ಸೂರಜ್‌ಕುಂಡ್ ಮೇಳ ಉಯ್ಯಾಲೆ ದುರಂತ: ಕಂಪನಿ ಮಾಲೀಕ ಸೇರಿ ಇಬ್ಬರ ಬಂಧನ | Surajkund Mela Tragedy

ಸೂರಜ್‌ಕುಂಡ್ ಕರಕುಶಲ ಮೇಳದಲ್ಲಿ ಕುಸಿದು ಬಿದ್ದ ಉಯ್ಯಾಲೆ, ಬಂಧಿತ ಆರೋಪಿಗಳು
ಸೂರಜ್‌ಕುಂಡ್ ಕರಕುಶಲ ಮೇಳದಲ್ಲಿ ಕುಸಿದು ಬಿದ್ದ ಉಯ್ಯಾಲೆ, ಬಂಧಿತ ಆರೋಪಿಗಳು
Published on

ಪ್ರಮುಖ ಮುಖ್ಯಾಂಶಗಳು

  • ಸೂರಜ್‌ಕುಂಡ್ ಕರಕುಶಲ ಮೇಳದಲ್ಲಿ ಕುಸಿದು ಬಿದ್ದ ಉಯ್ಯಾಲೆ
  • ಉಯ್ಯಾಲೆಯಡಿ ಸಿಲುಕಿದವರ ರಕ್ಷಣೆಗೆ ಧಾವಿಸಿದ ಪೊಲೀಸ್ ನಿಧನ
  • ದುರಂತಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹರಿಯಾಣಾ ಪೊಲೀಸ್​
ಹರಿಯಾಣಾ: ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಸೂರಜ್‌ಕುಂಡ್ ಕರಕುಶಲ ಮೇಳ ದುರಂತ (Surajkund Mela Tragedy) ಕುರಿತು ನಡೆಯುತ್ತಿರುವ ಪೊಲೀಸ್​ ತನಿಖೆಯಲ್ಲಿ ಇಬ್ಬರು ಆರೋಪಿಗಳನ್ನು ಹರಿಯಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ದುರಂತದ ಕುರಿತು ನಡೆದ ಪೊಲೀಸ್​ ತನಿಖೆಯಲ್ಲಿ ಉಯ್ಯಾಲೆ ಆಪರೇಟಿಂಗ್​ ಕಂಪನಿಯ ಮಾಲೀಕ ಸೇರಿದಂತೆ ಇಬ್ಬರು ಆರೋಪಿಗಳನ್ನು ಹರಿಯಾಣಾ ಪೊಲೀಸರು ಬಂಧಿಸಿದ್ದಾರೆ.
ಸೂರಜ್‌ಕುಂಡ್ ಮೇಳದಲ್ಲಿ ನಿಯೋಜಿಸಲ್ಪಟ್ಟಿದ್ದ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ ಜಗದೀಶ್ ಪ್ರಸಾದ್, ಗಾಯಗೊಂಡ ಜನರನ್ನು ರಕ್ಷಿಸಲು ಮುಂದಾದಾಗ ಉಯ್ಯಾಲೆ ಅವರ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇವರೊಟ್ಟಿಗೆ ಇತರೆ ಹನ್ನೆರಡು ಮಂದಿ ನಾಗರಿಕರು ಗಾಯಗೊಂಡಿದ್ದಾರೆ.

ಇಬ್ಬರು ಆರೋಪಿಗಳ ವಿರುದ್ಧ ಎಫ್‌ಐಆರ್

ಮೇಳದಲ್ಲಿ ರೈಡ್ ಅಳವಡಿಸಿದ ಹಿಮಾಚಲ ಫನ್ ಕೇರ್ ಕಂಪನಿಯ ಮಾಲೀಕ ಮೊಹಮ್ಮದ್ ಶಕೀರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಇತನು ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ನಿವಾಸಿಯಾಗಿದ್ದು, ಇವನು ಮುರಿದು ಬಿದ್ದ ಉಯ್ಯಾಲೆಯ ಮಾಲೀಕನಾಗಿದ್ದಾನೆ.
ಉಯ್ಯಾಲೆಯ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡುತ್ತಿದ್ದ, ಉತ್ತರ ಪ್ರದೇಶದ ಮೀರತ್ ಕಂಟೋನ್ಮೆಂಟ್ ನಿವಾಸಿ ನಿತೇಶ್ ಎಂಬ ಮತ್ತೊಬ್ಬ ಆರೋಪಿಯನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಈ ದುರ್ಘಟನೆ ಹೇಗೆ ನಡೆಯಿತು ಮತ್ತು ಅದರಲ್ಲಿ ಇವರಿಬ್ಬರ ಪಾತ್ರವೇನು ಎಂಬ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳಿಂದ ಕುಟುಂಬಗಳ ಭೇಟಿ

ಅಪಘಾತ ಹೇಗೆ ಸಂಭವಿಸಿತು ಎಂಬುದನ್ನು ಪರಿಶೀಲಿಸಲು ಉಪ ಪೊಲೀಸ್ ಆಯುಕ್ತ ಅವರ ಮೇಲ್ವಿಚಾರಣೆಯಲ್ಲಿ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಎಸ್‌ಐಟಿಯಲ್ಲಿ ಎಸಿಪಿ ವರುಣ್ ದಹಿಯಾ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಮತ್ತು ಸಬ್ ಇನ್‌ಸ್ಪೆಕ್ಟರ್​ಗಳು ಇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪೊಲೀಸ್ ಮಹಾನಿರ್ದೇಶಕ ಅಜಯ್ ಸಿಂಗ್ಲಾ ಮತ್ತು ಪೊಲೀಸ್ ಆಯುಕ್ತ ಸತೇಂದರ್ ಕುಮಾರ್ ಗುಪ್ತಾ ಅವರು ಫರಿದಾಬಾದ್‌ನ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆಯ ನಂತರ ಮೃತ ಅಧಿಕಾರಿಯ ಕುಟುಂಬವನ್ನು ಭೇಟಿ ಮಾಡಿದರು. ಮೃತರ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಅವರು ಇತರರನ್ನು ಉಳಿಸುವಾಗ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಅವರ ಧೈರ್ಯದ ಬಗ್ಗೆ ನಮಗೆ ತುಂಬಾ ದುಃಖ ಮತ್ತು ಹೆಮ್ಮೆ ಇದೆ ಎಂದು ಡಿಜಿಪಿ ಹೇಳಿದರು, ಪೊಲೀಸ್ ಇಲಾಖೆಯು ಕುಟುಂಬಕ್ಕೆ ಆರ್ಥಿಕ ನೆರವು ನೀಡಲಿದೆ ಮತ್ತು ಅನುಕಂಪದ ನೇಮಕಾತಿ ಯೋಜನೆಯಡಿ ಅರ್ಹ ಸದಸ್ಯರಿಗೆ ಉದ್ಯೋಗ ನೀಡಲಿದೆ ಎಂದು ಹೇಳಿದರು.

ಗಾಯಾಳುಗಳು ಡಿಸ್ಚಾರ್ಜ್​

ಮಹಿಳಾ ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರು ಸೇರಿದಂತೆ 12 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರಲ್ಲಿ ಐದು ಜನರನ್ನು ಚಿಕಿತ್ಸೆಯ ನಂತರ ಬಿಡುಗಡೆ ಮಾಡಲಾಗಿದೆ. ಉಳಿದ ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ. ಗಾಯಾಳುಗಳಿಗೆ ಫರಿದಾಬಾದ್‌ನ ಸಿವಿಲ್ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net