ರಾಜ್ಯಪಾಲರ ಅನುಪಸ್ಥಿತಿಯಲ್ಲೇ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ! CM Siddaramaiah

ರಾಜ್ಯಪಾಲರ ಅನುಪಸ್ಥಿತಿಯಲ್ಲೇ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ! CM Siddaramaiah
ರಾಜ್ಯಪಾಲರ ಅನುಪಸ್ಥಿತಿಯಲ್ಲೇ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ! CM Siddaramaiah
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ
  • ಇಂದು ರಾಜಭವನಕ್ಕೆ ತೆರಳಿ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ
  • ರಾಜ್ಯಪಾಲರ ಅನುಪಸ್ಥಿತಿಯಲ್ಲೇ ಅವರ ಅಧಿಕೃತ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ
  • ರಾಜೀನಾಮೆ ಪತ್ರಕ್ಕೆ ಅಂಗೀಕಾರದ ಮುದ್ರೆ ಒತ್ತಿದ ನಂತರವಷ್ಟೇ ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಆಗಲಿದೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ( CM Siddaramaiah ) ಅವರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ತೀವ್ರ ರಾಜಕೀಯ ಚರ್ಚೆ ಹಾಗೂ ವದಂತಿಗಳಿಗೆ ತೆರೆ ಎಳೆದಿರುವ ಸಿದ್ದರಾಮಯ್ಯ, ಇಂದು ರಾಜಭವನಕ್ಕೆ ತೆರಳಿ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ಆದರೆ, ರಾಜೀನಾಮೆ ಸಲ್ಲಿಕೆಯ ಈ ಮಹತ್ವದ ಕ್ಷಣದಲ್ಲಿ ರಾಜಪಾಲರು ಸ್ಥಳದಲ್ಲಿ ಲಭ್ಯವಿಲ್ಲದ ಕಾರಣ, ಸಿಎಂ ತಮ್ಮ ಪತ್ರವನ್ನು ರಾಜ್ಯಪಾಲರ ಅನುಪಸ್ಥಿತಿಯಲ್ಲೇ ಅವರ ವಿಶೇಷ ಕಾರ್ಯದರ್ಶಿಗೆ (ಸೆಕ್ರೆಟರಿ) ಸಲ್ಲಿಕೆ ಮಾಡಿದ್ದಾರೆ.

ಆರಂಭದಲ್ಲಿ ಮುಖ್ಯಮಂತ್ರಿಗಳ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕಾರ್ಯದರ್ಶಿ ಸ್ವೀಕರಿಸದೇ ನಿರಾಕರಿಸಿದರು. ರಾಜ್ಯಪಾಲರು ಬಂದ ಬಳಿಕ ರಾಜೀನಾಮೆ ಪತ್ರವನ್ನು ನೀಡುವಂತೆ ಹೇಳಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಮೂಡಿತು. ಅಂತಿಮವಾಗಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಸಿದ್ದರಾಮಯ್ಯ ಅವರ ರಾಜೀನಾಮೆ ಪತ್ರವನ್ನು ಸ್ವೀಕರಿಸಿದರು.

ಅಂದಹಾಗೆ, ರಾಜ್ಯಪಾಲರು ಇಲ್ಲದಿರುವುದು ಮುಖ್ಯಮಂತ್ರಿಗೆ ಮೊದಲೇ ತಿಳಿದಿತ್ತು. ಈ ಸಾಂವಿಧಾನಿಕ ಬಿಕ್ಕಟ್ಟಿನ ನಡುವೆಯೂ ತಮ್ಮ ಪಟ್ಟು ಸಡಿಲಿಸದ ಸಿದ್ದರಾಮಯ್ಯ, ರಾಜ್ಯಪಾಲರ ಭೇಟಿಗಾಗಿ ಕಾಯದೆ ಅವರ ಕಾರ್ಯದರ್ಶಿಗೆ ಪತ್ರ ತಲುಪಿಸಿ ಹೊರನಡೆದಿದ್ದಾರೆ. ರಾಜ್ಯಪಾಲರು ಮರಳಿ ಬೆಂಗಳೂರಿಗೆ ಬಂದ ತಕ್ಷಣ ಅವರನ್ನು ಖುದ್ದಾಗಿ ಭೇಟಿ ಮಾಡಿ ಮುಂದಿನ ಪ್ರಕ್ರಿಯೆ ಬಗ್ಗೆ ಚರ್ಚಿಸುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸದ್ಯ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ತಲುಪಿಸಿದ್ದಾರಾದರೂ, ತಾಂತ್ರಿಕವಾಗಿ ಸಿಎಂ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಸಾಂವಿಧಾನಿಕ ನಿಯಮಗಳ ಪ್ರಕಾರ ರಾಜ್ಯಪಾಲರು ಖುದ್ದಾಗಿ ಈ ಪತ್ರವನ್ನು ಪರಿಶೀಲಿಸಿ, ಅಂಗೀಕರಿಸುವವರೆಗೂ ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ. ರಾಜ್ಯಪಾಲರು ಈ ಪತ್ರವನ್ನು ಅಧಿಕೃತವಾಗಿ ಸ್ವೀಕರಿಸಿ, ಅಂಗೀಕಾರದ ಮುದ್ರೆ ಒತ್ತಿದ ನಂತರವಷ್ಟೇ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯ ಅಥವಾ ಮುಂದಿನ ಪರ್ಯಾಯ ರಾಜಕೀಯ ವ್ಯವಸ್ಥೆಯ ಅಧಿಕೃತ ಪ್ರಕ್ರಿಯೆಗಳು ಆರಂಭವಾಗಲಿವೆ.


ಇದೇ ವೇಳೆ, ತಾವು ರಾಜೀನಾಮೆ ನೀಡುವ ನಿಖರ ಸಮಯದಲ್ಲಿ ರಾಜ್ಯಪಾಲರು ರಾಜಭವನದಲ್ಲಿ ಇಲ್ಲದಂತೆ ಮಾಡಿರುವುದರ ಹಿಂದೆ ದೊಡ್ಡ ರಾಜಕೀಯ ಕುತಂತ್ರ ಅಡಗಿದೆ ಎಂದು ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ ಹೊರಹಾಕಿದ್ದಾರೆ. "ಇದೆಲ್ಲವನ್ನೂ ಯೋಜಿತವಾಗಿಯೇ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಗೊಂದಲದ ವಾತಾವರಣ ಸೃಷ್ಟಿಸಬೇಕು ಎಂಬ ಏಕೈಕ ಉದ್ದೇಶದಿಂದಲೇ ರಾಜ್ಯಪಾಲರು ಇಲ್ಲದಂತೆ ನೋಡಿಕೊಳ್ಳಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೇ ಖುದ್ದು ರಾಜ್ಯಪಾಲರಿಗೆ ಫೋನ್ ಮಾಡಿ ಮೂರು ದಿನಗಳ ಕಾಲ ಹೊರಗೆ ಹೋಗುವಂತೆ ಸೂಚಿಸಿದ್ದಾರೆ" ಎಂದು ಸಿಎಂ ಗಂಭೀರ ರಾಜಕೀಯ ಆರೋಪ ಮಾಡಿದ್ದಾರೆ ಎಂದು ವರದಿಯಾಗಿದೆ.

ರಾಜ್ಯಪಾಲರ ಕಾರ್ಯದರ್ಶಿ ಕೈ ಸೇರಿರುವ ಮುಖ್ಯಮಂತ್ರಿಗಳ ರಾಜೀನಾಮೆ ಪತ್ರದ ಮೇಲಿನ ಮುಂದಿನ ಕ್ರಮ ಈಗ ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿದೆ. ಒಂದು ಕಡೆ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಅಂಗೀಕಾರ ಬಾಕಿ ಉಳಿದಿದ್ದರೆ, ಮತ್ತೊಂದೆಡೆ ಕೇಂದ್ರ ನಾಯಕರ ಹಸ್ತಕ್ಷೇಪ ಹಾಗೂ ರಾಜಭವನದ ದುರುಪಯೋಗದ ಕುರಿತು ಕಾಂಗ್ರೆಸ್ ಪಾಳಯ ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದೆ. ರಾಜ್ಯಪಾಲರು ರಾಜಧಾನಿಗೆ ಮರಳಿ ಈ ರಾಜೀನಾಮೆಯನ್ನು ಯಾವಾಗ ಅಂಗೀಕರಿಸಲಿದ್ದಾರೆ ಮತ್ತು ಮುಂದಿನ ರಾಜಕೀಯ ಬೆಳವಣಿಗೆಗಳು ಯಾವ ತಿರುವು ಪಡೆದುಕೊಳ್ಳಲಿವೆ ಎಂಬುದನ್ನು ಇಡೀ ನಾಡು ಉಸಿರು ಬಿಗಿಹಿಡಿದು ನೋಡುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net