ಖಾಕಿ ಧರಿಸಿ ಬಂದ ನಕಲಿ ಸಬ್​ ಇನ್ಸ್​ಪೆಕ್ಟರ್​​: ಯಾವ ಸ್ಟೇಷನ್​ ಕೇಳಿದರೆ ನೋ ಆನ್ಸರ್​; ಅಸಲಿ ಪೊಲೀಸರಿಂದ ಅರೆಸ್ಟ್​! Fake Sub Inspector

ಮಿರ್ಜಾಪುರ ನಕಲಿ ಸಬ್ ಇನ್ಸ್‌ಪೆಕ್ಟರ್ ಬಂಧನ
ಮಿರ್ಜಾಪುರ ನಕಲಿ ಸಬ್ ಇನ್ಸ್‌ಪೆಕ್ಟರ್ ಬಂಧನ
Published on
ಮಿರ್ಜಾಪುರ್​​: ತಲೆಗೊಂದು ಪೊಲೀಸ್ ಕ್ಯಾಪ್, ಮೈಮೇಲೆ ಖಾಕಿ ಯೂನಿಫಾರ್ಮ್, ಹೆಗಲ ಮೇಲೊಂದು ಸ್ಟಾರ್. ಇವೆಲ್ಲಾ ಧರಿಸಿ ರೆಡಿಯಾಗಿ ಬಂದ ವ್ಯಕ್ತಿಯೊಬ್ಬ ಕಲೆಕ್ಟರೇಟ್ ಆವರಣದಲ್ಲಿ ಫುಲ್ ರೌಂಡ್ಸ್ ಹೊಡೆಯುತ್ತಿದ್ದ. ಗತ್ತಿನಿಂದ ಓಡಾಡುತ್ತಿದ್ದ ಈತನನ್ನು ನೋಡಿ ಜನ ನಿಜವಾದ ಪೊಲೀಸ್ ಎಂದೇ ಅಂದುಕೊಂಡಿದ್ದರು.
ಆದರೆ, ಕಥೆಯಲ್ಲಿ ಅಸಲಿ ಟ್ವಿಸ್ಟ್ ಸಿಕ್ಕಿದ್ದೇ ಬೇರೆ! ಈ ಒನ್ ಸ್ಟಾರ್ ಸಿಂಗಂ ಅಸಲಿಗೆ ಅಸಲಿ ಪೊಲೀಸೇ ಅಲ್ಲ, ಬದಲಿಗೆ ಪಕ್ಕಾ ನಕಲಿ ಸಾಹೇಬ (Fake Sub Inspector) ಎಂಬುದು ಬಯಲಾಗಿದೆ. ಇಂತಹದ್ದೊಂದು ಸಿನಿಮಾ ಶೈಲಿಯ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಬುಧವಾರ (ಜೂ.17) ಬೆಳಕಿಗೆ ಬಂದಿದೆ.
ಕಲೆಕ್ಟರೇಟ್ ಆವರಣದಲ್ಲಿ ಸಬ್‌ಇನ್ಸ್‌ಪೆಕ್ಟರ್ ಸೋಗಿನಲ್ಲಿ ಬಿಲ್ಡಪ್ ಕೊಡುತ್ತಾ ಸಿಕ್ಕಿಬಿದ್ದ ಈ ಅಸಾಮಿಯನ್ನು ಪ್ರಯಾಗ್‌ರಾಜ್ ನಿವಾಸಿ ಶಿವಲಾಲ್ ಪಾಲ್ ಎಂದು ಗುರುತಿಸಲಾಗಿದೆ. ಸದ್ಯ ಈ ನಕಲಿ ಪೊಲೀಸ್‌ನ ಖೆಡ್ಡಾಕ್ಕೆ ಕೆಡವಿದ ಅಸಲಿ ಪೊಲೀಸರು ಆತನಿಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

ಸಿಕ್ಕಿಬಿದ್ದಿದ್ದು ಹೇಗೆ?

ಬುಧವಾರ (ಜೂ.17) ಮಿರ್ಜಾಪುರ ಜಿಲ್ಲೆಯ ಕಲೆಕ್ಟರೇಟ್ ಕಚೇರಿಯ ಬಳಿ ಈ ಶಿವಲಾಲ್ ಪಾಲ್ ಪೊಲೀಸ್ ಸಮವಸ್ತ್ರ ಧರಿಸಿ ಅಡ್ಡಾಡುತ್ತಿದ್ದ. ಆದರೆ, ಈತನ ನಡವಳಿಕೆ ಅಲ್ಲಿನ ಜನರಿಗೆ ಸ್ವಲ್ಪ ವಿಚಿತ್ರವಾಗಿ ಕಂಡಿದೆ. ಖಾಕಿ ಬಟ್ಟೆ ಹಾಕಿದ್ದರೂ ಪೊಲೀಸ್ ಕಳೆ ಇರಲಿಲ್ಲ, ಜೊತೆಗೆ ಸುತ್ತಮುತ್ತಲಿನವರನ್ನು ನೋಡುವಾಗ ಆತನ ಕಣ್ಣುಗಳಲ್ಲಿ ಒಂದು ರೀತಿಯ ಭಯ ಕಾಣಿಸುತ್ತಿತ್ತು. ಇದನ್ನು ಗಮನಿಸಿದ ಕೆಲವರು ಸುಮ್ಮನೆ ಇರಲಾರದೆ, ಯಾವ ಸ್ಟೇಷನ್ ಸಾರ್ ನಿಮ್ಮದು? ಎಲ್ಲಿ ಪೋಸ್ಟಿಂಗ್ ಆಗಿದೆ? ಎಂದು ಮಾತಾಡಿಸಲು ಹೋಗಿದ್ದಾರೆ.
ಅಷ್ಟಕ್ಕೆ ನಮ್ಮ ನಕಲಿ ಸಬ್‌ಇನ್ಸ್‌ಪೆಕ್ಟರ್ ಸಾಹೇಬರಿಗೆ ಬೆವರು ಇಳಿದಿದೆ! ಕೇಳಿದ ಬೇಸಿಕ್ ಪ್ರಶ್ನೆಗಳಿಗೂ ಉತ್ತರಿಸಲಾಗದೆ ತಡಬಡಾಯಿಸಿದ್ದಾನೆ. ಇದರಿಂದ ಅನುಮಾನಗೊಂಡ ಸಾರ್ವಜನಿಕರು ತಕ್ಷಣವೇ ನಿಜವಾದ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.

ಲೇಡಿ ಪೊಲೀಸ್ ಸ್ಟೇಷನ್‌ಗೆ ಬಂದಿದ್ದೀನಿ ಅಂದ ನಕಲಿ ಸಾಹೇಬ!

ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಸಲಿ ಪೊಲೀಸರು ಶಿವಲಾಲ್ ಪಾಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಸಲಿ ಪೊಲೀಸರು ಪ್ರಶ್ನೆ ಮಾಡಲು ಶುರುವಾಗಿದ್ದೆ,ನಾನು ಮಹಿಳಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಬಂದಿದ್ದೇನೆ ಎಂದು ಕಟ್ಟುಕಥೆ ಹೇಳಿದ್ದಾನೆ.
ಆದರೆ, ಪೊಲೀಸರು ಹಾಗಾದರೆ ನಿನ್ನ ಅಪಾಯಿಂಟ್‌ಮೆಂಟ್ ಲೆಟರ್ ತೋರಿಸು, ಐಡಿ ಕಾರ್ಡ್ ಎಲ್ಲಿದೆ? ಎಂದು ಕೇಳಿದಾಗ ಈತನ ಹತ್ತಿರ ಯಾವುದೇ ಕಾಗದ ಪತ್ರ ಇರಲಿಲ್ಲ. ಕೊನೆಗೆ ತಾನು ನಕಲಿ ಎಂಬುದನ್ನು ಒಪ್ಪಿಕೊಂಡಿದ್ದಾನೆ.

ಅಸಲಿ ಪ್ಲಾನ್ ಏನಿತ್ತು?

ಕೇವಲ ಒಂದು ಸ್ಟಾರ್ ಹಾಕಿಕೊಂಡು ಸಬ್‌ಇನ್ಸ್‌ಪೆಕ್ಟರ್ ಎಂದು ಪೋಸ್ ಕೊಟ್ಟಿದ್ದ ಈ ನಕಲಿ ಆಸಾಮಿಯನ್ನು ಮಿರ್ಜಾಪುರ ಪೊಲೀಸರು ಕಲೆಕ್ಟರೇಟ್ ಆವರಣದಲ್ಲೇ ಅರೆಸ್ಟ್ ಮಾಡಿದ್ದಾರೆ. ಆದರೆ, ಈತ ಕೇವಲ ಬಿಲ್ಡಪ್ ಕೊಡುವುದಕ್ಕಾಗಿ ಖಾಕಿ ಧರಿಸಿದ್ದನಾ? ಅಥವಾ ಕಲೆಕ್ಟರೇಟ್‌ನಂತಹ ಕಟ್ಟುನಿಟ್ಟಿನ ಜಾಗಕ್ಕೆ ನುಗ್ಗಿ ಯಾರಿಗಾದರೂ ವಂಚನೆ ಮಾಡಲು ಸ್ಕೆಚ್ ಹಾಕಿದ್ದನಾ? ಎಂಬುದು ಸದ್ಯಕ್ಕೆ ಯಕ್ಷಪ್ರಶ್ನೆಯಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net