ಎಂಡೊಮೆಟ್ರಿಯಾಸಿಸ್‌ನ ಪ್ರಮುಖ ಲಕ್ಷಣವೆಂದರೆ ಮುಟ್ಟಿನ ಸಮಯದಲ್ಲಿ ಉಂಟಾಗುವ ಅಸಹನೀಯ ಸೊಂಟ ಮತ್ತು ಹೊಟ್ಟೆಯ ನೋವು. ಇದರೊಂದಿಗೆ ಲೈಂಗಿಕ ಸಂಪರ್ಕದ ಸಮಯದಲ್ಲಿ ನೋವು, ಮಲವಿಸರ್ಜನೆ ಅಥವಾ ಮೂತ್ರ ವಿಸರ್ಜನೆಯ ವೇಳೆ ತೊಂದರೆ, ಅತಿಯಾದ ರಕ್ತಸ್ರಾವ ಮತ್ತು ನಿರಂತರ ಆಯಾಸ ಕಂಡುಬರಬಹುದು. ಅನೇಕ ಮಹಿಳೆಯರಲ್ಲಿ ಇದು ಬಂಜೆತನಕ್ಕೆ ಪ್ರಮುಖ ಕಾರಣವಾಗುತ್ತದೆ. ಈ ಕಾಯಿಲೆಗೆ ನಿಖರವಾದ ಕಾರಣಗಳು ಇನ್ನು ಪೂರ್ಣವಾಗಿ ತಿಳಿದುಬಂದಿಲ್ಲವಾದರೂ, ಹಾರ್ಮೋನ್‌ಗಳ ಏರುಪೇರು, ಆನುವಂಶಿಕತೆ ಮತ್ತು ರೋಗನಿರೋಧಕ ಶಕ್ತಿಯ ಸಮಸ್ಯೆಗಳು ಇದಕ್ಕೆ ಕಾರಣವೆಂದು ಹೇಳಲಾಗುತ್ತದೆ.