಲ ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಸುಳ್ಳು ಮತ್ತು ಆಧಾರರಹಿತ ಆರೋಪಗಳಾಗಿವೆ ಎಂದು ಸಿದ್ದರಾಮಯ್ಯ ತಳ್ಳಿಹಾಕಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net