ಪ್ರಾಣಕ್ಕೆ ಸಂಚಕಾರ ತಂದ ಮೋಜಿನಾಟ...ಉಯ್ಯಾಲೆ ಕುಸಿದು 13 ಮಂದಿಗೆ ಗಂಭೀರ ಗಾಯ..ರಕ್ಷಿಸಲು ಪ್ರಯತ್ನಿಸಿದ ಪೊಲೀಸ್ ಸಾವು! | Surajkund Mela Tragedy

Surajkund Mela Tragedy | ಹರಿಯಾಣದ ಫರಿದಾಬಾದ್‌ನಲ್ಲಿ ನಡೆದ ಸೂರಜ್‌ಕುಂಡ್ ದುರಂತ
Surajkund Mela Tragedy | ಹರಿಯಾಣದ ಫರಿದಾಬಾದ್‌ನಲ್ಲಿ ನಡೆದ ಸೂರಜ್‌ಕುಂಡ್ ದುರಂತ
Published on
ಚಂಡೀಗಢ: ಹರಿಯಾಣದ ಫರಿದಾಬಾದ್‌ನಲ್ಲಿ ನಡೆಯುತ್ತಿರುವ ಸೂರಜ್‌ಕುಂಡ್ ಅಂತರರಾಷ್ಟ್ರೀಯ ಕರಕುಶಲ ಮೇಳದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಸುಮಾರು 13 ಜನರು ಗಾಯಗೊಂಡಿದ್ದು, ಒಬ್ಬ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಜಾತ್ರೆಯಲ್ಲಿದ್ದ ಉಯ್ಯಾಲೆ ಇದ್ದಕ್ಕಿದ್ದಂತೆ ಮೈದಾನದಲ್ಲಿ ಕುಸಿದು ಬಿದ್ದು, 7-8 ಜನರು ಅದರಡಿ ಸಿಲುಕಿದ್ದರು ಎನ್ನಲಾಗಿದ್ದು, ಸಂತ್ರಸ್ತರನ್ನು ರಕ್ಷಿಸುವ ಪ್ರಯತ್ನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್ ಪ್ರಸಾದ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಎಲ್ಲಾ ಗಾಯಾಳುಗಳನ್ನು ತುರ್ತು ಚಿಕಿತ್ಸೆಗಾಗಿ ಹತ್ತಿರದ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಗೇಟ್ ಸಂಖ್ಯೆ 2 ರ ಬಳಿ ಸ್ವಾಗತ ಕಮಾನು ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಇಬ್ಬರು ಗಾಯಗೊಂಡಿದ್ದಾರೆ.

ಸಂತಾಪ ವ್ಯಕ್ತಪಡಿಸಿದ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ

ಫರಿದಾಬಾದ್‌ನಲ್ಲಿ ನಡೆದ ಘಟನೆಯ ಕುರಿತಾಗಿ ತಮ್ಮ ಎಕ್ಸ್​ ಖಾತೆಯ ಮೂಲಕ ಸಂತಾಪ ವ್ಯಕ್ತಪಡಿಸಿರುವ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಸೂರಜ್‌ಕುಂಡ್ ಮೇಳದ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ.
ಗಾಯಗೊಂಡವರಿಗೆ ಸೂಕ್ತ ಮತ್ತು ತಕ್ಷಣದ ಚಿಕಿತ್ಸೆಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ. ಹರಿಯಾಣ ಸರ್ಕಾರವು ಗಾಯಾಳುಗಳು ಮತ್ತು ಅವರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಬರೆದುಕೊಂಡಿದ್ದಾರೆ.

ಜಿಲ್ಲಾಧಿಕಾರಿ ಆಯುಷ್ ಸಿನ್ಹಾ ಪ್ರತಿಕ್ರಿಯೆ

ಇಂದು (ಫೆಬ್ರವರಿ 7) ಸಂಜೆ 6:15 ರ ಸುಮಾರಿಗೆ ಸೂರಜ್‌ಕುಂಡ್ ಪ್ರದೇಶದ ಬಳಿ ಒಂದು ದುರಂತ ಘಟನೆ ಸಂಭವಿಸಿದೆ, ಈ ಘಟನೆಯಲ್ಲಿ ಸುಮಾರು 13 ಜನರು ಗಾಯಗೊಂಡಿದ್ದು, ಅವರಲ್ಲಿ ಒಂಬತ್ತು ಜನರನ್ನು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಾಲ್ವರನ್ನು ಡಿಕೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜನರನ್ನು ರಕ್ಷಿಸಲು ಪ್ರಯತ್ನಿಸಿದ ಪೊಲೀಸ್ ಸಿಬ್ಬಂದಿ, ಇನ್ಸ್‌ಪೆಕ್ಟರ್ ತೀವ್ರವಾಗಿ ಗಾಯಗೊಂಡಿದ್ದು ಅತ್ಯಂತ ದುರದೃಷ್ಟಕರ ಬೆಳವಣಿಗೆಯಾಗಿದೆ. ಹೆಚ್ಚಿನ ವಿವರಗಳನ್ನು ಅಧಿಕಾರಿಗಳಿಂದ ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆಯುಷ್ ಸಿನ್ಹಾ ತಿಳಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net