ಬಾಂಗ್ಲಾದಲ್ಲಿ ಮತ್ತೊಮ್ಮೆ ಹಿಂಸಾಚಾರ? ಶೇಖ್​ ಹಸೀನಾ ಸುದ್ದಿಗೋಷ್ಠಿ ಬೆನ್ನಲ್ಲೆ ಬಾಂಬ್​ ಅಟ್ಯಾಕ್​; ಸುಟ್ಟು ಭಸ್ಮವಾದ ಶಕೀಬ್​ ಅಲ್​ ಹಸನ್​ ಮನೆ! Shakib Al Hasan

ಮಾಜಿ ಕ್ರಿಕೆಟಿಗ ಹಾಗೂ ಅವಾಮಿ ಲೀಗ್ ಸಂಸದ ಶಕೀಬ್ ಅಲ್ ಹಸನ್ ಪೂರ್ವಜರ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ
ಮಾಜಿ ಕ್ರಿಕೆಟಿಗ ಹಾಗೂ ಅವಾಮಿ ಲೀಗ್ ಸಂಸದ ಶಕೀಬ್ ಅಲ್ ಹಸನ್ ಪೂರ್ವಜರ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ
Published on

ಪ್ರಮುಖ ಮುಖ್ಯಾಂಶಗಳು

  • ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಭೀಕರ ಹಿಂಸಾಚಾರ!
  • ಮಾಜಿ ಕ್ರಿಕೆಟಿಗ ಹಾಗೂ ಅವಾಮಿ ಲೀಗ್ ಸಂಸದ ಶಕೀಬ್ ಅಲ್ ಹಸನ್ ಪೂರ್ವಜರ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ
  • ಶೇಖ್ ಹಸೀನಾ ವರ್ಚುವಲ್ ಸುದ್ದಿಗೋಷ್ಠಿಯ ಬೆನ್ನಲ್ಲೇ ದಾಳಿ
ಢಾಕಾ: ಬಾಂಗ್ಲದೇಶದ ಮಾಜಿ ಪ್ರಧಾನಿ ಶೇಖ್​ ಹಸೀನಾ ಭಾರತದಿಂದ ಸುದ್ದಿಗೋಷ್ಠಿ ನಡೆಸಿದ ಕೆಲವೇ ಗಂಟೆಗಳಲ್ಲಿ ಬಾಂಗ್ಲಾದ ಮಾಜಿ ಕ್ರಿಕೆಟಿಗ ಹಾಗೂ ಅವಾಮಿ ಲೀಗ್‌ನ ಮಾಜಿ ಸಂಸದ ಶಕೀಬ್ ಅಲ್ ಹಸನ್ (Shakib Al Hasan) ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಮಾಗುರಾ ಪಟ್ಟಣದ ಕೇಶಬ್‌ಮೋರ್ ಪ್ರದೇಶದಲ್ಲಿರುವ ಶಕೀಬ್ ಅವರ ಮನೆಯ ಮೇಲೆ ಬುಧವಾರ (ಆ.5) ರಾತ್ರಿ 8.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಮನೆ ಸಂಪೂರ್ಣವಾಗಿ ಧ್ವಂಸವಾಗಿದೆ ಎಂದು ಹೇಳಲಾಗುತ್ತಿದೆ.

ಸುದ್ದಿಗೋಷ್ಠಿಯ ಬೆನ್ನಲ್ಲೇ ನಡೆದ ದಾಳಿ!

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ, ನವದೆಹಲಿಯ ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ್ದರು. ಸುದ್ದಿಗೋಷ್ಠಿಯಲ್ಲಿ ವಿಶ್ವಪ್ರಸಿದ್ಧ ಕ್ರಿಕೆಟ್ ಐಕಾನ್ ಶಕೀಬ್ ಅಲ್ ಹಸನ್ ಕೂಡ ಹಸೀನಾ ಅವರೊಂದಿಗೆ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಈ ಆಘಾತಕಾರಿ ದಾಳಿ ನಡೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಅವಾಮಿ ಲೀಗ್‌ನ ಕಾರ್ಯಕ್ರಮಗಳು ಹಾಗೂ ನಾಯಕರ ಧ್ವನಿಯನ್ನು ಅಡಗಿಸಲು ಈ ರೀತಿಯ ಭಯೋತ್ಪಾದನಾ ಕೃತ್ಯಗಳನ್ನು ಎಸಗಲಾಗುತ್ತಿದೆ. ಹೊಸ ಫ್ಯಾಸಿಸಂ ಈಗ ಬಾಂಗ್ಲಾದೇಶವನ್ನು ಆವರಿಸಿದೆ ಎಂದು ಅವಾಮಿ ಲೀಗ್ ಪಕ್ಷ ದಾಳಿಯನ್ನು ಖಂಡಿಸಿ ಹೇಳಿಕೆ ಬಿಡುಗಡೆ ಮಾಡಿದೆ.


ಡಿಸೆಂಬರ್‌ನಲ್ಲಿ ಬಾಂಗ್ಲಾಗೆ ಮರಳುತ್ತೇನೆ

ಭಾರತದಲ್ಲಿ ಆಶ್ರಯ ಪಡೆದಿರುವ 78 ವರ್ಷದ ಮಾಜಿ ಪ್ರಧಾನಿ ಶೇಖ್ ಹಸೀನಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳಲು ನಿರ್ಧರಿಸಿದ್ದೇನೆ. ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ಈ ಹೋರಾಟದಲ್ಲಿ ಬಂಧನ ಅಥವಾ ಸಾವನ್ನು ಎದುರಿಸಲು ನಾನು ಸಿದ್ಧಳಿದ್ದೇನೆ ಎಂದು ಘೋಷಿಸಿದ್ದಾರೆ.
ನನ್ನ ಮರಳುವಿಕೆ ಅಧಿಕಾರಕ್ಕಾಗಿ ಅಲ್ಲ, ಬದಲಾಗಿ ನನ್ನ ದೇಶವನ್ನು ಅಭಿವೃದ್ಧಿ ಪಥದತ್ತ ತರಲು ಹಾಗೂ ಜಾತ್ಯತೀತತೆಯನ್ನು ಮರುಸ್ಥಾಪಿಸಲು ನಾನು ಮರಳಿದ್ದೆನೆ. ನನಗೆ ಚೆನ್ನಾಗಿ ತಿಳಿದಿದೆ, ಅವರು ನನ್ನನ್ನು ಜೈಲಿಗೆ ಹಾಕಬಹುದು ಅಥವಾ ಕೊಲ್ಲಬಹುದು, ಆದರೂ ನಾನು ನನ್ನ ಜನರ ಬಳಿಗೆ ಮರಳಲಿದ್ದೇನೆಂದು ಅವರು ಭಾವುಕರಾಗಿ ನುಡಿದಿದ್ದಾರೆ.
ಅಲ್ಲದೆ, ಇದು ನಾವು ನಿರ್ಮಿಸಿದ ಬಾಂಗ್ಲಾದೇಶವಲ್ಲ. ಇಂದು ಇಲ್ಲಿ ಭಯದ ವಾತಾವರಣ ನೆಲೆಸಿದೆ. ಪ್ರಜಾಪ್ರಭುತ್ವ ಮತ್ತು ನ್ಯಾಯಕ್ಕಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಅಂತಾರಾಷ್ಟ್ರೀಯ ಸಮುದಾಯ ನಮ್ಮ ಜೊತೆ ನಿಲ್ಲಬೇಕು ಎಂದು ಹಸೀನಾ ಕರೆ ನೀಡಿದ್ದಾರೆ.

ರಾಜತಾಂತ್ರಿಕ ಬಿಕ್ಕಟ್ಟು

ಆಗಸ್ಟ್ 5, 2024ರಂದು ಸರ್ಕಾರದ ವಿರುದ್ಧ ನಡೆದ ಭಾರೀ ಪ್ರತಿಭಟನೆಗಳ ಬಳಿಕ ಶೇಖ್ ಹಸೀನಾ ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದಿದ್ದರು. ಕಳೆದ ನವೆಂಬರ್‌ನಲ್ಲಿ ಬಾಂಗ್ಲಾದೇಶದ ವಿಶೇಷ ನ್ಯಾಯಮಂಡಳಿಯು ಅವರ ವಿರುದ್ಧ ಮರಣದಂಡನೆ ವಿಧಿಸಿ ಆದೇಶಿಸಿತ್ತು.
ಇಂತಹ ಸಂಕಷ್ಟದ ಪರಿಸ್ಥಿತಿಯ ನಡುವೆಯೂ ಭಾರತದ ನೆಲದಿಂದ ಬಾಂಗ್ಲಾ ಮಾಧ್ಯಮಗಳನ್ನು ಉದ್ದೇಶಿಸಿ ಹಸೀನಾ ಮಾತನಾಡಿರುವುದು ಈಗಾಗಲೇ ದ್ವಿಪಕ್ಷೀಯ ಹಾಗೂ ರಾಜತಾಂತ್ರಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net