NEET ಪರೀಕ್ಷೆ ಮುನ್ನ ಟೆಲಿಗ್ರಾಮ್​ ನಿಷೇಧ: ಕೇವಲ ಅನುಮಾನದ ಮೇಲೆ ಆ್ಯಪ್​ ಬ್ಯಾನ್​ ಮಾಡ್ಬೇಡಿ; ಜೂನ್​ 18 ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್​! Telegram Ban

ವಿಚಾರಣೆಯನ್ನು ಜೂನ್ 18ಕ್ಕೆ ಮುಂದೂಡಿದ ಹೈಕೋರ್ಟ್
ವಿಚಾರಣೆಯನ್ನು ಜೂನ್ 18ಕ್ಕೆ ಮುಂದೂಡಿದ ಹೈಕೋರ್ಟ್
Published on

ಪ್ರಮುಖ ಮುಖ್ಯಾಂಶಗಳು

  • NEET-UG ಮರುಪರೀಕ್ಷೆಗೂ ಮುನ್ನ ಭಾರತದಲ್ಲಿ ಟೆಲಿಗ್ರಾಮ್ ಆ್ಯಪ್ ನಿರ್ಬಂಧಿಸಿದ ಕೇಂದ್ರ ಸರ್ಕಾರ
  • ತಕ್ಷಣದ ತಡೆಗೆ ನಿರಾಕರಿಸಿದ ದೆಹಲಿ ಹೈಕೋರ್ಟ್
  • ಅನುಮಾನದ ಮೇಲೆ 15 ಕೋಟಿ ಜನರ ಆ್ಯಪ್ ಬ್ಯಾನ್ ಮಾಡಬೇಡಿ: ಟೆಲಿಗ್ರಾಮ್
  • ವಿಚಾರಣೆಯನ್ನು ಜೂನ್ 18ಕ್ಕೆ ಮುಂದೂಡಿದ ಹೈಕೋರ್ಟ್
ನವದೆಹಲಿ: ಜೂನ್ 21 ರಂದು ದೇಶಾದ್ಯಂತ ನೀಟ್​ ಯುಜಿ ಮರು ಪರೀಕ್ಷೆ ನಡೆಯಲಿದ್ದು, ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಟೆಲಿಗ್ರಾಮ್ (Telegram Ban) ಮೆಸೇಜಿಂಗ್ ಆ್ಯಪ್‌ಗೆ ಬಿಗ್ ಶಾಕ್ ನೀಡಿದೆ. ಪರೀಕ್ಷೆಯಲ್ಲಿ ಅಕ್ರಮ ಅಥವಾ ಪೇಪರ್ ಲೀಕ್ ಆಗುವುದನ್ನು ತಡೆಯುವ ಮುನ್ನೆಚ್ಚರಿಕೆಯಾಗಿ ಕೇಂದ್ರ ಸರ್ಕಾರ ಟೆಲಿಗ್ರಾಮ್ ಆ್ಯಪ್ ಬಳಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ.
ಕೇಂದ್ರ ಸರ್ಕಾರದ ಈ ದಿಢೀರ್ ಆದೇಶವನ್ನು ಪ್ರಶ್ನಿಸಿ ಟೆಲಿಗ್ರಾಮ್ ಸಂಸ್ಥೆ ದೆಹಲಿ ಹೈಕೋರ್ಟ್ ಕದ ತಟ್ಟಿತ್ತಾದರೂ, ನ್ಯಾಯಾಲಯದಿಂದ ಸದ್ಯಕ್ಕೆ ಯಾವುದೇ ತಕ್ಷಣದ ಪರಿಹಾರ ಸಿಕ್ಕಿಲ್ಲ.

ಹೈಕೋರ್ಟ್‌ನಲ್ಲಿ ನಡೆದಿದ್ದೇನು?

ಬುಧವಾರ (ಜೂ.17) ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ರಜಾಕಾಲದ ಪೀಠದ ಮುಂದೆ ಈ ತುರ್ತು ಅರ್ಜಿಯ ವಿಚಾರಣೆ ನಡೆಯಿತು. ಟೆಲಿಗ್ರಾಮ್ ಪರ ವಕೀಲರು ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದರು.
ಭಾರತವೊಂದರಲ್ಲೇ ಸುಮಾರು 15 ಕೋಟಿಗೂ ಹೆಚ್ಚಿನ ಟೆಲಿಗ್ರಾಮ್ ಬಳಕೆದಾರರಿದ್ದಾರೆ. ಕೇವಲ ಸಂಶಯದ ಆಧಾರದ ಮೇಲೆ ಇಡೀ ದೇಶದಲ್ಲೇ ಆ್ಯಪ್ ಬ್ಲಾಕ್ ಮಾಡುವುದು ಎಷ್ಟು ಸರಿ? ಇದು ಸಂವಿಧಾನದ ಆರ್ಟಿಕಲ್ 14ರ ಸಂಪೂರ್ಣ ಉಲ್ಲಂಘನೆ ಎಂದು ವಾದ ಮಂಡಿಸಿದ್ದಾರೆ.
ಅಷ್ಟೇ ಅಲ್ಲದೆ, ಪರೀಕ್ಷಾ ಮಂಡಳಿಯಾದ NTA (National Testing Agency) ನೀಡುವ ದೂರುಗಳನ್ನು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಉನ್ನತ ಅಧಿಕಾರಿಗಳು ಸರಿಯಾಗಿ ಪರಿಶೀಲಿಸದೆಯೇ ಈ ನಿರ್ಧಾರ ತಗೆದುಕೊಂಡಿದ್ದಾರೆ. ಈಗಾಗಲೇ ಸಮಸ್ಯಾತ್ಮಕ ಎನಿಸಿದ ಚಾನೆಲ್‌ಗಳು ಹಾಗೂ ಗ್ರೂಪ್‌ಗಳನ್ನು ನಾವು ಬ್ಯಾನ್ ಮಾಡಿದ್ದೇವೆ ಎಂದು ಟೆಲಿಗ್ರಾಮ್ ನ್ಯಾಯಾಲಯಕ್ಕೆ ತಿಳಿಸಿತು.

ಕೇಂದ್ರ ಸರ್ಕಾರದ ಖಡಕ್ ಕೌಂಟರ್!

ಆದರೆ, ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಟೆಲಿಗ್ರಾಮ್ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದರು. ನಾವು ಮೇ ತಿಂಗಳಿನಿಂದಲೂ ಇವರ ಚಟುವಟಿಕೆಗಳನ್ನು ಗಮನಿಸುತ್ತಿದ್ದೇವೆ.
ಈ ವೇದಿಕೆಯ ವಿರುದ್ಧ ನಮ್ಮ ಬಳಿ ಸಾಕಷ್ಟು ಗಂಭೀರವಾದ ಸಾಕ್ಷ್ಯಾಧಾರಗಳು ಮತ್ತು ಕಳವಳಕಾರಿ ವಿಷಯಗಳಿವೆ. ಪುನರಾವರ್ತಿತ ತಪ್ಪುಗಳು ಹಾಗೂ ದೇಶದ ಭದ್ರತೆ, ಪರೀಕ್ಷೆಗಳ ಗೌಪ್ಯತೆಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿತ್ತು ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ತನ್ನ ವಾದವನ್ನು ಮಂಡಿಸಲು ಸ್ವಲ್ಪ ಸಮಯಾವಕಾಶ ಕೋರಿದ ಹಿನ್ನೆಲೆಯಲ್ಲಿ, ಹೈಕೋರ್ಟ್ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಗುರುವಾರ (ಜೂ. 18) ಮಧ್ಯಾಹ್ನಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಟೆಲಿಗ್ರಾಮ್ ಮೇಲಿನ ನಿರ್ಬಂಧ ಮುಂದುವರಿಯಲಿದೆ ಎಂದು ತಿಳಿಸಿದೆ.

ಈ ಕೇಸ್ ಇಷ್ಟೊಂದು ಸೌಂಡ್ ಮಾಡ್ತಿರೋದು ಯಾಕೆ?

ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಯಾವುದೇ ದೊಡ್ಡ ಪರೀಕ್ಷೆಗಳು ನಡೆದರೂ ಟೆಲಿಗ್ರಾಮ್ ಗ್ರೂಪ್‌ಗಳಲ್ಲಿ ಪೇಪರ್ ಲೀಕ್ ಆಗುವ, ಹಣದ ಆಮಿಷ ಒಡ್ಡಿ ಪ್ರಶ್ನೆ ಪತ್ರಿಕೆ ಮಾರಾಟ ಮಾಡುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಜೂನ್ 21 ರಂದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ನೀಟ್​ ಯುಜಿ ಮರು ಪರೀಕ್ಷೆ ಇರುವುದರಿಂದ, ಸರ್ಕಾರ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ. ಆನ್‌ಲೈನ್ ದುರುಪಯೋಗಕ್ಕೆ ಬ್ರೇಕ್ ಹಾಕಲು ಸರ್ಕಾರ ಈ ಮಾಸ್ಟರ್ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ.

ಜೂನ್​ 21 ಕ್ಕೆ ನೀಟ್​ ಮರು ಪರೀಕ್ಷೆ!

ಮೇ 3, 2026 ರಂದು ನಡೆದ ನೀಟ್​ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ, ಈ ಪರೀಕ್ಷೆಯನ್ನು ಜೂನ್​ 21 ಕ್ಕೆ ಮತ್ತೊಂದು ಬಾರಿ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮುಂದಾಗಿದೆ. ಮೇ 3 ರಂದು ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಯಾದ ಸಿಬಿಐ ವಿಚಾರಣೆ ನಡೆಸುತ್ತಿದ್ದು, ಈಗಾಗಲೇ ಹಲವು ಅಧಿಕಾರಿಗಳು ಮತ್ತು ಶಿಕ್ಷಕರನ್ನು ವಶಕ್ಕೆ ಪಡೆದುಕೊಂಡಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net