ಹಾಸನ ಉದ್ದೇಶಿತ IIT ಭೂಸಂತ್ರಸ್ತರಿಗೆ ಕೋರ್ಟ್ ಆದೇಶದಂತೆ ಪರಿಹಾರ: ಸಿಎಂ ಡಿ. ಕೆ ಶಿವಕುಮಾರ್ ಭರವಸೆ! CM D.K Shivakumar

ಹಾಸನ ಉದ್ದೇಶಿತ IIT ಭೂಸಂತ್ರಸ್ತರಿಗೆ ಕೋರ್ಟ್ ಆದೇಶದಂತೆ ಪರಿಹಾರ: ಸಿಎಂ ಡಿ. ಕೆ ಶಿವಕುಮಾರ್ ಭರವಸೆ!
ಹಾಸನ ಉದ್ದೇಶಿತ IIT ಭೂಸಂತ್ರಸ್ತರಿಗೆ ಕೋರ್ಟ್ ಆದೇಶದಂತೆ ಪರಿಹಾರ: ಸಿಎಂ ಡಿ. ಕೆ ಶಿವಕುಮಾರ್ ಭರವಸೆ!
Published on
ಬೆಂಗಳೂರು: ಹಾಸನದಲ್ಲಿ ಉದ್ದೇಶಿತ ಐಐಟಿ (IIT) ಯೋಜನೆಗಾಗಿ ಭೂಮಿ ಕಳೆದುಕೊಂಡು ಕಳೆದ ಎರಡು ದಶಕಗಳಿಂದ ಸಂಕಷ್ಟ ಎದುರಿಸುತ್ತಿರುವ ಭೂಸಂತ್ರಸ್ತ ರೈತರಿಗೆ ನ್ಯಾಯಾಲಯದ ಆದೇಶದನ್ವಯ ಕಾನೂನುಬದ್ಧ ಪರಿಹಾರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(CM D.K Shivakumar) ಭರವಸೆ ನೀಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಹಾಸನ ಜಿಲ್ಲಾ ರೈತ ಸಂಘಟನೆಗಳ ಪದಾಧಿಕಾರಿಗಳು, ರೈತ ಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳ ಮಹತ್ವದ ಸಭೆ ಜರುಗಿತು. ಸಭೆಯಲ್ಲಿ ದೊಡ್ಡಹೊನ್ನೇನಹಳ್ಳಿ, ಕಾಚಾನಾಯಕನಹಳ್ಳಿ ಸೇರಿದಂತೆ ಯೋಜನೆ ವ್ಯಾಪ್ತಿಯ 7 ಗ್ರಾಮಗಳ ರೈತರು ಪಾಲ್ಗೊಂಡು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ರೈತರ ಅಹವಾಲುಗಳನ್ನು ಆಲಿಸಿದ ಸಿಎಂ, ಸ್ಥಳದಲ್ಲೇ ಅಧಿಕಾರಿಗಳಿಂದ ನಕ್ಷೆ ಮತ್ತು ದಾಖಲಾತಿಗಳನ್ನು ತರಿಸಿಕೊಂಡು ಸುದೀರ್ಘ ಪರಿಶೀಲನೆ ನಡೆಸಿದ್ದಾರೆ.

ಗೌಡರ ಕುಟುಂಬದ ವಿರುದ್ಧ ರೈತರ ಗಂಭೀರ ಭೂಕಬಳಿಕೆ ಆರೋಪ

ಸಭೆಯಲ್ಲಿ ಜೆಡಿಎಸ್ ಮುಖಂಡರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತರು, ಎಚ್.ಡಿ.ದೇವೇಗೌಡ ಎಜುಕೇಷನ್ ಟ್ರಸ್ಟ್ ಮಾಡಲು ನಮ್ಮ ಫಲವತ್ತಾದ ಭೂಮಿಯನ್ನು ಕಬಳಿಸುವ ಸಂಚು ನಡೆಯುತ್ತಿದೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಕುಮ್ಮಕ್ಕಿನಿಂದಾಗಿ ನಮಗೆ ಇತ್ತ ನ್ಯಾಯಯುತ ಪರಿಹಾರವೂ ಇಲ್ಲ, ಅತ್ತ ನಿವೇಶನವೂ ಇಲ್ಲದಂತಾಗಿದೆ ಎಂದು ದೂರಿದ್ದಾರೆ.
ಆರಂಭದಲ್ಲಿ ಐಐಟಿ ಯೋಜನೆಗೆ 334 ಎಕರೆ ಭೂಮಿ ಸಾಕು ಎಂದಿದ್ದ ಅಧಿಕಾರಿಗಳು, ಈಗ 1057 ಎಕರೆ ಎಂದು ಹೇಳುತ್ತಿದ್ದಾರೆ. ಈಗಾಗಲೇ ಐಐಟಿ ಧಾರವಾಡಕ್ಕೆ ಸ್ಥಳಾಂತರಗೊಂಡಿದ್ದರೂ, ಐಐಟಿ ಹೆಸರಿನಲ್ಲಿ ಗೌಡರ ಕುಟುಂಬ ಮತ್ತು ಜೆಡಿಎಸ್ ನಾಯಕರು ರಾಷ್ಟ್ರೀಯ ಹೆದ್ದಾರಿಗೆ (NH) ಹೊಂದಿಕೊಂಡಿರುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನನ್ನು ದೋಚಲು ಹೊರಟಿದ್ದಾರೆ ಎಂದು ರೈತರು ಗಂಭೀರ ಆರೋಪಿಸಿದ್ದಾರೆ.
ರೈತರ ಮಾತುಗಳನ್ನು ಆಲಿಸಿದ ನಂತರ ಮಾತನಾಡಿದ ಸಿಎಂ, ಬಿಡದಿ ರೈತರಿಗೆ ಒಂದು ನ್ಯಾಯ, ಹಾಸನ ರೈತರಿಗೆ ಮತ್ತೊಂದು ನ್ಯಾಯ ಮಾಡಲು ನಾನು ಸಿದ್ಧನಿಲ್ಲ. ರೈತರ ಕೈಗೆ ಹೆಚ್ಚಿನ ಹಣ ಬಂದರೆ ಎಲ್ಲರಿಗಿಂತ ಹೆಚ್ಚು ಸಂತೋಷ ಪಡುವವನು ನಾನು. ನಮ್ಮ ಸರ್ಕಾರ ಎಂದಿಗೂ ರೈತರ ಪರವಾಗಿರುತ್ತದೆ ಎಂದು ಹೇಳಿದ್ದಾರೆ.

ಅಧಿಕಾರಿಗಳ ಅಲೆದಾಟ ಹಾಗೂ 50:50 ಅನುಪಾತದ ಉಲ್ಲಂಘನೆ

2007ರಲ್ಲಿ ಎಕರೆಗೆ 15 ರಿಂದ 25 ಲಕ್ಷ ರೂ. ಪರಿಹಾರ ನಿಗದಿಪಡಿಸಲಾಗಿತ್ತು. ಅಭಿವೃದ್ಧಿಪಡಿಸಿದ ಜಾಗದಲ್ಲಿ 50:50 ಅನುಪಾತದಲ್ಲಿ ನಿವೇಶನ ನೀಡುವುದಾಗಿ ಕೋರ್ಟ್‌ನಲ್ಲಿ ಭರವಸೆ ನೀಡಿ ರೈತರಿಂದ ಕೇಸ್ ವಾಪಸ್ ಪಡೆಸಲಾಗಿತ್ತು. ಆದರೆ, ಈಗ ನಿವೇಶನ ಲಭ್ಯವಿಲ್ಲ ಎಂದು ಅಧಿಕಾರಿಗಳು ಹಿಂಬರಹ ನೀಡುತ್ತಿದ್ದಾರೆ. ವರ್ಷಕ್ಕೆರಡು ಬಾರಿ ಪರಿಹಾರ ಪಡೆದುಕೊಳ್ಳಿ ಎಂದು ನೋಟಿಸ್ ನೀಡುವ ಅಧಿಕಾರಿಗಳು, ಅಲ್ಲಿಗೆ ಹೋದರೆ ಹಾಸನ, ಮೈಸೂರು ಎಂದು ಅಲೆದಾಡಿಸುತ್ತಿದ್ದಾರೆ. ಪರಿಹಾರ ಕೇವಲ ಪೇಪರ್ ಮೇಲೆ ಉಳಿದಿದ್ದು, ಅಧಿಕಾರಿಗಳು ರೇವಣ್ಣ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಈ ಜಾಗದ ಪಕ್ಕದಲ್ಲೇ ರೇವಣ್ಣ ಅವರ ನೇತೃತ್ವದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತಿದ್ದು, ಅಲ್ಲಿ ಅಡಿಗೆ 7-8 ಸಾವಿರ ರೂ. ದರವಿದೆ. ಹೀಗಿರುವಾಗ ನಮಗೆ ಎಕರೆಗೆ ಕೇವಲ 25 ಲಕ್ಷ ರೂ. ಕೊಟ್ಟರೆ ಏನು ಮಾಡುವುದು, ನಮಗೆ ಪರಿಹಾರದ ಸೈಟೂ ಬೇಡ, ದುಡ್ಡೂ ಬೇಡ, ನಮ್ಮ ಜಮೀನನ್ನು ನಮಗೆ ಡಿನೋಟಿಫೈ ಮಾಡಿ ವಾಪಸ್ ಕೊಡಿಸಿ ಎಂದು ಜೀವಭಯದಲ್ಲಿರುವ ರೈತರು ಸಿಎಂ ಮುಂದೆ ಗೋಳು ತೋಡಿಕೊಂಡರು.
ಶಾಸಕ ಶಿವಲಿಂಗೇಗೌಡ ಅವರು ರೈತರ ಪರವಾಗಿ ಧ್ವನಿ ಎತ್ತಿ, ಕೋರ್ಟ್ ನಿರ್ದೇಶನದ 50:50 ಶೇರಿಂಗ್ ಉಲ್ಲಂಘನೆಯಾಗಿದೆ. ಹಾಸನಕ್ಕೆ ನಿಜವಾಗಿಯೂ ಐಐಟಿ ತರುವುದಾದರೆ ನಾವು ರೈತರ ಕಾಲು ಹಿಡಿದು 350 ಎಕರೆ ಭೂಮಿ ಕೊಡಿಸುತ್ತೇವೆ. ಆದರೆ ಐಐಟಿ ನೆಪದಲ್ಲಿ ರೈತರನ್ನು ಲೂಟಿ ಮಾಡಲು ಬಿಡುವುದಿಲ್ಲ ಎಂದರು.

ಕಾನೂನುಬದ್ಧ ಪರಿಹಾರಕ್ಕೆ ಸಿಎಂ ಗಡುವು

ರೈತರ ಹಾಗೂ ಕ್ಲಾಸ್ ಒನ್ ಕಾಂಟ್ರಾಕ್ಟರ್‌ಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸಿ ಒಡೆದು ಆಳುವ ರಾಜಕೀಯ ಮಾಡಲಾಗುತ್ತಿದೆ ಎಂಬ ದೂರನ್ನು ಆಲಿಸಿದ ಸಿಎಂ, ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ಕಾನೂನುಬದ್ಧ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅಧಿಕಾರಿಗಳು ಪ್ರಾಥಮಿಕ ವಾಸ್ತವ ಸಂಗತಿಗಳನ್ನು ವಿವರಿಸಿದ್ದಾರೆ. ಅವರ ಜೊತೆ ಮತ್ತೊಂದು ಸುತ್ತಿನ ತುರ್ತು ಸಭೆ ನಡೆಸಿ, ರೈತರ ಹಿತರಕ್ಷಣೆಗೆ ಬದ್ಧವಾಗಿರುವ ಸೂಕ್ತ ಪರಿಹಾರ ಮಾರ್ಗವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು. ಸಭೆಯಲ್ಲಿ ಸಂಸದ ಶ್ರೇಯಸ್ ಪಟೇಲ್, ಮಾಜಿ ಎಂಎಲ್ಸಿ ಗೋಪಾಲಸ್ವಾಮಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net