ಟೆಲಿಗ್ರಾಮ್ ಒಂದು ಡಾರ್ಕ್ ವೆಬ್... ಇಲ್ಲಿ ಭಯೋತ್ಪಾದಕರು ಸಂವಹನ ನಡೆಸುತ್ತಾರೆ; ಸರ್ಕಾರದ ನಿರ್ಧಾರ ಸರಿಯಿದೆ: ಸಾಲಿಸಿಟರಿ ಜನರಲ್​ | Telegram Ban Case

ನೀಟ್ ಯುಜಿ ಮರು ಪರೀಕ್ಷೆ ಹಿನ್ನೆಲೆ ಟೆಲಿಗ್ರಾಮ್ ನಿಷೇಧ
ನೀಟ್ ಯುಜಿ ಮರು ಪರೀಕ್ಷೆ ಹಿನ್ನೆಲೆ ಟೆಲಿಗ್ರಾಮ್ ನಿಷೇಧ
Published on

ಪ್ರಮುಖ ಮುಖ್ಯಾಂಶಗಳು

  • ನೀಟ್ ಯುಜಿ ಮರು ಪರೀಕ್ಷೆ ಹಿನ್ನೆಲೆ ಟೆಲಿಗ್ರಾಮ್ ನಿಷೇಧ
  • ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಟೆಲಿಗ್ರಾಮ್
  • ಟೆಲಿಗ್ರಾಮ್​ನಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಿದೆ: ಸಾಲಿಸಿಟರಿ ಜನರಲ್​
ನವದೆಹಲಿ: ಜೂನ್​ 21 ರಂದು ದೇಶದಾದ್ಯಂತ ನೀಟ್​ ಯುಜಿ ಮರು ಪರೀಕ್ಷೆ ನಡೆಯುತ್ತಿರುವ ಹಿನ್ನಲೆ, ಪರೀಕ್ಷೆ ಅಕ್ರಮವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಟೆಲಿಗ್ರಾಮ್​​ (Telegram Ban Case) ಮೇಲೆ ತಾತ್ಕಾಲಿಕ ನಿಷೇಧ ಹೇರಿದೆ.
ಈ ನಿರ್ಬಂಧವನ್ನು ಪ್ರಶ್ನಿಸಿ ಟೆಲಿಗ್ರಾಮ್​​ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದು, ರಜಾ ಕಾಲಿನ ಪೀಠದ ನ್ಯಾಯಮೂರ್ತಿ ತೇಜಸ್ ಕರಿಯಾ ಅವರು ಅರ್ಜಿ ವಿಚಾರಣೆ ನಡೆಸುತ್ತಿದ್ದಾರೆ.

ಟೆಲಿಗ್ರಾಮ್​ನಲ್ಲಿ ಭಯೋತ್ಪಾದಕ ಚಟುವಟಿಕೆ!

ಟೆಲಿಗ್ರಾಮ್​ನಲ್ಲಿ ಭಯೋತ್ಪಾದಕ ಸಂಘಟನೆಗಳ ಸಂವಹನ, ಮಾದಕ ವಸ್ತುಗಳ ಮಾರಾಟ, ಸೈಬರ್​ ಅಪರಾಧ ಹಾಗೂ ವಂಚನೆಗೆ ಸಂಬಂಧಿಸಿದ ಹಲವಾರು ಕೆಟ್ಟ ಕೆಲಸಗಳು ನಡೆದಿರುವ ಹಿನ್ನಲೆ ನಿಷೇಧದ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ಕೇಂದ್ರ ಸರ್ಕಾರದ ಪರ ಸಾಲಿಸಿಟರಿ ಜನರಲ್​ ತುಷಾರ್​ ಮೆಹ್ತಾ ವಾದ ಮಂಡಿಸಿದ್ದಾರೆ.
ಹಾಗೆಯೇ ಈ ಮೊದಲು ನಡೆದಿದ್ದ ನೀಟ್​ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಟೆಲಿಗ್ರಾಮ್​ ಮೂಲಕವೇ ಅತಿ ಹೆಚ್ಚು ಹಂಚಿಕೆಯಾಗಿದ್ದು, ಜೂನ್​ 21 ರಂದು ನಡೆಯಲಿರುವ ಮರು ಪರೀಕ್ಷೆಯಲ್ಲಿ ಈ ಘಟನೆ ಪುನರಾವರ್ತನೆ ಆಗದಿರಲೆಂದು ಜೂನ್​ 22 ರ ವೆರೆಗೆ ಮಾತ್ರ ಈ ನಿಷೇಧವನ್ನು ಹೇರಲಾಗಿದೆ ಎಂದು ತಿಳಿಸಿದ್ದಾರೆ.

ಟೆಲಿಗ್ರಾಮ್​ ನೂತನ ಡಾರ್ಕ್​ ವೆಬ್​!

ಈ ಟೆಲಿಗ್ರಾಮ್​ನಲ್ಲಿ ಕಾನೂನು ಬಾಹಿರ ಹಾಗೂ ಹಲವಾರು ಶಿಕ್ಷರ್ಹ ಅಪರಾಧಗಳು ನಿರಂತರವಾಗಿ ನಡೆಯುತ್ತಿದೆ. ಹಾಗೆಯೇ ಬಂಧನವಾಗಿರುವ ಅಪರಾಧಿಗಳು ಈ ಟೆಲಿಗ್ರಾಮ್​ನ್ನು ಬಳಸುತ್ತಿದ್ದ ಬಗ್ಗೆ ಸಾಕ್ಷಿಗಳಿವೆ. ಹೀಗಾಗಿ ಈ ಟೆಲಿಗ್ರಾಮ್​ ಒಂದು ಬಗೆಯ ಡಾರ್ಕ್​ ವೆಬ್​​ ಎಂದು ಕೇಂದ್ರ ಸರ್ಕಾರ ಅಭಿಪ್ರಾಯ ವ್ಯಕ್ತ ಪಡಿಸಿದೆ.
ಈ ಟೆಲಿಗ್ರಾಮ್​ನಲ್ಲಿ ಮಾದಕ ವಸ್ತುಗಳ ಮಾರಾಟ-ಖರೀದಿ, ಮಕ್ಕಳ ಮಾರಾಟ, ಹಾಗೂ ಭಯೋತ್ಪಾದಕ ಸಂಘಟನೆಗಳು ಸಂವಹನ ಮೂಲವಾಗಿ ಬಳಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಜಾರಿಗೆ ತರಲಿದ್ದೆವೆಂದು ನ್ಯಾಯಪೀಠದ ಮುಂದೆ ತಿಳಿಸಲಾಗಿದೆ.

ಅನುಮಾನದ ಮೇಲೆ ನಿರ್ಬಂಧ ಸೂಕ್ತವಲ್ಲ!

ಭಾರತವೊಂದರಲ್ಲೇ ಸುಮಾರು 15 ಕೋಟಿಗೂ ಹೆಚ್ಚಿನ ಟೆಲಿಗ್ರಾಮ್ ಬಳಕೆದಾರರಿದ್ದಾರೆ. ಕೇವಲ ಸಂಶಯದ ಆಧಾರದ ಮೇಲೆ ಇಡೀ ದೇಶದಲ್ಲೇ ಆ್ಯಪ್ ಬ್ಲಾಕ್ ಮಾಡುವುದು ಎಷ್ಟು ಸರಿ? ಇದು ಸಂವಿಧಾನದ ಆರ್ಟಿಕಲ್ 14ರ ಸಂಪೂರ್ಣ ಉಲ್ಲಂಘನೆ ಎಂದು ಟೆಲಿಗ್ರಾಮ್ ಪರ ವಕೀಲರು ವಾದ ಮಂಡಿಸಿದ್ದಾರೆ.
ಅಷ್ಟೇ ಅಲ್ಲದೆ, ಪರೀಕ್ಷಾ ಮಂಡಳಿಯಾದ NTA (National Testing Agency) ನೀಡುವ ದೂರುಗಳನ್ನು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಉನ್ನತ ಅಧಿಕಾರಿಗಳು ಸರಿಯಾಗಿ ಪರಿಶೀಲಿಸದೆಯೇ ಈ ನಿರ್ಧಾರ ತಗೆದುಕೊಂಡಿದ್ದಾರೆ. ಈಗಾಗಲೇ ಸಮಸ್ಯಾತ್ಮಕ ಎನಿಸಿದ ಚಾನೆಲ್‌ಗಳು ಹಾಗೂ ಗ್ರೂಪ್‌ಗಳನ್ನು ನಾವು ಬ್ಯಾನ್ ಮಾಡಿದ್ದೇವೆ ಎಂದು ಟೆಲಿಗ್ರಾಮ್ ನ್ಯಾಯಾಲಯಕ್ಕೆ ತಿಳಿಸಿದೆ.

ಜೂನ್​ 21 ಕ್ಕೆ ನೀಟ್​ ಮರು ಪರೀಕ್ಷೆ!

ಮೇ 3, 2026 ರಂದು ನಡೆದ ನೀಟ್​ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ, ಈ ಪರೀಕ್ಷೆಯನ್ನು ಜೂನ್​ 21 ಕ್ಕೆ ಮತ್ತೊಂದು ಬಾರಿ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮುಂದಾಗಿದೆ. ಮೇ 3 ರಂದು ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಯಾದ ಸಿಬಿಐ ವಿಚಾರಣೆ ನಡೆಸುತ್ತಿದ್ದು, ಈಗಾಗಲೇ ಹಲವು ಅಧಿಕಾರಿಗಳು ಮತ್ತು ಶಿಕ್ಷಕರನ್ನು ವಶಕ್ಕೆ ಪಡೆದುಕೊಂಡಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net