ಬಿಜೆಪಿ ಸೇರಿದ ರಾಘವ್​ ಚಡ್ಡಾ: ಪತಿ ಬೆನ್ನಲ್ಲೆ ಪರಿಣಿತಿ ರಾಜಕೀಯಕ್ಕೆ ಎಂಟ್ರಿ? ವೈರಲ್​ ಆಗುತ್ತಿದೆ ಸಂದರ್ಶನದ ವಿಡಿಯೋ! Raghav Chadha

ಆಮ್​ ಆದ್ಮಿ ಪಾರ್ಟಿ ಬಿಟ್ಟು ಬಿಜೆಪಿ ಸೇರಿದ ರಾಘವ್​ ಚಡ್ಡಾ
ಆಮ್​ ಆದ್ಮಿ ಪಾರ್ಟಿ ಬಿಟ್ಟು ಬಿಜೆಪಿ ಸೇರಿದ ರಾಘವ್​ ಚಡ್ಡಾ
Published on

ಪ್ರಮುಖ ಮುಖ್ಯಾಂಶಗಳು

  • ಆಮ್​ ಆದ್ಮಿ ಪಾರ್ಟಿ ಬಿಟ್ಟು ಬಿಜೆಪಿ ಸೇರಿದ ರಾಘವ್​ ಚಡ್ಡಾ
  • ಪತಿ ಬೆನ್ನಲ್ಲೆ ಪತ್ನಿ ಪರಿಣಿತಿ ರಾಜಕೀಯಕ್ಕೆ ಎಂಟ್ರಿ?
  • ವೈರಲ್​ ಆಗುತ್ತಿದೆ ಹಿಂದೆ ನೀಡಿದ್ದ ಸಂದರ್ಶನದ ವಿಡಿಯೋ
ನವದೆಹಲಿ: ಭಾರತೀಯ ರಾಜಕೀಯದಲ್ಲಿ ನಿನ್ನೆ (ಏ.24) ಯಿಂದ ಭಾರಿ ಸಂಚಲನ ಸಂಭವಿಸಿದೆ. ಅರವಿಂದ್ ಕೇಜ್ರಿವಾಲ್ ಅವರ ಬಲಗೈ ಬಂಟನಂತಿದ್ದ ಯುವ ಸಂಸದ ರಾಘವ್ ಚಡ್ಡಾ (Raghav Chadha), ಆಮ್ ಆದ್ಮಿ ಪಾರ್ಟಿಗೆ (AAP) ಗುಡ್‌ಬೈ ಹೇಳಿ ಕಮಲ ಪಾಳೆಯಕ್ಕೆ (BJP) ಜಿಗಿದಿದ್ದಾರೆ.

ಪತಿ ಬಿಜೆಪಿಗೆ, ಪತ್ನಿ ರಾಜಕೀಯಕ್ಕೆ?

ಹೌದು, ರಾಘವ್ ಚಡ್ಡಾ ಏಪ್ರಿಲ್ 24ರಂದು ಅಧಿಕೃತವಾಗಿ ಬಿಜೆಪಿ ಸೇರುತ್ತಿದ್ದಂತೆ, ಅವರ ಪತ್ನಿ ಪರಿಣಿತಿ ಚೋಪ್ರಾ ಕೂಡ ಮೈಕ್ ಹಿಡಿದು ಭಾಷಣ ಮಾಡಲು ರೆಡಿಯಾಗಿದ್ದಾರಾ? ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಮದುವೆಯಾದಾಗಿನಿಂದ ಈ 'ಪವರ್ ಕಪಲ್' ಬಗ್ಗೆ ಸದಾ ಸುದ್ದಿಯಾಗುತ್ತಲೇ ಇರುತ್ತದೆ. ಈಗ ರಾಘವ್ ಅವರ ಈ ದೊಡ್ಡ ನಿರ್ಧಾರದ ಹಿಂದೆ ಪರಿಣಿತಿ ಅವರ ಕೈವಾಡವೂ ಇದೆಯಾ? ಅಥವಾ ಪರಿಣಿತಿ ಶೀಘ್ರದಲ್ಲೇ ಸಂಸದೆಯಾಗಿ ಕಾಣಿಸಿಕೊಳ್ಳಲಿದ್ದಾರಾ? ಎಂಬ ಪ್ರಶ್ನೆಗಳಿಗೆ ಸ್ವತಃ ರಾಘವ್ ಚಡ್ಡಾ ಉತ್ತರ ನೀಡಿದ್ದಾರೆ.

ರಾಜಕೀಯದಲ್ಲೂ ನಟನೆ ಮಾಡಬೇಕಲ್ವಾ?

ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ್ದ ವಿಶೇಷ ಸಂದರ್ಶನದಲ್ಲಿ ರಾಘವ್ ಚಡ್ಡಾ ಅವರು ತಮ್ಮ ಪತ್ನಿಯ ರಾಜಕೀಯ ಎಂಟ್ರಿ ಬಗ್ಗೆ ಅಚ್ಚರಿಯ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಪರಿಣಿತಿ ನಿಮ್ಮ ಜೊತೆ ರಾಜಕೀಯಕ್ಕೆ ಬರ್ತಾರಾ? ಎಂದು ಕೇಳಿದಾಗ ನಕ್ಕ ರಾಘವ್, 'ರಾಜಕೀಯದಲ್ಲೂ ನಟನೆ ಮಾಡಬೇಕಾಗುತ್ತದೆ ಅಲ್ವಾ' ಎಂದು ತಮಾಷೆ ಮಾಡಿ, ನಂತರ ಸದ್ಯಕ್ಕೆ ಪರಿಣಿತಿಗೆ ರಾಜಕೀಯಕ್ಕೆ ಬರುವ ಯಾವುದೇ ಯೋಜನೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಈ ಹಿಂದೆ ಪರಿಣಿತಿ ಕೂಡ ವೈರಲ್ ಆಗಿದ್ದ ಹಳೆಯ ವಿಡಿಯೋವೊಂದರಲ್ಲಿ ರಾಜಕೀಯದ ಬಗ್ಗೆ ಕೇಳಿದಾಗ, ಕೈ ಮುಗಿದು ತನಗೆ ಇದರಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದ್ದರು. ಆದರೂ ನೆಟ್ಟಿಗರು ಮಾತ್ರ, ರಾಘವ್ ಅವರ ಈ ಹೊಸ ಇನ್ನಿಂಗ್ಸ್‌ಗೆ ಪರಿಣಿತಿ ಅವರೇ ಸ್ಟಾರ್ ಪ್ರಚಾರಕಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಆಪ್ ಬಿಟ್ಟು ಬಿಜೆಪಿ ಸೇರಿದ ರಾಘವ್: ಕಾರಣವೇನು?

ಯಾವ ತತ್ವಗಳ ಮೇಲೆ ಆಮ್ ಆದ್ಮಿ ಪಾರ್ಟಿ ಹುಟ್ಟಿಕೊಂಡಿತ್ತೋ, ಆ ಮೌಲ್ಯಗಳಿಂದ ಅದು ಈಗ ಮೈಲುಗಳಷ್ಟು ದೂರ ಸರಿದಿದೆ. ಅದಕ್ಕೇ ನಾನು ಭಾರವಾದ ಹೃದಯದಿಂದ ಹೊರಬಂದಿದ್ದೇನೆ, ಎಂದು ರಾಘವ್ ಚಡ್ಡಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ, ಹರ್ಭಜನ್ ಸಿಂಗ್ ಮತ್ತು ಸ್ವಾತಿ ಮಲಿವಾಲ್ ಅವರಂತಹ ಪ್ರಮುಖ ನಾಯಕರನ್ನು ಒಳಗೊಂಡ ಎಎಪಿಯ ರಾಜ್ಯಸಭಾ ಸಂಸದರಲ್ಲಿ ಮೂರನೇ ಎರಡರಷ್ಟು ಮಂದಿ ಈಗ ಬಿಜೆಪಿಯೊಂದಿಗೆ ವಿಲೀನವಾಗಿದ್ದಾರೆ.

ಮುಂದೇನು?

ಸದ್ಯಕ್ಕೆ ಪರಿಣಿತಿ ಚೋಪ್ರಾ ಅವರು ತಮ್ಮ ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರೆ, ಇತ್ತ ರಾಘವ್ ಚಡ್ಡಾ ಬಿಜೆಪಿಯಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸಿನಿಮಾ ಮತ್ತು ರಾಜಕೀಯದ ಈ ಕಾಂಬಿನೇಷನ್ ಈಗ ದೇಶದ ಗಮನ ಸೆಳೆಯುತ್ತಿದೆ. ರಾಘವ್ ಅವರ ಚುನಾವಣಾ ರ್ಯಾಲಿಗಳಲ್ಲಿ ಪರಿಣಿತಿ ಗ್ಲಾಮರ್ ಟಚ್ ನೀಡುತ್ತಾರಾ? ಅಥವಾ ತೆರೆಯ ಹಿಂದೆ ನಿಂತು ಪತಿಗೆ ಶಕ್ತಿ ತುಂಬುತ್ತಾರಾ? ಅನ್ನೋದನ್ನ ಕಾದು ನೋಡಬೇಕಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net