ಪಾಕಿಸ್ತಾನದ ಮೇಲೆ ಅವರ ಭಯೋತ್ಪಾದಕರೇ ದಾಳಿ ನಡೆಸುತ್ತಿದ್ದಾರೆ: PoK ಜನರ ಮೇಲಿನ ಹಿಂಸಾಚಾರವನ್ನು ಭಾರತ ಎಂದಿಗೂ ಸಹಿಸಲ್ಲ; ರಣಧೀರ್​ ಜೈಸ್ವಾಲ್​ ಸ್ಪಷ್ಟನೆ! Randhir Jaiswal on Pakistan Brutality

ಪಿಒಕೆ ಜನರ ಮೇಲಿನ ಪಾಕಿಸ್ತಾನದ ದಾಳಿಯನ್ನು ಖಂಡಿಸಿದ ವಿದೇಶಾಂಗ ಅಸಚಿವಾಲಯ ವಕ್ತಾರ ರಣಧೀರ್​ ಜೈಸ್ವಾಲ್​
ಪಿಒಕೆ ಜನರ ಮೇಲಿನ ಪಾಕಿಸ್ತಾನದ ದಾಳಿಯನ್ನು ಖಂಡಿಸಿದ ವಿದೇಶಾಂಗ ಅಸಚಿವಾಲಯ ವಕ್ತಾರ ರಣಧೀರ್​ ಜೈಸ್ವಾಲ್​
Published on
ನವದೆಹಲಿ: ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ (ಪಿಒಜೆಕೆ) ಪಾಕಿಸ್ತಾನ ಸರ್ಕಾರ ಹಾಗೂ ಸೇನೆಯು ನಡೆಸುತ್ತಿರುವ ದೌರ್ಜನ್ಯಗಳು ಮಿತಿಮೀರಿದ್ದು, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ನಿರಾಯುಧ ನಾಗರಿಕರ ಮೇಲೆ ಪಾಕ್ ಪಡೆಗಳು ನಡೆಸಿದ ಸರಣಿ ದಾಳಿಯನ್ನು ಭಾರತದ ವಿದೇಶಾಂಗ ಇಲಾಖೆ (Randhir Jaiswal on Pakistan Brutality) ಖಂಡಿಸಿದೆ.
ಕಳೆದ 51 ದಿನಗಳಿಂದ ಈ ಪ್ರದೇಶದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಇಸ್ಲಾಮಾಬಾದ್ ಸರ್ಕಾರದ ದಮನಕಾರಿ ನೀತಿಯ ವಿರುದ್ಧ ಜಾಗತಿಕ ಮಟ್ಟದಲ್ಲಿ ಭಾರತ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಅಂತಾರಾಷ್ಟ್ರೀಯ ಸಮುದಾಯದ ಗಮನಸೆಳೆದ ಭಾರತ

ಪಿಒಕೆಯಲ್ಲಿ ನಡೆಯುತ್ತಿರುವ ಈ ಅಮಾನವೀಯ ಹತ್ಯಾಕಾಂಡವನ್ನು ಭಾರತ ಸರ್ಕಾರ ಅತ್ಯಂತ ತೀವ್ರವಾಗಿ ಖಂಡಿಸಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಪಾಕಿಸ್ತಾನಿ ಆಡಳಿತವು ತನ್ನದೇ ಪ್ರಜೆಗಳ ಮೇಲೆ ಸೇನಾ ಬಲವನ್ನು ಪ್ರಯೋಗಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕ್ ಪಡೆಗಳ ಈ ನರಮೇಧದಲ್ಲಿ ಈಗಾಗಲೇ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅನೇಕರು ಗಂಭೀರ ಗಾಯಗೊಂಡಿದ್ದಾರೆ. ಪಿಒಕೆ ಜನರ ಬಗ್ಗೆ ಪಾಕಿಸ್ತಾನಕ್ಕೆ ಯಾವುದೇ ಕಾಳಜಿಯಿಲ್ಲ ಎಂಬುದಕ್ಕೆ ಇದು ಸ್ಪಷ್ಟ ಸಾಕ್ಷಿಯಾಗಿದೆ ಎಂದಿರುವ ಭಾರತ, ಈ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವಂತೆ ಹಾಗೂ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಒತ್ತಾಯ ಮಾಡಿದೆ.
51 ದಿನಗಳನ್ನು ದಾಟಿದ ಪ್ರತಿಭಟನೆ!
ಸತತ 51 ದಿನಗಳಿಂದ ಮುಂದುವರಿದಿರುವ ಈ ಪ್ರತಿಭಟನೆಯಲ್ಲಿ ಪಾಕಿಸ್ತಾನಿ ರೇಂಜರ್‌ಗಳು ಮತ್ತು ಫ್ರಾಂಟಿಯರ್ ಕಾರ್ಪ್ಸ್ ಸಿಬ್ಬಂದಿ ನಿರಾಯುಧ ಜನರ ಮೇಲೆ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದ್ದಾರೆ. ವಿಶೇಷವಾಗಿ ರಾವಲಕೋಟ್‌ನ ಚಿನಾರ್ ಚೌಕ್‌ನಲ್ಲಿ ನೆರೆದಿದ್ದ ಬೃಹತ್ ಜನಸಾಗರದ ಮೇಲೆ ಭದ್ರತಾ ಪಡೆಗಳು ಸುಮಾರು ಒಂದು ಗಂಟೆಗಳ ಕಾಲ ಗುಂಡಿನ ಮಳೆ ಸುರಿಸಿದ್ದಾರೆ.
ಇದರ ಪರಿಣಾಮವಾಗಿ ರಾವಲಕೋಟ್ ಮತ್ತು ಮಿರ್ಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮಿಲಿಟರಿ ದೌರ್ಜನ್ಯದ ಹೊರತಾಗಿಯೂ ಸುಮಾರು ಎರಡು ಲಕ್ಷಕ್ಕೂ ಅಧಿಕ ಜನರು ಡಿ-ಚೌಕ್‌ನಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ಮನೆಗಳಿಗೆ ನುಗ್ಗಿ ಹಲ್ಲೆ!

ಕೇವಲ ಬೀದಿಗಳಲ್ಲಿ ಮಾತ್ರವಲ್ಲದೆ, ಕೋಟ್ಲಿ ಸೇರಿದಂತೆ ಹಲವು ಪಟ್ಟಣಗಳಲ್ಲಿ ಪಾಕಿಸ್ತಾನಿ ರೇಂಜರ್‌ಗಳು ನೇರವಾಗಿ ಜನರ ಮನೆಗಳಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಮಹಿಳೆಯರ ಶಾಂತಿಯುತ ಪ್ರತಿಭಟನೆಯನ್ನು ಚದುರಿಸಲು ವೈಮಾನಿಕ ಗುಂಡಿನ ದಾಳಿ ನಡೆಸಲಾಗಿದೆ. ಅಷ್ಟೇ ಅಲ್ಲದೆ, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಮತ್ತು ತುರ್ತು ನೆರವು ನೀಡಲು ತೆರಳುತ್ತಿದ್ದ ಖಾಸಗಿ ಆಂಬ್ಯುಲೆನ್ಸ್‌ಗಳ ಮೇಲೂ ಗುಂಡಿನ ದಾಳಿ ನಡೆಸಿರುವುದು ಪಾಕ್ ಪಡೆಗಳ ಕ್ರೌರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಪ್ರತಿಭಟನಾಕಾರರನ್ನು ಪಾಕಿಸ್ತಾನದ ರಕ್ಷಣಾ ಸಚಿವರು ಶತ್ರುಗಳು ಎಂದು ಕರೆದಿರುವುದು ಅಲ್ಲಿನ ಜನರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ತಾವು ತರಬೇತಿ ನೀಡಿ, ಶಸ್ತ್ರಸಜ್ಜಿತರನ್ನಾಗಿ ಮಾಡಿದ ಉಗ್ರರೇ ಈಗ ತಮ್ಮ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದು ಪಾಕ್ ನಾಯಕರು ಒಪ್ಪಿಕೊಳ್ಳುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

ಚುನಾವಣಾ ಬಹಿಷ್ಕಾರಕ್ಕೆ ಕರೆ!

ಪಾಕಿಸ್ತಾನ ಆಡಳಿತ ನಡೆಸಲು ಹೊರಟಿರುವ ಚುನಾವಣೆಯನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಅವಾಮಿ ಕ್ರಿಯಾ ಸಮಿತಿ ಸ್ಪಷ್ಟಪಡಿಸಿದೆ. ಆಗಸ್ಟ್ 2 ರಂದು ನಿಗದಿಯಾಗಿರುವ ಚುನಾವಣೆಯ ಎರಡನೇ ಹಂತವನ್ನು ಸಂಪೂರ್ಣವಾಗಿ ಬಹಿಷ್ಕರಿಸಲು ನಿರ್ಧರಿಸಲಾಗಿದೆ. ಪ್ರತಿಭಟನೆಯಲ್ಲಿ ಹತ್ಯೆಯಾದವರ ಅಂತ್ಯಕ್ರಿಯೆ ವೇಳೆ ಪಾಕಿಸ್ತಾನ ಪರ ರಾಜಕೀಯ ಪಕ್ಷಗಳ ನಾಯಕರು ಅಥವಾ ಅಭ್ಯರ್ಥಿಗಳು ಭಾಗವಹಿಸಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜನತೆ ಎಚ್ಚರಿಕೆ ನೀಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net