ಇರಾಕ್‌ನಲ್ಲಿ ಭ್ರಷ್ಟಾಚಾರದ ಬೇಟೆ! ಮಹಿಳಾ ಸಂಸದೆ ಮನೆಯಲ್ಲಿ ಬೆಟ್ಟದಷ್ಟು ಹಣ-ಹೊನ್ನು ಪತ್ತೆ; ದಾಳಿಯಲ್ಲಿ ಸಿಕ್ಕ ಚಿನ್ನದ ಒಳ ಉಡುಪಿನ ಅಸಲಿಯತ್ತೇನು? Gold Plated Innerwear

ಇರಾಕ್ ಮಹಿಳಾ ಸಂಸದರ ಮನೆಯಲ್ಲಿ 57 ಮಿಲಿಯನ್ ನಗದು ಮತ್ತು 27 ಕೆಜಿ ಚಿನ್ನ ಪತ್ತೆ
ಇರಾಕ್ ಮಹಿಳಾ ಸಂಸದರ ಮನೆಯಲ್ಲಿ 57 ಮಿಲಿಯನ್ ನಗದು ಮತ್ತು 27 ಕೆಜಿ ಚಿನ್ನ ಪತ್ತೆ
Published on

ಪ್ರಮುಖ ಮುಖ್ಯಾಂಶಗಳು

  • ಇರಾಕ್‌ನಲ್ಲಿ ಭ್ರಷ್ಟಾಚಾರ ವಿರೋಧಿ ಬೃಹತ್ ಕಾರ್ಯಾಚರಣೆ
  • ಇರಾಕ್ ಮಹಿಳಾ ಸಂಸದರ ಮನೆಯಲ್ಲಿ 57 ಮಿಲಿಯನ್ ನಗದು ಮತ್ತು 27 ಕೆಜಿ ಚಿನ್ನ ಪತ್ತೆ
  • ವೈರಲ್ ಆಗುತ್ತಿರುವ ಚಿನ್ನದ ಒಳ ಉಡುಪಿನ ಅಸಲಿಯತ್ತೇನು?
ಇರಾಕ್​: ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಇರಾಕ್ ದೇಶದ ಭ್ರಷ್ಟಾಚಾರದ ಕುರಿತಾದ ಸುದ್ದಿಯೊಂದು ಭಾರಿ ಸಂಚಲನ ಸೃಷ್ಟಿಸಿದೆ. ಅಲ್ಲಿನ ಮಹಿಳಾ ಸಂಸದರೊಬ್ಬರ ಮನೆಯಲ್ಲಿ ಬೆಟ್ಟದಷ್ಟು ನಗದು ಮತ್ತು ಬಂಗಾರ ಪತ್ತೆಯಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವುದೇನು?

ಕೆಲವು ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಖಾತೆಗಳ ಪ್ರಕಾರ, ಇರಾಕ್ ಸಂಸದ ಹಿಂದ್ ಅಲ್-ಅಬ್ಬಾಸಿ ಅವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಅವರ ಮನೆಯಲ್ಲಿ ಬರೋಬ್ಬರಿ 57 ಮಿಲಿಯನ್ ಡಾಲರ್ ನಗದು ಮತ್ತು 27 ಕಿಲೋಗ್ರಾಂಗಳಷ್ಟು ಶುದ್ಧ ಚಿನ್ನ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಚಿನ್ನದ ಒಳ ಉಡುಪುಗಳ (Gold Plated Innerwear) ಫೋಟೋವನ್ನು ಲಗತ್ತಿಸಿ, ಇದು ಸಂಸದರ ಮನೆಯಲ್ಲಿ ಸಿಕ್ಕಿದ್ದು ಎಂದು ಜಗತ್ತಿನಾದ್ಯಂತ ಶೇರ್ ಮಾಡಲಾಗುತ್ತಿದೆ.
ಕಾರ್ಯಾಚರಣೆಯಲ್ಲಿ ಸಿಕ್ಕಿದ್ದೇನು?
ಇರಾಕ್‌ನಲ್ಲಿ ಪ್ರಧಾನಿ ಅಲಿ ಅಲ್-ಜೈದಿ ಅವರ ಸರ್ಕಾರವು ಭ್ರಷ್ಟಾಚಾರದ ವಿರುದ್ಧ ಬೃಹತ್ ಬೇಟೆಯನ್ನಂತೂ ಶುರು ಮಾಡಿರುವುದು ನಿಜವಾಗಿದೆ. ಬಾಗ್ದಾದ್ ಸೇರಿದಂತೆ ಹಲವು ಕಡೆ ಮುಂಜಾನೆಯೇ ಭದ್ರತಾ ಪಡೆಗಳು ಮಿಂಚಿನ ದಾಳಿ ನಡೆಸಿವೆ. ಆದರೆ ವೈರಲ್ ಪೋಸ್ಟ್‌ನಲ್ಲಿರುವ ಹೆಸರು ಮತ್ತು ಚಿನ್ನದ ಒಳ ಉಡುಪಿನ ಕಥೆಯ ಹಿಂದೆ ಬೇರೆಯದೇ ಟ್ವಿಸ್ಟ್ ಇದೆ.

47 ಮಂದಿ ಖದೀಮರ ಬಂಧನ

ಈ ಬೃಹತ್ ಆಪರೇಷನ್‌ನಲ್ಲಿ ಕನಿಷ್ಠ 7 ಸಂಸತ್ ಸದಸ್ಯರು ಮತ್ತು ಅನೇಕ ಉನ್ನತ ಮಟ್ಟದ ಅಧಿಕಾರಿಗಳು ಸೇರಿದಂತೆ ಬರೋಬ್ಬರಿ 47 ಶಂಕಿತರನ್ನು ಭದ್ರತಾ ಪಡೆಗಳು ಬಂಧಿಸಿವೆ. ಇವರೆಲ್ಲರ ಮೇಲೆ ಸಾರ್ವಜನಿಕ ನಿಧಿಯ ದುರುಪಯೋಗ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪಗಳಿವೆ.
ವಶಪಡಿಸಿಕೊಂಡ ಆಸ್ತಿ ಎಷ್ಟು?
ಇರಾಕಿ ಹೈ ಜುಡಿಷಿಯಲ್ ಕೌನ್ಸಿಲ್ ನೀಡಿರುವ ಮಾಹಿತಿ ಪ್ರಕಾರ, ಮಾಜಿ ಉಪ ತೈಲ ಸಚಿವರಿಗೆ ಸಂಬಂಧಿಸಿದ ತನಿಖೆಯಲ್ಲಿ ಸುಮಾರು 10 ಮಿಲಿಯನ್ ಡಾಲರ್​​ ನಗದು, 3 ಬಿಲಿಯನ್ ಇರಾಕಿ ದಿನಾರ್‌ಗಳು, ಚಿನ್ನದ ಆಭರಣಗಳು, ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸುಮಾರು 40 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಚಿನ್ನದ ಒಳ ಉಡುಪಿನ ಕಥೆ ನಿಜವೇ?

ಸಂಸತ್ ಸದಸ್ಯೆ ಹಿಂದ್ ಅಲ್-ಅಬ್ಬಾಸಿ ಅವರ ಹೆಸರು ಇರಾಕಿ ಸಂಸತ್ತಿನ ಅಧಿಕೃತ ವೆಬ್‌ಸೈಟ್‌ನಲ್ಲಿದ್ದರೂ, ಅವರ ಮನೆಯಿಂದಲೇ 57 ಮಿಲಿಯನ್ ಡಾಲರ್​ ನಗದು ಮತ್ತು ಚಿನ್ನದ ಒಳ ಉಡುಪು ಸಿಕ್ಕಿದೆ ಎಂಬ ಗಾಸಿಪ್‌ಗೆ ಇರಾಕ್ ಸರ್ಕಾರವಾಗಲಿ ಅಥವಾ ಅಧಿಕೃತ ತನಿಖಾ ಸಂಸ್ಥೆಗಳಾಗಲಿ ಯಾವುದೇ ದೃಢೀಕರಣ ನೀಡಿಲ್ಲ.
ಪ್ರಧಾನಿ ಅಲಿ ಅಲ್-ಜೈದಿ ಖಡಕ್ ವಾರ್ನಿಂಗ್!
ಇರಾಕ್‌ನಲ್ಲಿ ಇತ್ತೀಚಿನ ವರ್ಷಗಳಲ್ಲೇ ನಡೆದ ಅತ್ಯಂತ ಮಹತ್ವದ ಭ್ರಷ್ಟಾಚಾರ ತನಿಖೆ ಇದಾಗಿದೆ. ಈ ಕುರಿತು ಮಾತನಾಡಿರುವ ಪ್ರಧಾನಿ ಅಲಿ ಅಲ್-ಜೈದಿ, ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಯಾವುದೇ ರಾಜಿ ಇಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಈ ತನಿಖೆ ಮುಂದುವರಿಯಲಿದ್ದು, ಮುಂದಿನ ದಿನಗಳಲ್ಲಿ ಇನ್ನು ಹಲವು ಪ್ರಭಾವಿ ವ್ಯಕ್ತಿಗಳು ಕಂಬಿ ಎಣಿಸುವುದು ಗ್ಯಾರಂಟಿ ಎಂಬ ಮುನ್ಸೂಚನೆ ನೀಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net